ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ.2ರಿಂದಲೇ ಗುಲಬರ್ಗಾ ವಿ.ವಿ ಪರೀಕ್ಷೆ

ಬಿ.ಇಡಿ, ಪದವಿ, ಸ್ನಾತಕೋತ್ತರ ಪರೀಕ್ಷೆಗಳಿಗೆ ಸಿದ್ಧತೆ ಪೂರ್ಣ, ಆ. 31ರೊಳಗೆ ಎಲ್ಲ ಫಲಿತಾಂಶ
Last Updated 21 ಜುಲೈ 2021, 6:36 IST
ಅಕ್ಷರ ಗಾತ್ರ

ಕಲಬುರ್ಗಿ: ‘ಗುಲಬರ್ಗಾ ವಿಶ್ವವಿದ್ಯಾಲಯದ ಪದವಿ ಹಾಗೂ ಸ್ನಾತಕೋತ್ತರ ‍ಪರೀಕ್ಷೆಗಳು ಆಗಸ್ಟ್‌ 2ರಿಂದ ಆರಂಭವಾಗಲಿದ್ದು, ಆಗಸ್ಟ್‌ 31ರೊಳಗೆ ಫಲಿತಾಂಶ ನೀಡಲಾಗುವುದು. ಈ ಬಗ್ಗೆ ಬುಧವಾರವೇ ಅಧಿಸೂಚನೆ ಹೊರಡಿಸಲಾಗುವುದು’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ ತಿಳಿಸಿದರು.

‘ಯುಜಿಸಿ ನಿಯಮಾವಳಿ ಪ್ರಕಾರ ಪದವಿ ಹಂತದ 1, 3 ಮತ್ತು 5ನೇ ಸೆಮಿಸ್ಟರ್‌ ಹಾಗೂ ಸ್ನಾತಕೋತ್ತರ ಹಂತದ 1 ಮತ್ತು 3 ನೇ ಸೆಮಿಸ್ಟರ್‌ ಪರೀಕ್ಷೆಗಳನ್ನು ಆ.2ರಿಂದ ಆರಂಭಿಸಲಾಗುತ್ತಿದೆ. ಬಿ.ಎ, ಬಿಎಸ್‌ಸಿ, ಬಿ.ಕಾಂ, ಬಿಸಿಎ, ಬಿಬಿಎಂ ಸೇರಿದಂತೆ ಪದವಿಯ ಎಲ್ಲ ಪರೀಕ್ಷೆಗಳೂ ಏಕಕಾಲಕ್ಕೆ ಶುರುವಾಗಲಿವೆ’ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಅಂತಿಮ ಸೆಮಿಸ್ಟರ್‌ ಪರೀಕ್ಷೆಯೊಂದನ್ನು ಮಾತ್ರ ನಡೆಸಿ, ಉಳಿದೆಲ್ಲ ಪರೀಕ್ಷೆ ಕೈಬಿಡಬೇಕು. ಹಾಗೆಯೇ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ‘ಪ್ರಮೋಟ್’ ಮಾಡಬೇಕು ಎಂದು ವಿಶ್ವವಿದ್ಯಾಲಯಗಳ ವೇತನ ಆಯೋಗ (ಯುಜಿಸಿ) ನಿರ್ದೇಶನ ನೀಡಿದೆ. ಆದರೆ, ಈಗಾಗಲೇ ರಾಜ್ಯದ ಕೆಲವು ವಿ.ವಿ.ಗಳಲ್ಲಿ ಪರೀಕ್ಷೆಗಳು ಮುಗಿದಿದ್ದು, ಮತ್ತೆ ಕೆಲವೆಡೆ ಇನ್ನೂ ನಡೆದಿವೆ. ಉಳಿದವುಗಳಲ್ಲಿ ಇನ್ನೂ ಪ್ರಕ್ರಿಯೆ ಆರಂಭವಾಗಿಲ್ಲ. ಈಗ ಪರೀಕ್ಷೆ ಬರೆದು ಮುಂದಿನ ತರಗತಿಗೆ ಹೋದ ವಿದ್ಯಾರ್ಥಿಗಳಿಗೂ, ಹಾಗೆಯೇ ಪ್ರಮೋಟ್‌ ಆಗುವ ವಿದ್ಯಾರ್ಥಿಗಳಿಗೂ ಭವಿಷ್ಯದಲ್ಲಿ ಗೊಂದಲ ಮೂಡುವ ಸಾಧ್ಯತೆ ಹೆಚ್ಚು. ಹಾಗಾಗಿ, ರಾಜ್ಯದ ಎಲ್ಲ ವಿ.ವಿ.ಗಳು ಏಕರೂಪದ ನಿಯಮ ಪಾಲನೆ ಮಾಡಬೇಕು ಎಂದು ಉನ್ನತ ಶಿಕ್ಷಣ ಪರಿಷತ್‌ ನಿರ್ದೇಶನ ನೀಡಿದೆ. ಅದರಂತೆ ನಮ್ಮಲ್ಲೂ ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ’ ಎಂದರು.

‘ಆದರೆ, 2 ಮತ್ತು 4ನೇ ಸೆಮಿಸ್ಟರ್‌ ಪರೀಕ್ಷೆಗಳನ್ನು ತೆಗೆದುಕೊಳ್ಳದೇ ಹಾಗೆಯೇ ಪಾಸ್‌ ಮಾಡಲಾಗುತ್ತದೆ. 6ನೇ ಸೆಮಿಸ್ಟರ್‌ ಅಂತಿಮ ಪರೀಕ್ಷೆಯಾದ್ದರಿಂದ ಅದನ್ನು ಬರೆಯಲೇಬೇಕಾಗುತ್ತದೆ. ಜತೆಗೆ, 1, 3, 5ನೇ ಸೆಮಿಸ್ಟರ್‌ಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ಬರೆಯಲು ಮತ್ತೊಮ್ಮೆ ಅವಕಾಶ ನೀಡಲಾಗುವುದು. ಅದೇ ರೀತಿ ಸ್ನಾತಕೋತ್ತರ ಪದವಿಯ 2ನೇ ಸೆಮಿಸ್ಟರ್‌ ಪರೀಕ್ಷೆಗಳನ್ನೂ ಬರೆಸದೇ ಮುಂದಕ್ಕೆ ಕಳುಹಿಸಲಾಗುವುದು. ಅಂತಿಮ ಪರೀಕ್ಷೆಗಳನ್ನು ಬರೆಸಲಾಗುತ್ತದೆ’ ಎಂದು ಅವರು ವಿವರಿಸಿದರು.

ಲಸಿಕೆ ಕಡ್ಡಾಯ: ‘ಭೌತಿಕ ತರಗತಿಗೆ ಹಾಜರಾಗಲು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಒಂದು ಡೋಸ್‌ ಆದರೂ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆ ಪಡೆಯದವರಿಗೆ ಪರೀಕ್ಷೆಗೆ ಮಾತ್ರ ಅವಕಾಶ ನೀಡಲಾಗುವುದು. ಆದರೆ, ತರಗತಿಗೆ ಪ್ರವೇಶವಿಲ್ಲ’ ಎಂದು ಹೇಳಿದರು.

‌‘ಈಗಾಗಲೇ ನಾಲ್ಕೂ ಜಿಲ್ಲೆಗಳ ಶೇ 70ರಷ್ಟು ವಿದ್ಯಾರ್ಥಿಗಳು ಹಾಗೂ ಶೇ 90ರಷ್ಟು ಉಪನ್ಯಾಸಕರು ಲಸಿಕೆ ಪಡೆದಿದ್ದಾಗಿ, ಜಿಲ್ಲಾಡಳಿತವು ಅಂಕಿ ಅಂಶ ನೀಡಿದೆ’ ಎಂದೂ ಅವರು ಹೇಳಿದರು.

ವಿ.ವಿ ಕುಲಸಚಿವ ಶರಣಬಸಪ್ಪ ಕೋಟೆಪ್ಪಗೋಳ, ಮೌಲ್ಯಮಾಪನ ಕುಲಸಚಿವ ಸೋನಾರ್ ನಂದಪ್ಪ, ವಿತ್ತಾಧಿಕಾರಿ ಬಿ.ವಿಜಯ ಹಾಗೂ ವಿವಿಧ ನಿಕಾಯಗಳ ಡೀನ್‌ಗಳು ಇದ್ದರು.

ಜುಲೈ 28ರಿಂದ ಬಿ.ಇಡಿ ಪರೀಕ್ಷೆ:‘ಬಿ.ಇಡಿ ಪ‍್ರಶಿಕ್ಷಣಾರ್ಥಿಗಳು ಈಗಾಗಲೇ ತರಗತಿ ಮುಗಿಸಿ ಎರಡು ತಿಂಗಳಾಗಿದೆ. ಹಾಗಾಗಿ, ಅವರ ಪರೀಕ್ಷೆಗಳನ್ನೇ ಮೊದಲು ನಡೆಸಲು ಉದ್ದೇಶಿಸಲಾಗಿದೆ. ಜುಲೈ 28ರಿಂದ ಪರೀಕ್ಷೆ ಆರಂಭಿಸಿ, ಒಂದು ವಾರದಲ್ಲಿ ಮುಗಿಸಲಾಗುವುದು’ ಎಂದು ಪ್ರೊ.ದಯಾನಂದ ಅಗಸರ ತಿಳಿಸಿದರು.

‘ವಿ.ವಿ ವ್ಯಾಪ್ತಿಯ ನಾಲ್ಕೂ ಜಿಲ್ಲೆಗಳ 9,200 ವಿದ್ಯಾರ್ಥಿಗಳು ಈ ಪರೀಕ್ಷೆ ಎದುರಿಸಲಿದ್ದು, 26 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ’ ಎಂದರು.

ಕಾಲೇಜುಗಳಿಗೆ ರಜೆ:‘ಮುಂದಿನ ವಾರದಿಂದ ವಿ.ವಿ. ಪರೀಕ್ಷೆಗಳು ಆರಂಭವಾಗುವ ಕಾರಣ ಜುಲೈ 21ರಿಂದಲೇ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗುವುದು. ರಜೆಯ ಅವಧಿಯಲ್ಲಿಯೇ ಪರೀಕ್ಷೆಗಳನ್ನು ಮುಗಿಸಿಕೊಂಡು, ಫಲಿತಾಂಶವನ್ನೂ ನೀಡಲು ಉದ್ದೇಶಿಸಲಾಗಿದೆ’ ಎಂದು ಕುಲಪತಿ ತಿಳಿಸಿದರು.

‘ಅಕ್ಟೋಬರ್‌ 10ರಿಂದ ಪದವಿಯ ಹೊಸ ಶೈಕ್ಷಣಿಕ ವರ್ಷದ ಚಟುವಟಿಕೆಗಳು ಆರಂಭವಾಗುತ್ತವೆ. ದ್ವಿತೀಯ ಪಿ.ಯು ಫಲಿತಾಂಶ ಕೂಡ ಇಷ್ಟರಲ್ಲೇ ಬರುವ ಕಾರಣ ಪ್ರವೇಶಾತಿಗಳನ್ನೂ ಆರಂಭಿಸಬೇಕಾಗಿದೆ. ಆದರೆ, ಸ್ನಾತಕೋತ್ತರ ತರಗತಿಗಳಿಗೆ ಇನ್ನಷ್ಟು ಸಮಯ ಹಿಡಿಯುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT