ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶೈಕ್ಷಣಿಕ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು’

ಗುಲಬರ್ಗಾ ವಿಶ್ವವಿದ್ಯಾಲಯದ 40ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಎ.ಎಂ.ಪಠಾಣ್
Last Updated 10 ಅಕ್ಟೋಬರ್ 2019, 12:38 IST
ಅಕ್ಷರ ಗಾತ್ರ

ಕಲಬುರ್ಗಿ: ಸ್ವಾಯತ್ತ ಶಿಕ್ಷಣ ಸಂಸ್ಥೆಗಳಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು. ಇದರಿಂದ ಸ್ವತಂತ್ರವಾಗಿ ಕೆಲಸ ಮಾಡಲು ಅಡ್ಡಿಯಾಗಲಿದೆ. ರಾಜಕೀಯದ ಜೊತೆಗೆ ಜಾತಿಯೂ ಸೇರಿಕೊಂಡಿರುವುದರಿಂದ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ ಎಂದು ಖಾಜಾ ಬಂದಾನವಾಜ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎ.ಎಂ.ಪಠಾಣ್‌ ಕಳವಳ ವ್ಯಕ್ತಪಡಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದ 40ನೇ ಸಂಸ್ಥಾಪನಾ ದಿನದ ಅಂಗವಾಗಿ ವಿ.ವಿ.ಯ ಡಾ.ಬಿ.ಆರ್‌.ಅಂಬೇಡ್ಕರ್‌ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾಯತ್ತ ಸಂಸ್ಥೆಗಳಲ್ಲಿ ರಾಜಕೀಯ ಹಸ್ತಕ್ಷೇಪದ ಬಗ್ಗೆ ಮದ್ರಾಸ್‌ ಹೈಕೋರ್ಟ್‌ ಅತೃಪ್ತಿ ವ್ಯಕ್ತಪಡಿಸಿದೆ. ಇದರಿಂದ ಶೈಕ್ಷಣಿಕ ವಾತಾವರಣವೇ ನಾಶವಾಗಲಿದೆ. ಹೀಗಾಗದಂತೆ ಇನ್ನು ಮುಂದಾದರೂ ಎಚ್ಚರಿಕೆ ವಹಿಸಬೇಕಿ ಎಂದು ಹೇಳಿದರು.

ದೇಶದಲ್ಲಿರುವ ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯಗಳಲ್ಲಿ ಶೇ 70ರಷ್ಟು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ, ವಿ.ವಿ.ಗಳಲ್ಲಿ ಶೇ 40ರಷ್ಟು ಬೋಧಕ ಸಿಬ್ಬಂದಿ ಕೊರತೆ ಇದೆ. ರಾಜ್ಯ ಸರ್ಕಾರಗಳು ನೀಡುವ ಅಲ್ಪ ಅನುದಾನದಿಂದಾಗಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿಲ್ಲ. ಕಾಯಂ ಬೋಧಕ ಸಿಬ್ಬಂದಿ ಬದಲಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಎಗ್ಗಿಲ್ಲದೇ ನಡೆದಿದೆ. ಇದರಿಂದಾಗಿ ಶಿಕ್ಷಣದ ಗುಣಮಟ್ಟವೇ ಕುಸಿಯಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.‌

ದೇಶದಲ್ಲಿ 399 ಸರ್ಕಾರಿ ವಿಶ್ವವಿದ್ಯಾಲಯಗಳಿದ್ದು, 344 ಖಾಸಗಿ ವಿಶ್ವವಿದ್ಯಾಲಯಗಳಿವೆ. 126 ಡೀಮ್ಡ್‌ ವಿಶ್ವವಿದ್ಯಾಲಯಗಳಿವೆ. 95 ರಾಷ್ಟ್ರೀಯ ಮಹತ್ವದ ಉನ್ನತ ಶಿಕ್ಷಣ ಸಂಸ್ಥೆಗಳಿವೆ. ಇವುಗಳ ಪೈಕಿ ಸರ್ಕಾರ ನಡೆಸುತ್ತಿರುವ ವಿಶ್ವವಿದ್ಯಾಲಯಗಳಲ್ಲಿ ನಿಯಂತ್ರಣ ಹೆಚ್ಚಿದೆ. ಇದು ಒಮ್ಮೊಮ್ಮೆ ಶೈಕ್ಷಣಿಕ ಗುಣಮಟ್ಟ ಕುಸಿಯಲೂ ಕಾರಣವಾಗುತ್ತದೆ. ಅತಿಯಾದ ನಿಯಂತ್ರಣವೂ ಒಳ್ಳೆಯದಲ್ಲ ಎಂದು ಹೇಳಿದರು. ಒಟ್ಟಾರೆ ಶೇ 40ರಷ್ಟು ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಖಾಸಗಿ ಅಥವಾ ಡೀಮ್ಡ್‌ ವಿ.ವಿ.ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಪಠಾಣ್‌ ವಿವರಿಸಿದರು.

ಹಂಗಾಮಿ ಕುಲಪತಿ ಪ್ರೊ.ಪರಿಮಳಾ ಅಂಬೇಕರ್‌ ಅಧ್ಯಕ್ಷೀಯ ಮಾತುಗಳನ್ನಾಡಿದರು.

ಇದಕ್ಕೂ ಮುನ್ನ ವಿಶ್ವವಿದ್ಯಾಲಯದಿಂದ ಸೇವಾ ನಿವೃತ್ತಿ ಹೊಂದಿದ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥೆಯಾಗಿದ್ದ ಡಾ.ಜಯಶ್ರೀ ದಂಡೆ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ವಿದೇಶಗಳಲ್ಲಿ ಪ್ರಬಂಧ ಮಂಡಿಸಿದ ಹಾಗೂ ಸಂಶೋಧನೆಯಲ್ಲಿ ಸಾಧನೆ ಮಾಡಿದ ಡಾ.ಎಸ್‌.ಎನ್‌.ಗಾಯಕವಾಡ, ಡಾ.ಜಿ.ಎಂ.ವಿದ್ಯಾಸಾಗರ, ಡಾ.ದಯಾನಂದ ಅಗಸರ, ಡಾ.ಎಂ.ಬಿ.ಸುಲೋಚನಾ, ಡಾ.ಆನಂದ ನಾಯಕ, ಪ್ರೊ.ಜಿ.ಶ್ರೀರಾಮುಲು, ಪ್ರೊ.ವಿ.ಟಿ.ಕಾಂಬಳೆ, ಪ್ರೊ.ಎಚ್‌.ಟಿ.ಪೋತೆ, ಡಾ.ಹಣಮಂತ ಜಂಗೆ, ಡಾ.ಎಂ.ಎಸ್‌.ಪಾಸೋಡಿ, ಪ್ರೊ.ಅಮಲಪ್ಪ ಹೊಸಮನಿ, ಪ್ರೊ.ರಾಜನಾಳಕರ ಲಕ್ಷ್ಮಣ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT