ಗುರುವಾರ , ಅಕ್ಟೋಬರ್ 21, 2021
21 °C
ಸೆಪ್ರೆಂಬರ್‌ನಲ್ಲಿ 150 ಮಿ.ಮೀ ಮಳೆ; ಮುಂಗಾರು ಅ. 10ರವರೆಗೂ ಮುಂದುವರಿಕೆ

ಕಲಬುರ್ಗಿ ಜಿಲ್ಲೆಯಲ್ಲಿ ಇನ್ನೆರಡು ದಿನ ಧಾರಾಕಾರ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ಧಾರಾಕಾರ ಮಳೆಯಾಯಿತು. ನಗರದಲ್ಲಿ ಬೆಳಿಗ್ಗೆಯಿಂದಲೇ ದಟ್ಟ ಮೋಡ ಕವಿದ ವಾತಾವರಣವಿತ್ತು. ಸಂಜೆ 4ರ ಸುಮಾರಿಗೆ ರಭಸದಿಂದ ಬೀಳಲು ಶುರುವಾದ ಮಳೆ, ತಡರಾತ್ರಿಯವರೆಗೂ ಮುಂದುವರಿಯಿತು.

ಸೆ‍. 1ರಿಂದ 23ರವರೆಗೆ ಜಿಲ್ಲೆಯಲ್ಲಿ 150 ಮಿ.ಮೀ ಮಳೆಯಾಗಿದೆ. ಆದರೆ, ವಾಡಿಕೆ ಮಳೆ ಪ್ರಮಾಣ 133 ಮಿ.ಮೀ. ಪ್ರಸಕ್ತ ಖಾರೀಪ್‌ ಹಂಗಾಮು ಅಕ್ಟೋಬರ್‌ 10ರವರೆಗೂ ಮುಂದುವರಿಯುವ ಸಾಧ್ಯತೆ ಇದೆ. ಹಾಗಾಗಿ, ಹಿಂಗಾರು ಹಂಗಾಮು ವಿಳಂಬವಾಗಲಿದೆ’ ಎನ್ನುವುದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ವಿವರ.

ಇಲ್ಲಿನ ಲಾಳಗೇರಿ, ಸೂಪರ್‌ ಮಾರ್ಕೆಟ್‌, ಕಣ್ಣಿ ಮಾರುಕಟ್ಟೆ, ಶಹಾಬಜಾರ್, ಆಳಂದ ಚೌಕ, ಮುಸ್ಲಿಂ ಚೌಕ, ಗಾಜಿಯಾಬಾದ್‌, ದರ್ಗಾ ಬಡಾವಣೆ, ಸೋನಾಯಾ ನಗರ, ವೀರೇಂದ್ರ ಪಾಟೀಲ ಬಡಾವಣೆ, ವಿಶ್ವವಿದ್ಯಾಲಯ ಪ್ರದೇಶ, ಹೈಕೋರ್ಟ್‌ ಸೇರಿದಂತೆ ಪ್ರಮುಖ ರಸ್ತೆ, ವೃತ್ತಗಳಲ್ಲೂ ನೀರು ನಿಂತುಕೊಂಡಿತ್ತು. ವೆಂಕಟೇಶ್ವರ ನಗರ, ಶಕ್ತಿನಗರ, ಶಾಸ್ತ್ರಿನಗರ, ಮಹಾವೀರ ನಗರ, ಮೋಮಿನ್‌ಪುರ, ವೀರೇಂದ್ರ ಪಾಟೀಲ ಬಡಾವಣೆ, ಎಪಿಎಂಸಿ ಪ್ರದೇಶ ಸೇರಿದಂತೆ ನಗರದ ಹೊರವಲಯದಲ್ಲೂ ಭಾರಿ ಮಳೆಯಾಯಿತು. ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸಂಚಾರ ಅಡಚಣೆ ಉಂಟಾಯಿತು.

ಜಿಲ್ಲೆಯ ಆಳಂದ, ಚಿಂಚೋಳಿ, ಕಾಳಗಿ, ಕಮಲಾಪುರ, ಶಹಾಬಾದ್‌, ಅಫಜಲಪುರ, ವಾಡಿ ಮತ್ತು ಜೇವರ್ಗಿ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಸೇಡಂ ಹಾಗೂ ಯಡ್ರಾಮಿ ತಾಲ್ಲೂಕುಗಳಲ್ಲಿ ತುಂತುರು ಮಳೆ ಬಿದ್ದಿದೆ.

ಇನ್ನೂ ಎರಡು ದಿನ ಮಳೆ: ‘ಈ ಬಾರಿ ಮುಂಗಾರು ಮತ್ತೆ ಕಸುವು ಪಡೆದಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಈ ರೀತಿ ಹದವಾದ ಮಳೆ ಬೀಳುತ್ತಿದೆ. ಸೆಪ್ಟೆಂಬರ್‌ 25ರವರೆಗೂ ಜಿಲ್ಲೆಯಲ್ಲಿ ಇದೇ ರೀತಿ ಮಳೆ ಸುರಿಯಲಿದೆ’ ಎಂದು ಕೃಷಿ ಸಂಶೋಧನಾ ಕೇಂದ್ರದ ತಾಂತ್ರಿಕ ಅಧಿಕಾರಿ ಬಸವರಾಜ ಬಿರಾದಾರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು