ಶನಿವಾರ, ಅಕ್ಟೋಬರ್ 24, 2020
27 °C
ಅಮರ್ಜಾ ಅಣೆಕಟ್ಟೆ ಸೇರಿದಂತೆ ಹಳ್ಳಕೊಳ್ಳ ಭರ್ತಿ

ಜಲಾಕ್ರೋಶ: ಸಂಚಾರ ಅಸ್ತವ್ಯಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಳಂದ: ಮಳೆಯ ಆರ್ಭಟ ಗುರುವಾರ ತಗ್ಗಿದೆ. ಆದರೆ, ಅದು ಸೃಷ್ಟಿಸಿದ ಅವಾಂತರದಿಂದ ಜನ ತತ್ತರಿ ಹೋಗಿದ್ದಾರೆ. ತಾಲ್ಲೂಕಿನ ವಿವಿಧೆಡೆ ರಸ್ತೆ, ಸೇತುವೆ ಕೊಚ್ಚಿಹೋಗಿದ್ದರಿಂದ ಗುರುವಾರ ಕೂಡ ಸಾರಿಗೆ ಸಂಪರ್ಕ ಸಾಧ್ಯವಾಗಲಿಲ್ಲ.

ಆಳಂದ– ಗಾಣಗಾಪುರ ಮುಖ್ಯರಸ್ತೆಯ ಭೂಸನೂರು ಕ್ರಾಸ್‌ ಹತ್ತಿರದ ಸೇತುವೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ರಸ್ತೆಯ ಮೇಲೆ ತಗ್ಗು ನಿರ್ಮಾಣವಾಗಿದಲ್ಲದೇ  ಕಾಲ್ನಡಿಗೆಗೂ ಕಷ್ಟಕವಾಗಿದೆ. ಇದರಿಂದ ಭೂಸನೂರು, ಬಟ್ಟರ್ಗಾ, ಧಂಗಾಪುರ, ನಿಂಬರ್ಗಾ ಮಾರ್ಗವಾಗಿ ಸಂಚರಿಸಲು ಗುರುವಾರ ಸಾಧ್ಯವಾಗಲಿಲ್ಲ.

ಆಳಂದ, ಖಜೂರಿ ಹೋಬಳಿ ವಲಯದಲ್ಲಿ ಅತಿ ಹೆಚ್ಚು ಮಳೆ ಸುರಿದ ಪರಿಣಾಮ ಅಮರ್ಜಾ ಅಣೆಕಟ್ಟೆಯು ಸಂಪೂರ್ಣ ಭರ್ತಿಯಾಗಿದೆ. ಮುಂಜಾಗೃತಾ ಕ್ರಮವಾಗಿ ಅಣೆಕಟ್ಟೆಯ ನಾಲ್ಕು ಗೇಟ್‌ ತೆರೆದು ನೀರು ಬಿಡಲಾಗುತ್ತಿದೆ. ಕಿಣಿಸುಲ್ತಾನ್‌, ಸಾಲೇಗಾಂವ, ವೈಜಾಪುರ, ಕೆರೂರು ಗ್ರಾಮದ ಕೆರೆಗಳು ಭರ್ತಿಯಾಗಿವೆ. ತೊಗರಿ, ಕಬ್ಬು, ಸೋಯಾಬಿನ್, ಶೇಂಗಾ, ಸೂರ್ಯಕಾಂತಿ ಮತ್ತು ತೋಟಗಾರಿಕೆ ಬೆಳೆಯು ಜಲಾವೃತ್ತವಾಗಿದೆ. ವಿವಿಧ ಗ್ರಾಮದಲ್ಲಿ ರೈತರ ಬಾವಿ, ಬದುವು ಕೊಚ್ಚಿ ಹೋಗಿವೆ.

ವಿದ್ಯುತ್ ಕಂಬ ಧರೆಗೆ ಉರುಳಿದ ಪರಿಣಾಮ ಆಳಂದ ಪಟ್ಟಣದ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸಹ ಕಡಿತವಾಗಿದೆ. ದೇಗಾಂವ– ಬಿಲಗುಂದಿ ಮತ್ತು ರಾಜಾವಾಳ– ಜಿಡಗಾ ಮಧ್ಯದ ರಸ್ತೆ ಪೂರ್ಣ ನೀರಿಗೆ ಕೋಚ್ಚಿ ಹೋದ ಪರಿಣಾಮ ಸಂಪರ್ಕ ಅಸಾಧ್ಯವಾಗಿದೆ. ಬಸವಣ್ಣ ಸಂಗೋಳಗಿಯ ದೇವಸ್ಥಾನದ ಮುಂದೆ ಹಾಕಿದ ತಡೆಗೋಡೆಯು ಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.

ಭೇಟಿ: ಮಾಜಿ ಶಾಸಕ ಬಿ.ಆರ್.ಪಾಟೀಲ ಅವರು ಅಮರ್ಜಾ ಅಣೆಕಟ್ಟೆಯ ಸುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಹಾನಿಯ ಸಮೀಕ್ಷೆಯು ನಡೆಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಹರ್ಷಾನಂದ ಗುತ್ತೇದಾರ ಅವರು ವೈಜಾಪುರ, ಬೊಮ್ಮನಳ್ಳಿ, ಖಂಡಾಳ, ಖಜೂರಿ ಗ್ರಾಮದ ವಿವಿಧೆಡೆ ಭೇಟಿ ಬೆಳೆ ಹಾನಿ ವೀಕ್ಷಿಸಿದರು. ತಹಶೀಲ್ದಾರ್ ಯಲ್ಲಪ್ಪ ಸುಬೇದಾರ, ಕೃಷಿ ಸಹಾಯಕ ನಿರ್ದೇಶಕ ಶರಣಗೌಡ ಅವೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು