ಚಿಂಚೋಳಿ: ತಾಲ್ಲೂಕಿನ ಬೆನಕನಳ್ಳಿ ಗ್ರಾಮದಲ್ಲಿ 8 ಮನೆಗಳಿಗೆ ಶುಕ್ರವಾರ ನಸುಕಿನಲ್ಲಿ ನೀರು ನುಗ್ಗಿದೆ ಎಂದು ಯುವ ಮುಖಂಡ ಮಲ್ಲು ರಾಯಪ್ಪಗೌಡ ತಿಳಿಸಿದ್ದಾರೆ.
ಗುರುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಗ್ರಾಮದ ಸುತ್ತಲಿನ ನೀರು ಹರಿದು ಬಂದು ಮನೆಗಳಿಗೆ ನುಗ್ಗಿದೆ ಎಂದರು.
ಚಿಂಚೋಳಿ ಮಾರ್ಗದ ರಸ್ತೆಯಲ್ಲಿ ಸಿಡಿ ಹಾಳಾಗಿದ್ದು ಅಪಾಯ ಆಹ್ವಾನಿಸುವಂತಿದೆ. ಸಿಡಿಯ ರಸ್ತೆಯಲ್ಲಿ ಕೆಳಭಾಗದ ಮಣ್ಣು ಕೊಚ್ಚಿಕೊಂಡು ಹೋಗಿದ್ದರಿಂದ ಭೋಂಗಾ ಬಿದ್ದಿವೆ. ರಸ್ತೆಯ ತುಂಬಾ ಹೊಂಡಗಳು ನಿರ್ಮಾಣವಾಗಿವೆ.
ಇದೇ ಮಾರ್ಗದ ರಸ್ತೆಯಲ್ಲಿ ಸೇಡಂ ತಾಲ್ಲೂಕಿನಿಂದ ಅಕ್ರಮವಾಗಿ ಮರಳು ತುಂಬಿದ ಲಾರಿ, ಟಿಪ್ಪರ್ ಸಂಚರಿಸುವುದರಿಂದ ರಸ್ತೆ ಸಂಪೂರ್ಣ ಹಾಳಾಗಿದೆ.
ಸಂಬಂಧಿಸಿದ ಅಧಿಕಾರಿಗಳು ಗ್ರಾಮದ ಮನೆಗಳಿಗೆ ಪ್ರವಾಹದ ನೀರು ನುಗ್ಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಮತ್ತು ರಸ್ತೆ ಹಾಗೂ ಚರಂಡಿ ಕಾಯಕಲ್ಪ ನೀಡಬೇಕೆಂದು ಮಲ್ಲು ರಾಯಪ್ಪಗೌಡ ಒತ್ತಾಯಿಸಿದರು. ಗುರುವಾರ ರಾತ್ರಿ ಭಾರಿ ಮಳೆಯಾಗಿದ್ದು, ಹೆಸರು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.