ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಲಾಕ್‌ಡೌನ್‌: ಕೈಗೆ ಕೆಲಸವಿಲ್ಲ, ಹೊಟ್ಟೆಗೆ ಹಿಟ್ಟಿಲ್ಲ

ಎಪಿಎಂಸಿ ಹಮಾಲರನ್ನು ಮರೆತ ಸರ್ಕಾರ; ಸಾಲ ಮಾಡಿ ಮನೆ ನಡೆಸಬೇಕಾದ ಪರಿಸ್ಥಿತಿ
Last Updated 23 ಮೇ 2021, 7:55 IST
ಅಕ್ಷರ ಗಾತ್ರ

ಕಲಬುರ್ಗಿ: ಕೊರೊನಾ ಲಾಕ್‌ಡೌನ್‌ ಇಲ್ಲಿನ ಗಂಜ್‌ನಲ್ಲಿರುವ ಎಪಿಎಂಸಿಯ 2 ಸಾವಿರಕ್ಕೂ ಅಧಿಕ ಹಮಾಲರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಕಳೆದ 15–20 ದಿನಗಳಿಂದ ರೈತರು ತಮ್ಮ ಉತ್ಪನ್ನಗಳನ್ನು ತರುತ್ತಿಲ್ಲ. ಹಾಗೆಂದು ಎಪಿಎಂಸಿಯ ಅಡತ್ ಅಂಗಡಿಗಳಿಗೆ ಬರುವುದು ಬಿಟ್ಟರೆ ಇದ್ದ ಕೆಲಸವೂ ಹೋದೀತು ಎಂಬ ಆತಂಕ. ಹೀಗಾಗಿ, ದಿನಾಲೂ ಕಿಲೋ ಮೀಟರ್‌ಗಟ್ಟಲೇ ದೂರದಿಂದ ನಡೆಯುತ್ತಾ ಬಂದು ಮಧ್ಯಾಹ್ನದ ಬಳಿಕ ವಾಪಸ್‌ ಹೋಗುತ್ತಿದ್ದಾರೆ.

‘ವಿವಿಧ ಶ್ರಮಿಕ ಸಮುದಾಯದವರಿಗೆ ಪ್ಯಾಕೇಜ್‌ನಲ್ಲಿ ನೆರವು ಘೋಷಿಸಿದ ಸರ್ಕಾರ ನಮ ಗೇನೂ ಮಾಡುತ್ತಿಲ್ಲ’ ಎನ್ನುತ್ತಾರೆ ಗಂಜ್‌ನಲ್ಲಿರುವ ಹಮಾಲಿ ಕಾರ್ಮಿಕರು. ಇಲ್ಲಿರುವವರು ಬಹುತೇಕರು ಅನಕ್ಷ ರಸ್ಥರು, ಚೀಲದ ನಿಟ್ಟು ಹೊರುವುದನ್ನು ಬಿಟ್ಟು ಬೇರೆ ಕೆಲಸ ಗೊತ್ತಿಲ್ಲದವರು. ಹೀಗಾಗಿ, ತಮ್ಮ ಹಕ್ಕುಗಳ ಬಗ್ಗೆ ‍ಪ್ರಶ್ನಿಸಲೂ ಧ್ವನಿ ಇಲ್ಲದಂತಾಗಿದೆ.

ಶನಿವಾರ ಗಂಜ್‌ಗೆ ‘ಪ್ರಜಾವಾಣಿ’ ಪ್ರತಿನಿಧಿ ಭೇಟಿ ನೀಡಿದ ಸಂದರ್ಭದಲ್ಲಿ ಬಹುತೇಕ ಅಡತ್ ಅಂಗಡಿಗಳು ಮುಚ್ಚಿದ್ದರೂ ಹಮಾಲರು ಮಾತ್ರ ಗುಂಪುಗೂಡಿ ಕೂತಿದ್ದರು. ಲಾಕ್‌ಡೌನ್‌ ಇರುವುದರಿಂದ ಪೊಲೀಸರು ಎಲ್ಲಿ ತಮ್ಮನ್ನು ತಡೆದಾರು ಎಂಬ ಭೀತಿಯಿಂದ ರೈತರು ಎಪಿಎಂಸಿಗೆ ಉತ್ಪನ್ನಗಳನ್ನು ತರುತ್ತಿಲ್ಲ.

ತೊಗರಿ, ಜೋಳ, ಗೋಧಿ, ಉದ್ದು, ಹೆಸರು, ಕಡಲೆಯ ಸೀಸನ್ ಇದ್ದ ಸಂದರ್ಭದಲ್ಲಿ ಪ್ರತಿಯೊಂದು ಅಂಗಡಿಗೆ ಬರುವ ಉತ್ಪನ್ನಗಳನ್ನು ಇಳಿಸಿಕೊಳ್ಳಲು ಕನಿಷ್ಠ ನಾಲ್ಕು ಜನ ಹಮಾಲರು ಬೇಕೇ ಬೇಕು. 1 ಕ್ವಿಂಟಲ್‌ನಿಂದ 1.20 ಕ್ವಿಂಟಲ್ ತೂಕದ 40ರಿಂದ 50 ಚೀಲಗಳನ್ನು ಗಾಡಿಯಿಂದ ಅಂಗಡಿ ಒಳಗೆ ಸಾಗಿಸಿದರೆ ಸಿಗುವುದು ಒಬ್ಬರಿಗೆ ₹ 300 ರಿಂದ ₹ 400 ಮಾತ್ರ.

ಈ ಕುರಿತು ಮಾಹಿತಿ ನೀಡಿದ ಯಂಕಪ್ಪ ನಾಯ್ಕೋಡಿ, ‘25 ವರ್ಷ ಗಳಿಂದ ಚೀಲ ಹೊರುವ ಕೆಲಸ ಮಾಡುತ್ತಿದ್ದೇವೆ. ಲಾಕ್‌ಡೌನ್‌ ಶುರುವಾದಾಗಿನಿಂದ ಒಂದು ನಯಾಪೈಸೆ ಕೂಲಿ ಸಿಕ್ಕಿಲ್ಲ. ಮನೆಯಲ್ಲಿ ಕೂತರೆ ಹೊತ್ತು ಹೋಗುವುದಿಲ್ಲ. ಅಂಗಡಿ ಕಡೆ ಬಂದರೆ ಯಾರಾದರೂ ರೈತರು ಕಾಳು ಕಡಿ ತಂದಿದ್ದರೆ ಅದನ್ನು ಇಳಿಸಿ ಮನೆ ನಡೆಸುವಷ್ಟು ಕೂಲಿಯಾದರೂ ಸಿಗುತ್ತದೆ ಎಂಬ ಆಸೆಯಿಂದ ಬಂದಿರುತ್ತೇವೆ. ಕೆಲ ರೈತರು ತಂದಿದ್ದರೂ ರೇಟು ಹೊಂದಾಣಿಕೆ ಆಗದ್ದಕ್ಕೆ ಅವರು ತಮ್ಮ ಉತ್ಪನ್ನಗಳನ್ನು ಕೊಡುತ್ತಿಲ್ಲ. ಚೀಲಗಳನ್ನು ಹೊತ್ತು ಕಾಲು ನೋವು ಬಂದಿದೆ. ಆದರೆ, ಮನೆ ನಡೆಸಲು ಇದನ್ನು ಬಿಟ್ಟು ಬೇರೆ ಉದ್ಯೋಗ ಮಾಡಿಲ್ಲ. ಏನು ಮಾಡುವುದು’ ಎಂದರು.

‘ನಾವು ಏನೂ ಕಲಿತಿಲ್ಲಂತ ಸರ್ಕಾರದವರು, ಎಪಿಎಂಸಿಯವರೂ ನಮ್ಮ ಕಡೆ ಕಣ್ಣೆತ್ತಿ ನೋಡುವುದಿಲ್ಲ. ಏನಾದರೂ ಹಣಕಾಸು ನೆರವು ಕೊಟ್ಟರ ನಾವು ಬದುಕ್ಕೊಂತೀವಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT