ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಜ ಬಬಲಾದ: ನೀರಿನ ಸಮಸ್ಯೆ ಉಲ್ಬಣ

Last Updated 6 ಮೇ 2020, 3:17 IST
ಅಕ್ಷರ ಗಾತ್ರ

ಆಳಂದ: ತಾಲ್ಲೂಕಿನ ಗುಂಜ ಬಬಲಾದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ದಿನವಿಡೀ ಪರದಾಡುವ ಪರಿಸ್ಥಿತಿ ಇದೆ. ಮುಖ್ಯವಾಗಿ ಮಹಿಳೆಯರು ಹೆಚ್ಚಿನ ತೊಂದರೆ ಎದುರಿಸುತ್ತಿದ್ದಾರೆ. ಅಸಮರ್ಪಕ ಸರಬರಾಜು ವ್ಯವಸ್ಥೆಯಿಂದ ಜನರಲ್ಲಿ ಆಕ್ರೋಶ ಹೆಚ್ಚುತ್ತಿದೆ.

ಬೋಧನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಕಲಬುರ್ಗಿ ಗ್ರಾಮೀಣ ಮತಕ್ಷೇತ್ರಕ್ಕೆ ಸೇರಿದ ಈ ಗ್ರಾಮದ ನೀರಿನ ಸಮಸ್ಯೆ ಬಗೆಹರಿಸಲು ಜನಪ್ರತಿನಿಧಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬುದು ಜನರ ಆಪಾದನೆಯಾಗಿದೆ.

ಗ್ರಾಮದಲ್ಲಿನ ಕೊಳವೆ ಬಾವಿ, ಬಾವಿಯ ಅಂತರ್ಜಲ ಮಟ್ಟವು ಸಂಪೂರ್ಣ ಕುಸಿದಿದೆ. ಈ ಗ್ರಾಮದಿಂದ 2 ಕಿ.ಮೀ ದೂರದಲ್ಲಿ ಮೂರು ಕೊಳವೆ ಬಾವಿ ಹಾಕಿ ಅಲ್ಲಿಂದ ಗ್ರಾಮದಲ್ಲಿನ ಟ್ಯಾಂಕ್, ಬಾವಿಗೆ ನೀರು ಭರ್ತಿ ಮಾಡಲಾಗುತ್ತದೆ. ಆದರೆ ಗ್ರಾಮದಲ್ಲಿನ ನಲ್ಲಿ ವ್ಯವಸ್ಥೆ ಅಸಮರ್ಪಕವಾಗಿರುವ ಕಾರಣ ಗ್ರಾಮದ ಅರ್ಧ ಭಾಗದಲ್ಲಿನ ಮನೆಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. ಉಳಿದೆಡೆ ಮೂರು ದಿನಕ್ಕೊಮ್ಮೆ ಮಾತ್ರ ನೀರು ಪೂರೈಕೆ ಆಗುತ್ತಿದೆ.

ಮುಖ್ಯವಾಗಿ ಹನುಮಾನ ದೇವಸ್ಥಾನ, ಹೊಸ ಬಡವಾಣೆಗಳ ಜನರ ಗೋಳು ಅಧಿಕವಾಗಿದೆ. ಟ್ಯಾಂಕ್‌ ಮತ್ತು ಬಾವಿಗೆ ನೀರು ಭರ್ತಿಗೆ ಕೆಲವು ಮನೆಯವರು ಅವಕಾಶ ನೀಡುತ್ತಿಲ್ಲ ಎನ್ನುವ ಆರೋಪವೂ ಇದೆ.

ದಿನನಿತ್ಯ ಗ್ರಾಮದಲ್ಲಿ ಭರ್ತಿಯಾದ ಬಾವಿಗೆ ಬಂದು ನೀರು ತುಂಬಿಕೊಳ್ಳಲು ಉರಿ ಬಿಸಿಲು ಲೆಕ್ಕಿಸದೆ ಖಾಲಿ ಕೊಡಗಳೊಂದಿಗೆ ಸರದಿ ಕಾಯಬೇಕಿದೆ. ಕೊರೊನಾ ವೈರಸ್ ಹರಡುವಿಕೆ ತಡೆಗಾಗಿ ಅಂತರ ಕಾಪಾಡಿಕೊಳ್ಳುವ ನಿಯಮವನ್ನು ಜನರು ನೀರಿಗಾಗಿ ಸರದಿ ನಿಂತಲ್ಲಿ ಮರೆಯುವಂತಹ ಪರಿಸ್ಥಿತಿ ಎದುರಾಗಿದೆ.

ಗ್ರಾಮ ಪಂಚಾಯಿತಿ ನಿಷ್ಕಾಳಜಿಯಿಂದ ಕೆಲವರು ಮುಖ್ಯ ಪೈಪ್‌ ಒಡೆದು ತಮ್ಮ ಮನೆಗೆ ನಲ್ಲಿ ಮೂಲಕ ನೀರು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಮುಂದಿನ ಮನೆಯವರಿಗೂ ನೀರು ಸರಬುರಾಜು ಆಗುತ್ತಿಲ್ಲ ಎಂದು ಈರಣ್ಣಾ ಬಬಲಾದ ‘ಪ್ರಜಾವಾಣಿ’ಗೆ ತಿಳಿಸಿದರು.

ಲಾಕ್‌ಡೌನ್‌ ಜಾರಿಯಿದೆ ಎನೂ ಮಾಡಲು ಆಗುವದಿಲ್ಲ ಎನ್ನುವ ಸಬೂಬನ್ನುಗ್ರಾ.ಪಂ ಸದಸ್ಯರು ನೀಡಿದರೆ, ಇದೇ ಲಾಕ್‌ಡೌನ್‌ ನೆಪದಲ್ಲಿ ಜನರ ಗೋಳನ್ನುಪಂಚಾಯಿತಿ ಅಧಿಕಾರಿ, ಸಿಬ್ಬಂದಿ ಸೇರಿದಂತೆ ಕೇಳುವರು ಯಾರೂ ಇಲ್ಲದಂತೆ ಆಗಿದೆ. ಸತತ ಒಂದು ತಿಂಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡಿದರೂ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಬೇಸಿಗೆ ಹೆಚ್ಚಿದಂತೆ ಗ್ರಾಮದ ಜನರ ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT