ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಾತೀತವಾಗಿ ಉಳಿದುಕೊಂಡ ಮೇರು ವ್ಯಕ್ತಿತ್ವದ ಬಾಪು

ಗಾಂಧೀಜಿ 150ನೇ ವರ್ಷಾಚಣೆ; ಶಿಕ್ಷಕರಿಗೆ ಡಾ. ಗುರುರಾಜ ಕರಜಗಿ ಅವರಿಂದ ವಿಶೇಷ ಉಪನ್ಯಾಸ
Last Updated 27 ಸೆಪ್ಟೆಂಬರ್ 2019, 15:38 IST
ಅಕ್ಷರ ಗಾತ್ರ

ಕಲಬುರ್ಗಿ:ಕೆಲವು ವ್ಯಕ್ತಿಗಳು ತಮ್ಮ ಕಾಲಘಟ್ಟದಲ್ಲಿ ಜನರ ಮೇಲೆ ಪ್ರಭಾವ ಬೀರಬಹುದು. ಮತ್ತೆ ಕೆಲವು ಚಿಂತನೆಗಳು ಕೆಲವು ಪ್ರದೇಶದಲ್ಲಿ ಮಾತ್ರ ಸ್ವೀಕರಾರ್ಹವಾಗಬಹುದು. ಕಾಲಾತೀತವಾಗಿ, ಸೀಮಾತೀತವಾಗಿ ಉಳಿದುಕೊಳ್ಳುವ ಮೇರು ವ್ಯಕ್ತಿತ್ವ ಮಹಾತ್ಮ ಗಾಂಧೀಜಿ ಅವರದು ಎಂದು ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಅಭಿಪ್ರಾಯಪಟ್ಟರು.

ನಗರದಲ್ಲಿ ಶುಕ್ರವಾರ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂನ ವಿಕಾಸ ಅಕಾಡೆಮಿ, ನಗರೇಶ್ವರ ವೆಲ್‍ಫೇರ್ ಸೊಸೈಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗಾಂಧಿಜಿಯವರ 150ನೇ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಗಾಂಧೀಜಿ ಅಹಿಂಸೆಯನ್ನು ಪ್ರಬಲ ಅಸ್ತ್ರವನ್ನಾಗಿಸಿ ಸ್ವಾತಂತ್ರ್ಯ ಪಡೆದ ಜಗತ್ತಿನ ಮೊದಲ ವ್ಯಕ್ತಿ. 200 ವರ್ಷ ನಮ್ಮ ವಿರೋಧ ಕಟ್ಟಿಕೊಂಡಿದ್ದ ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ಸ್ನೇಹಿತರಾಗಿ ಹೋಗುವಂತೆ ಮಾಡಿದ್ದರು. 1948ರ ಜನವರಿ 30ರಂದು ಅವರ ಹತ್ಯೆಯಾದಾಗ ವಿಶ್ವಸಂಸ್ಥೆಯ ಧ್ವಜಮಾತ್ರವಲ್ಲ ಜಗತ್ತಿನ ಎಲ್ಲ ದೇಶಗಳ ಧ್ವಜಗಳು ಅರ್ಧಕ್ಕೆ ಇಳಿಸಿ, ಗೌರವ ಸೂಚಿಸಿದ್ದವು. ಜಗತ್ತಿನ ಮಾನವತೆ ಸತ್ತಿತು ಎಂದು ಕಂಬನಿ ಮಿಡಿದಿದ್ದವು’ ಎಂದು ಹೇಳಿದರು.

ಕನ್ನಡದ ಲೇಖಕರು, ದಾರ್ಶನಿಕರು, ವಿಜ್ಞಾನಿಗಳು, ಮೇಧಾವಿಗಳು ಗಾಂಧೀಜಿ ಕುರಿತು ವ್ಯಕ್ತ ಪಡಿಸಿದ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಅವರ ವ್ಯಕ್ತಿತ್ವವನ್ನು ಕಟ್ಟಿಕೊಟ್ಟರು. ರಾಜಕೀಯವಾಗಿ ಯಾವುದೇ ಅಧಿಕಾರವಿಲ್ಲದ ಗಾಂಧಿ ಜಗತ್ತಿನ ಎಲ್ಲ ದೇಶಗಳ ಗೌರವಕ್ಕೆ ಪಾತ್ರವಾದ ಬಗೆಯನ್ನು ಭಾರತೀಯರೇ ಸರಿಯಾಗಿ ಅರ್ಥಮಾಡಿಕೊಳ್ಳಬೇಕಿದೆ. ಅವರ ಕುರಿತು ಎಷ್ಟೇ ವಿಮರ್ಶೆಗಳಿದ್ದರೂ ಅಂತಿಮವಾಗಿ ಅಹಿಂಸೆ, ಸ್ನೇಹಪರತೆ, ತನ್ನ ತಪ್ಪನ್ನು ತಿದ್ದಿಕೊಳ್ಳುವುದು, ಆತ್ಮಾವಲೋಕನ ಮಾಡಿಕೊಳ್ಳುವುದು, ಸ್ವಯಂ ಸೇವೆ ಅವರ ಪ್ರಧಾನ ಗುಣಗಳಾಗಿರುವುದನ್ನು ಯಾರೂ ಅಲ್ಲಗಳೆಯಲಾಗದು ಎಂದರು.

ವಿಕಾಸ ಅಕಾಡೆಮಿ ಅಧ್ಯಕ್ಷ ಡಾ.ಬಸವರಾಜ ಪಾಟೀಲ ಸೇಡಂ ಪ್ರಾಸ್ತಾವಿಕ ಮಾತನಾಡಿ, ಗಾಂಧಿಜಿಯವರ ಬದುಕಿನ ಮೌಲ್ಯಗಳು ಮುಂದಿನ ಪೀಳಿಗೆಗೆ ಮನದಟ್ಟಾಗುವಂತೆ ಶಾಲಾ ಮಕ್ಕಳಿಗೆ ತಿಳಿಸಿಕೊಡಬೇಕು ಎಂದು ಶಿಕ್ಷಕರಲ್ಲಿ ಮನವಿ ಮಾಡಿದರು.

ನಗರೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರವೀಂದ್ರ ಮುಕ್ಕಾ ಅಧ್ಯಕ್ಷತೆ ವಹಿಸಿದ್ದರು. ಗುಲಬರ್ಗಾ ವಿ.ವಿ. ಪ್ರಾಧ್ಯಾಪಕ ಡಾ.ದಯಾನಂದ ಅಗಸರ್ ಸ್ವಾಗತಿಸಿದರು. ವಿಕಾಸ ಅಕಾಡೆಮಿ ಪದಾಧಿಕಾರಿ ಉಮೇಶ ಶೆಟ್ಟಿ ಪ್ರಾರ್ಥಿಸಿದರು. ಡಾ.ವಿಜಯಲಕ್ಷ್ಮಿ ಎಸ್.ಪಾಟೀಲ ನಿರೂಪಣೆ ಮಾಡಿದರು. ಪ್ರೊ.ನರೇಂದ್ರ ಬಡಶೇಷಿ, ವಿ.ಶಾಂತರೆಡ್ಡಿ, ಎಚ್.ಸಿ.ಪಾಟೀಲ, ಬಸವರಾಜ ಗಾಣೂರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT