ಸೋಮವಾರ, ಜನವರಿ 17, 2022
20 °C
ಮಲ್ಲಿಕಾರ್ಜುನ ಖರ್ಗೆ, ಎಚ್‌.ಡಿ. ದೇವೇಗೌಡ ಕಳವಳ

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ; ಖರ್ಗೆ, ಎಚ್‌.ಡಿ.ದೇವೇಗೌಡ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇತ್ತೀಚೆಗೆ ಧಕ್ಕೆಯಾಗುತ್ತಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಸ್ವಾತಂತ್ರ್ಯ ಮತ್ತು ಸಂವಿಧಾನಕ್ಕೆ ಧಕ್ಕೆಯಾಗಲಿದೆ’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ನಗರದಲ್ಲಿ ಆಯೋಜಿಸಿದ್ದ 36ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಮಾತನಾಡಿ, ‘ಸಂವಿಧಾನದ ಮೂಲಕ ಪಡೆದ ಅಧಿಕಾರ ಮೊಟಕುಗೊಳ್ಳುತ್ತಿರುವ ಪರಿಸ್ಥಿತಿ ಎದುರಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದೊಂದು ದಿನ ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭ ಎಂದು ಕರೆಯಲಾಗುವ ಪತ್ರಿಕಾರಂಗ ತನ್ನ ಸ್ವಾತಂತ್ರ್ಯವನ್ನೂ ಕಳೆದುಕೊಳ್ಳಬಹುದು’ ಎಂದರು.

‘ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ, ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಪತ್ರಿಕೆಯ ಮಹತ್ವ ಗೊತ್ತಿತ್ತು. ಹೀಗಾಗಿಯೇ ಗಾಂಧೀಜಿ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಿಂದ ಪತ್ರಿಕೆ ಹೊರಡಿಸಿದರು. ನೆಹರೂ ಅವರು ಹಿಂದಿ, ಉರ್ದು, ಇಂಗ್ಲಿಷ್ ಪತ್ರಿಕೆಗಳನ್ನು ಹೊರತಂದರು. ಅಂಬೇಡ್ಕರ್ ಅವರ ಬಳಿ ಹಣಬಲ ಹಾಗೂ ಜನಬಲ ಇಲ್ಲದಿದ್ದರೂ, ಅವರು ಪ್ರತಿನಿಧಿಸುವ ಶೋಷಿತ ಸಮುದಾಯಕ್ಕೆ ಓದು ಬರಹ ಗೊತ್ತಿಲ್ಲದಿದ್ದರೂ ಮೂಕನಾಯಕ, ಬಹಿಷ್ಕೃತ ಭಾರತ ಎಂಬ ಪತ್ರಿಕೆಗಳನ್ನು ಹೊರತಂದಿದ್ದರು’ ಎಂದರು.

ಪರಿಸ್ಥಿತಿ ಬದಲಾಗಿದೆ: ‘ದೇಶದ ಪರಿಸ್ಥಿತಿ ಸಾಕಷ್ಟು ಬದಲಾಗಿದ್ದು, ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ ಎಲ್ಲ ಮಾತುಗಳೂ ನಿಜ. ಮಾಜಿ ಪ್ರಧಾನಿಯಾದ ನನಗೆ ಮಾತನಾಡಲು ಎಷ್ಟೋ ಬಾರಿ ಸಂಸತ್ತಿನಲ್ಲಿ ಅವಕಾಶ ನಿರಾಕರಿಸಲಾಗುತ್ತದೆ. ಮುಂಚೆ ಒಂದು ಗಂಟೆ ಮಾತನಾಡಿ ದೇಶದ ಸಮಸ್ಯೆಗಳನ್ನು ಮನದಟ್ಟು ಮಾಡುತ್ತಿದ್ದೆ. ಈಗ ಪಕ್ಷಗಳ ಸಂಖ್ಯಾಬಲದ ಆಧಾರದ ಮೇಲೆ ಮಾತನಾಡಲು ಅವಕಾಶ ನೀಡಲಾಗುತ್ತದೆ. ಇದರಿಂದ ಜನರ ಸಂಕಷ್ಟವನ್ನು ಸರ್ಕಾರಕ್ಕೆ ಹೇಗೆ ತಿಳಿಸಬೇಕು ಎನ್ನುವುದೇ ತಿಳಿಯುವುದಿಲ್ಲ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ವಿಷಾದಿಸಿದರು.

‘ಹಿಂದೆ ನಮ್ಮ ಪಕ್ಷದಲ್ಲೇ ಇದ್ದ ಗೋವಿಂದ ಕಾರಜೋಳ ಅವರು ನನ್ನೊಂದಿಗೆ ವೇದಿಕೆಯಲ್ಲಿ ಇರಬೇಕಿತ್ತು. ನಾನು, ಖರ್ಗೆ ಅವರು ಈಗ ಒಂದೇ ವೇದಿಕೆಯಲ್ಲಿ ಕುಳಿತಿಲ್ಲವೇ? ಕಾರಜೋಳ ಅವರಿಗೆ ನನ್ನೊಂದಿಗೆ ವೇದಿಕೆ ಹಂಚಿಕೊಳ್ಳಲು ಹಿಂಜರಿಕೆ ಏಕೆ’ ಎಂದು ಪ್ರಶ್ನಿಸಿದರು.

3 ನಿರ್ಣಯ ಅಂಗೀಕಾರ: ಕಲಬುರಗಿಯಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆಯ ಪ್ರಾದೇಶಿಕ ನಿರ್ದೇಶನಾಲಯ ಸ್ಥಾಪನೆ, ಪತ್ರಕರ್ತರ ಕಲ್ಯಾಣಕ್ಕಾಗಿ ₹ 100 ಕೋಟಿ ನಿಧಿ ಮೀಸಲಿಡಬೇಕು, ಸ್ಥಳೀಯ ಪತ್ರಿಕೆಗಳಿಗೆ ತಾರತಮ್ಯ ಇಲ್ಲದೇ ಜಾಹೀರಾತು ನೀಡಬೇಕು ಎಂಬ ನಿರ್ಣಯಗಳನ್ನು ಸಮಾವೇಶದಲ್ಲಿ ಕೈಗೊಳ್ಳಲಾಯಿತು.

 

‘ಕಲಬುರಗಿಗೆ ವರ್ಗಾವಣೆ ಶಿಕ್ಷೆ’

ರಾಜ್ಯದಲ್ಲಿ ಅಧಿಕಾರಿಗಳಿಗೆ ಕಲಬುರಗಿ, ಬೀದರ್‌ಗೆ ವರ್ಗಾವಣೆ ಎಂದರೆ ಅದೊಂದು ಬಗೆಯ ಶಿಕ್ಷೆ ಎಂಬಂತಾಗಿದೆ. ಹಿರಿಯ ಅಧಿಕಾರಿಗಳೂ ಹಾಗೆಯೇ ಹೆದರಿಸುತ್ತಾ ಬಂದಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಕಲ್ಯಾಣ ಕರ್ನಾಟಕ ಎಂಬುದು ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊತ್ತುಕೊಂಡಿದೆ. ಅದಕ್ಕೆ ತಕ್ಕಂತೆ ಸರ್ಕಾರ ಉತ್ತಮ ಅಧಿಕಾರಿಗಳನ್ನು ಇತ್ತ ಕಡೆ ವರ್ಗಾವಣೆ ಮಾಡುವುದೇ ಇಲ್ಲ. ಯಾರಿಗೂ ಬೇಡವಾದ, ಜನಪ್ರತಿನಿಧಿಗಳ ಬೆಂಬಲ ಇಲ್ಲದ ಅಧಿಕಾರಿಗಳನ್ನು ಇತ್ತ ಹಾಕುವ ಪರಿಪಾಠ ಇದೆ ಎಂದರು.

‘ನಾನು ಈ ಭಾಗದ ಸಮಸ್ಯೆಗಳ ಬಗ್ಗೆ ಮಾತನಾಡಿದರೆ ಅದನ್ನು ಸ್ಥಳೀಯ ಸುದ್ದಿಯಾಗಿ ಪ್ರಕಟಿಸುತ್ತೀರಿ. ಹಾಗಾಗಿ, ಇತ್ತೀಚೆಗೆ ಪತ್ರಿಕಾಗೋಷ್ಠಿ ಮಾಡುವುದನ್ನೇ ಬಿಟ್ಟಿದ್ದೇನೆ. ಅಂಕಿ ಸಂಖ್ಯೆಗಳನ್ನು ಸಂಗ್ರಹಿಸಿ ಮಾತನಾಡಿದರೂ ನಾ ಮಾತನಾಡಿದ ವಿಷಯ ಮುಖ್ಯಮಂತ್ರಿ, ಸರ್ಕಾರದ ಕಾರ್ಯದರ್ಶಿಗಳಿಗೆ ತಲುಪದಿದ್ದರೆ ಹೇಗೆ’ ಎಂದು ಸಭೆಯಲ್ಲಿದ್ದ ಪತ್ರಕರ್ತರನ್ನು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.