ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಮೆಸ್‌ ಬಿಲ್ ಕಟ್ಟದ್ದಕ್ಕೆ ಫಲಿತಾಂಶಕ್ಕೇ ತಡೆ!

ಗುಲಬರ್ಗಾ ವಿಶ್ವವಿದ್ಯಾಲಯ ವಸತಿ ನಿಲಯದ ಅಡುಗೆ ಗುತ್ತಿಗೆದಾರರ ಕೈವಾಡ ಶಂಕೆ
Last Updated 28 ಡಿಸೆಂಬರ್ 2021, 3:58 IST
ಅಕ್ಷರ ಗಾತ್ರ

ಕಲಬುರಗಿ: ಮೆಸ್ ಬಿಲ್ ಕಟ್ಟಿಲ್ಲ ಎಂಬ ಕಾರಣಕ್ಕಾಗಿ ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯವು ಎಂ.ಎಸ್ಸಿ, ಎಂ.ಕಾಂ. ವಿದ್ಯಾರ್ಥಿನಿಯರ ಫಲಿತಾಂಶ ತಡೆಹಿಡಿದಿರುವ ಮತ್ತು ‘ಮೆಸ್ ಬಿಲ್‌ ಕಟ್ಟಿದ್ದೇವೆ’ ಎಂದು ಅಡುಗೆ ಗುತ್ತಿಗೆದಾರರಿಂದ ಬೇಬಾಕಿ ಪ್ರಮಾಣಪತ್ರ ತಂದ ಬಳಿಕವಷ್ಟೇ ಫಲಿತಾಂಶ ಪ್ರಕಟಿಸುತ್ತಿರುವ ಆರೋಪಗಳು ಕೇಳಿಬಂದಿವೆ.

ವಿಶ್ವವಿದ್ಯಾಲಯವು ಅಡುಗೆ ಗುತ್ತಿಗೆದಾರರ ಪ್ರಭಾವಕ್ಕೆ ಮಣಿದಿದ್ದು, ಅವರು ಹೇಳಿದಂತೆ ಕೇಳುತ್ತಿದೆ. ವಾಸ್ತವವಾಗಿ ಬಿಲ್ ಬಾಕಿ ಉಳಿಸಿಕೊಂಡಿದ್ದರೆ ಆ ಮೊತ್ತವನ್ನು ಆಯಾ ವಸತಿ ನಿಲಯದ ವಾರ್ಡನ್‌ಗೆ ಕಟ್ಟಲು ಅವಕಾಶ ನೀಡಬೇಕು. ಆದರೆ, ಅಡುಗೆ ತಯಾರಿಕೆ ಹೊಣೆ ಹೊತ್ತವರ ಬಳಿ ವಿದ್ಯಾರ್ಥಿನಿಯರು ಹೋಗಬೇಕಾಗಿದೆ. ಇದರಿಂದ ಮಾನಸಿಕ ಹಿಂಸೆಯಾಗುತ್ತಿದೆ ಎಂದು ಹಲವು ವಿದ್ಯಾರ್ಥಿನಿಯರು ‘ಪ್ರಜಾವಾಣಿ’ಗೆ ಕರೆ ಮಾಡಿ ದೂರಿದ್ದಾರೆ.

ಅನುಚಿತ ವರ್ತನೆ: ಕೆಲ ತಿಂಗಳ ಹಿಂದೆ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಮೆಸ್‌ ನಡೆಸುತ್ತಿದ್ದ ಗುತ್ತಿಗೆದಾರ ಹಾಗೂ ಆತನ ಸಹಚರರು ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದರು. ಹೀಗಾಗಿ, ವಿ.ವಿ. ಕುಲಪತಿ ಅವರ ಗುತ್ತಿಗೆಯನ್ನು ರದ್ದು ಮಾಡಿದ್ದರು. ಈ ವ್ಯಕ್ತಿ ಜಿಲ್ಲೆಯ ಪ್ರಭಾವಿ ಜನಪ್ರತಿನಿಧಿಯೊಬ್ಬರ ಆಪ್ತ ಎನ್ನಲಾಗಿದ್ದು, ಮತ್ತೆ ಗುತ್ತಿಗೆ ಪಡೆಯಲು ಒತ್ತಡ ಹೇರುತ್ತಿರುವುದಾಗಿ ತಿಳಿದುಬಂದಿದೆ.

ಈ ಕುರಿತು ಅಳಲು ತೋಡಿಕೊಂಡ ಕೆಲ ವಿದ್ಯಾರ್ಥಿನಿಯರು, ’ಗುತ್ತಿಗೆ ಕಳೆದುಕೊಂಡಿದ್ದರಿಂದ ಹೇಗಾದರೂ ಮಾಡಿ ನಮಗೆ ಮಾನಸಿಕ ಹಿಂಸೆ ನೀಡುವ ಉದ್ದೇಶ ಹೊಂದಿದ್ದಾರೆ. ಬೇಬಾಕಿ ಪ್ರಮಾಣಪತ್ರ ತಂದರಷ್ಟೇ ನಮ್ಮ ಫಲಿತಾಂಶವನ್ನು ಹೇಳಬೇಕು ಎಂದು ಪರೀಕ್ಷಾ ವಿಭಾಗದವರ ಮೇಲೆ ಒತ್ತಡ ತಂದಿದ್ದಾರೆ. ಹೀಗಾಗಿ, ಅವರು ವಸತಿ ನಿಲಯಕ್ಕೆ ಬರುವವರೆಗೂ ಕಾಯಬೇಕಾಗಿದೆ. ಬಿಲ್ ಕಟ್ಟಲು ಕರೆ ಮಾಡಿದಾಗ ಅಲ್ಲಿದ್ದೇನೆ, ಇಲ್ಲಿದ್ದೇನೆ ಎಂದು ಹಾರಿಕೆ ಉತ್ತರ ನೀಡುತ್ತಾರೆ. ನಾವು ನೂರಾರು ಕಿ.ಮೀ. ದೂರದಿಂದ ಬಂದರೂ ಇವರಿಗಾಗಿ ಕಾಯಬೇಕಿದೆ. ಒಮ್ಮೊಮ್ಮೆ ಸಂಜೆಯವರೆಗೂ ಕಾಯಿಸುತ್ತಾರೆ’ ಎಂದರು.

ಮತ್ತೋರ್ವ ವಿದ್ಯಾರ್ಥಿನಿ ಮಾತನಾಡಿ, ‘ಬಿಲ್ ಕಟ್ಟಲು ನಾವು ತಯಾರಿದ್ದೇವೆ. ಅದನ್ನು ವಾರ್ಡನ್ ಅವರೇ ವಹಿಸಿಕೊಳ್ಳಬೇಕು. ಮೆಸ್‌ನವರ ಬಳಿ ಏಕೆ ಕಳಿಸುತ್ತಾರೆ ಎಂಬುದು ಗೊತ್ತಾಗುತ್ತಿಲ್ಲ. ಈ ಬಗ್ಗೆ ವಿಭಾಗ ಮುಖ್ಯಸ್ಥರ ಗಮನಕ್ಕೆ ತರಬೇಕು ಎಂದರೆ ಇದೇ ಕಾರಣಕ್ಕೆ ನಮ್ಮ ಫಲಿತಾಂಶ ಕಡಿಮೆಯಾಗಬಹುದು ಎಂಬ ಆತಂಕವೂ ಕಾಡುತ್ತಿದೆ’ ಎಂದು ಹೇಳಿದರು.

ಮೆಸ್‌ ಬಿಲ್ ಕಟ್ಟದವರ ಫಲಿತಾಂಶ ಪ್ರಕಟಿಸದಂತೆ ವಿಶ್ವವಿದ್ಯಾಲಯವು ಸುತ್ತೋಲೆ ಕಳಿಸಿದ್ದನ್ನು ವಿಭಾಗದ ಮುಖ್ಯಸ್ಥರೊಬ್ಬರು ‘ಪ್ರಜಾವಾಣಿ’ಗೆ ಖಚಿತಪಡಿಸಿದರು.

‘ಇಂತಹ ಸುತ್ತೋಲೆ ಹಿಂದೆ ಯಾವಾಗಲೂ ಬಂದಿರಲಿಲ್ಲ. ವಿದ್ಯಾರ್ಥಿಗಳು ಇರುವಾಗಲೇ ಹಾಸ್ಟೆಲ್ ವಾರ್ಡನ್ ಅವರು ಮುತುವರ್ಜಿ ವಹಿಸಿ ಬಿಲ್ ಕಟ್ಟಿಸಿಕೊಳ್ಳಬೇಕಿತ್ತು. ಫಲಿತಾಂಶ ತಡೆ ಹಿಡಿಯುವ ಬದಲು ಅಂಕಪಟ್ಟಿ ತಡೆ ಹಿಡಿಯಬಹುದಾಗಿತ್ತು. ಇಂತಹ ಸುತ್ತೋಲೆ ಹೊರಡಿಸಿದ್ದು ನನಗೂ ಅಚ್ಚರಿಯಾಗಿದೆ’ ಎಂದರು.

ಬಿಲ್ ಕಟ್ಟಲು ರಾಯಚೂರು, ಬೀದರ್, ಬಳ್ಳಾರಿ, ಯಾದಗಿರಿ, ವಿಜಯನಗರ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಕಲಬುರಗಿಗೆ ಬರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT