ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ ನಗರದಲ್ಲಿ ಗಮನ ಸೆಳೆದ ಬೃಹತ್ ಶೋಭಾಯಾತ್ರೆ

Last Updated 17 ಏಪ್ರಿಲ್ 2022, 4:25 IST
ಅಕ್ಷರ ಗಾತ್ರ

ಕಲಬುರಗಿ: ಹನುಮಾನ್‌ ಜಯಂತಿ ಅಂಗವಾಗಿ ಇಲ್ಲಿನ ಕೇಸರಿನಂದನ ಯುವ ಬ್ರಿಗೇಡ್‌ ವತಿಯಿಂದ ಶನಿವಾರ ನಗರದಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು. 14 ಅಡಿ ಎತ್ತರದ ಆಂಜನೇಯ ಪ್ರತಿಮೆ ಹೊತ್ತ ವಾಹನದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಕೂಡ ಮೆರವಣಿಗೆಯಲ್ಲಿ ಸಾಗಿದರು.

ಇಲ್ಲಿನ ರಿಂಗ್‌ ರಸ್ತೆಗೆ ಹೊಂದಿಕೊಂಡಿರುವ ರಾಮತೀರ್ಥದಲ್ಲಿ ಬೆಳಿಗ್ಗೆಯೇ ಪವಮಾನ ಹೋಮ ನಡೆಸಲಾಯಿತು. ವಿವಿಧ ಹನುಮನ ದೇವಸ್ಥಾನಗಳ ಅರ್ಚಕರು, ಪಂಡಿತರು ಹೋಮ ನಡೆಸಿಕೊಟ್ಟರು.

ನಂತರ ಶ್ರೀನಿವಾಸ ಸರಡಗಿಯ ಅಪ್ಪಾರಾವ್ ದೇವಿಮುತ್ಯಾ ಅವರು ಆಂಜನೇಯ ಶೋಭಾಯಾತ್ರೆಗೆ ಚಾಲನೆ ನೀಡಿದರು. ರಾಮತೀರ್ಥದಿಂದ ಆರಂಭವಾದ ಬೃಹತ್‌ ಮೆರವಣಿಗೆ ಆಳಂದ ಚೆಕ್‌ಪೋಸ್ಟ್ ಮೂಲಕ, ಶಹಾಬಜಾರ್‌ನಲ್ಲಿ ಸಾಗಿ ಅಲ್ಲಿನ ನಾಕಾದಲ್ಲಿ ಕೆಲಹೊತ್ತು ನಿಂತಿತು. ವೃತ್ತದಲ್ಲಿ ಸೇರಿದ ಅಪಾರ ಸಂಖ್ಯೆಯ ಯುವಕರು ಹನುಮನ ಭಕ್ತಿಗೀತೆಗಳಿಗೆ ಕುಣಿದು ಕುಪ್ಪಳಿಸಿದರು. ಅಲ್ಲಿಂದ ಮುಂದೆ ಸಾಗಿ ಚೌಕ್‌ ಠಾನೆಯ ವೃತ್ತ, ಸೂಪರ್ ಮಾರ್ಕೆಟ್‌ ಮೂಲಕ ಬಂದು ಜಗತ್‌ ವೃತ್ತದಲ್ಲಿ ಮುಕ್ತಾಯಗೊಂಡಿತು. ಬೆಳಿಗ್ಗೆ 11ಕ್ಕೆ ಆರಂಭವಾದ ಈ ಯಾತ್ರೆ ಸಂಜೆ 6ರವರೆಗೂ ನಡೆಯಿತು.

ಶ್ರೀರಾಮ ಸೇನೆಯ ರಾಜ್ಯ ಘಟಕದ ಅಧ್ಯಕ್ಷ, ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಶೋಭಾ ಯಾತ್ರೆಯ ರಥ ಏರಿ ಮೆರವಣಿಗೆಯಲ್ಲಿ ಗಮನ ಸೆಳೆದರು.ಕೇಸರಿ ನಂದನ ಯುವ ಬ್ರಿಗೇಡ್‌ ಅಧ್ಯಕ್ಷ ಆನಂದ ಚವಾಣ, ಕ್ರೆಡಲ್‌ ಅಧ್ಯಕ್ಷ ಚಂದ್ರಕಾಂತ ಪಾಟೀಲ, ಮುಖಂಡಹರ್ಷಾನಂದ ಗುತ್ತೇದಾರ, ಶ್ರೀರಾಮ ಸೇನೆ ಮುಖಂಡ ಲಕ್ಷ್ಮಿಕಾಂತ ಸ್ವಾದಿ, ಶಶಿಕಾಂತ್ ದೀಕ್ಷಿತ, ಶ್ವೇತಾ ಸಿಂಗ್‌ ಸೇರಿದಂತೆ ಹಲವರು ವಾಹನದಲ್ಲಿ ಸಾಗಿದರು.

ದೊಡ್ಡದಾದ ಡಿಜೆ ಸೌಂಡ್‌ ಸಿಸ್ಟಂಗಳನ್ನು ಬಳಸಿ ಮೆರವಣಿಗೆಯುದ್ದಕ್ಕೂ ವಾಯುಪುತ್ರನ ಗೀತೆಗಳನ್ನು ಪ್ರಸಾರ ಮಾಡಲಾಯಿತು. ಕನ್ನಡ, ಹಿಂದಿ ಚಲನಚಿತ್ರ ಗೀತೆಗಳಿಗೆ ಯುವ ಮನಸ್ಸುಗಳನ್ನು ಹುಮ್ಮಸ್ಸಿನಿಂದ ಹೆಜ್ಜೆ ಹಾಕಿದವು. ಕೇಸರಿ ಧ್ವಜ ಹಾರಾಡಿಸುತ್ತ ಜೈ ಹನುಮಾನ್‌, ಜೈ ಶ್ರೀರಾಮ್‌ ಘೋಷಣೆ ಮೊಳಗಿಸಿದರು.

ಮೆರವಣಿಗೆಯು ಖಾದ್ರಿ ಚೌಕ್‌ ತಲುಪಿದಾಗ, ಪಾಲಿಕೆ ಸದಸ್ಯ ರೆಹಮಾನ್‌ ಅವರು ವಾಹನದ ಮೇಲೆ ಬಂದು ಹನುಮಾನ್‌ ಕಟೌಟ್‌ಗೆ ಹೂವಿನ ಹಾರ ಹಾಕಿ ನಮಸ್ಕರಿಸಿದರು. ಕೆಲ ಹೊತ್ತು ಮೆರವಣಿಗೆಯಲ್ಲಿ ಸಾಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT