ಶನಿವಾರ, ಮೇ 21, 2022
22 °C
ರಾಜ್ಯ ಹಡಪದ ನೌಕರರ ಸಂಘದ ಪೂರ್ವಭಾವಿ ಸಭೆಯಲ್ಲಿ ಚರ್ಚೆ

‘ಸಮಾಜ ಸುಧಾರಣೆಗೆ ಕೈ ಜೋಡಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ರಾಜ್ಯದಲ್ಲಿ ಹಡಪದ ಸಮುದಾಯದ 18 ಲಕ್ಷ ಜನಸಂಖ್ಯೆ ಇದೆ. ಆದರೂ ಈವರೆಗೂ ಒಂದೇ ಒಂದು ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಸಮುದಾಯದ ಬಹಳಷ್ಟು ಜನ ಇನ್ನೂ ಕ್ಷೌರ ಕೆಲಸವನ್ನೇ ಮಾಡುತ್ತಿದ್ದು, ಶಿಕ್ಷಣದ ಕೊರತೆಯ ಕಾರಣ ನಮ್ಮ ಹಕ್ಕುಗಳನ್ನು ಪ್ರತಿಪಾದಿಸುವಲ್ಲಿ ಹಿಂದೆ ಬಿದ್ದಿದ್ದೇವೆ’ ಎಂದು ಹಡಪದ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಈರಣ್ಣ ಸಿ. ಹಡಪದ ಸಣ್ಣೂರ ಬೇಸರ ವ್ಯಕ್ತಪಡಿಸಿದರು.

ರಾಜ್ಯ ಹಡಪದ ಸಮಾಜದ ನೌಕರರ ಸಂಘದ ರಚನೆಗಾಗಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಹಡಪದ ಸಮಾಜದ ರಾಜ್ಯಮಟ್ಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಸಾಮಾಜಿಕವಾಗಿ, ಶೈಕ್ಷಣಿಕ, ಔದ್ಯೋಗಿಕ ಕ್ಷೇತ್ರಗಳಲ್ಲಿ ನಮ್ಮ ಸಮಾಜ ಇನ್ನೂ ಮುಖ್ಯವಾಹಿನಿಗೆ ಬಂದಿಲ್ಲ. ಇದರಿಂದ ಆರ್ಥಿಕವಾಗಿ ಪ್ರಾಬಲ್ಯವನ್ನೂ ಸಾಧಿಸಿಲ್ಲ. ಮೇಲಾಗಿ, ಇಷ್ಟು ದೊಡ್ಡ ಜನಸಂಖ್ಯೆ ಹೊಂದಿದ್ದರೂ ಇದೂವರೆಗೆ ಸಮಾಜದ ಒಬ್ಬ ವ್ಯಕ್ತಿಗೂ ಒಂದೂ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಈ ಕೊರತೆ ನೀಗಿಸಲು ನಾವು ಇನ್ನಷ್ಟು ಸಂಘಟಿತರಾಗಿ ಹೋರಾಟ ಮಾಡಬೇಕಿದೆ’ ಎಂದು ಕರೆ ನೀಡಿದರು.

‘ಸಮಾಜದಲ್ಲಿ ಹಲವಾರು ವಿದ್ಯಾವಂತರಿದ್ದಾರೆ. ಮತ್ತೆ ಕೆಲವರು ಸರ್ಕಾರಿ ನೌಕರಿಯನ್ನೂ ಪಡೆದಿದ್ದಾರೆ. ಆದರೆ, ಈ ರೀತಿ ನೌಕರಿ ಪಡೆದವರು ತಮ್ಮ ಬಗ್ಗೆ ಮಾತ್ರ ಚಿಂತನೆ ಮಾಡದೇ ಸಮಾಜದ ಏಳಿಗೆಗೂ ತಮ್ಮ ಆಸಕ್ತಿ ತೋರಬೇಕು. ಮಕ್ಕಳ ಶಿಕ್ಷಣಕ್ಕೆ ಶ್ರಮಿಸಲು ಮುಂದೆ ಬರಬೇಕು’ ಎಂದೂ ಕೋರಿದರು.

ಸಭೆ ಉದ್ಘಾಟಿಸಿದ ಸೇಡಂ ತಹಶೀಲ್ದಾರ್‌ ಬಸವರಾಜ ಬೆಣ್ಣೆಸೂರ ಅವರು ಮಾತನಾಡಿ, ‘ಹಡಪದ ಸಮಾಜವು ಶೈಕ್ಷಣಿಕವಾಗಿ ಹಿಂದುಳಿದ ಕಾರಣವೇ ಇತರ ಕ್ಷೇತ್ರಗಳಲ್ಲೂ ಸಾಧನೆ ತೋರಲಾಗುತ್ತಿಲ್ಲ. ನೌಕರರು ಸಂಘಟನೆ ಕಟ್ಟಿಕೊಂಡು ವಿವಿಧ ಆಯಾಮಗಳಲ್ಲಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕಿದೆ’ ಎಂದು ಹೇಳಿದರು.

ಮುಖಂಡರಾದ ಬಸವರಾಜ ಹಡಪದ ಮೆಟ್ರೊ, ಶಿವಶರಣಪ್ಪ ಹಾಗರಗಿ, ರಮೇಶ ಹುಮನಾಬಾದ್‌, ಮಹಾರುದ್ರಪ್ಪ ಮರತೂರ, ರವಿ ಡಿಗ್ಗಿ, ಮಹಾಂತೇಶ ಹಡಪದ, ದೀಪಾ ಬೇಗೂರ, ಮಲ್ಲಿಕಾರ್ಜುನ ಬೇಗೂರ, ಎ.ವಿ. ಪ್ರಭು ಗದಗ ವೇದಿಕೆ ಮೇಲಿದ್ದರು.

ಕಲಬುರ್ಗಿ, ಬಳ್ಳಾರಿ, ಬೀದರ್,‌ ಹಾವೇರಿ, ಬೆಳಗಾವಿ, ವಿಜಯಪುರ, ಯಾದಗಿರಿ ಜಿಲ್ಲೆಗಳಿಂದ ಹಲವಾರು ನೌಕರರು ಸಭೆಯಲ್ಲಿ ಪಾಲ್ಗೊಂಡು ಚರ್ಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು