ಕಲಬುರ್ಗಿಯಲ್ಲಿ ಭಾರಿ ಮಳೆ

ಕಲಬುರ್ಗಿ: ನಗರದಲ್ಲಿ ಗುರುವಾರ ಸಂಜೆ ಒಂದು ಗಂಟೆಗೂ ಅಧಿಕ ಕಾಲ ಭಾರಿ ಮಳೆ ಸುರಿಯಿತು. ಹಲವು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಇಡೀ ನಗರ ತಂಪಾಗಿದೆ. ಏಕಾಏಕಿ ರಭಸದಿಂದ ಸುರಿಯಲು ಆರಂಭಿಸಿದ ಮಳೆಯಿಂದಾಗಿ ನಗರದ ರಸ್ತೆಗಳು, ಚರಂಡಿಗಳು ತುಂಬಿ ಹರಿದವು.
ವಾಣಿಜ್ಯ ಮಳಿಗೆಗಳ ನೆಲಮಹಡಿಯಲ್ಲಿ ನೀರು ನಿಂತುಕೊಂಡು ಕೆಲವೆಡೆ ಅವಾಂತರ ಸೃಷ್ಟಿಸಿತು. ಸ್ಟೇಶನ್ ರಸ್ತೆಯ ಸಾರಿಗೆ ಸದನದ ಬಳಿ ಇರುವ ನೆಲಮಹಡಿಯ ಅಂಗಡಿಗಳಲ್ಲಿನ ವಸ್ತುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಕಳೆದ ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ಅಂಗಡಿಗಳಿಗೆ ನುಗ್ಗಿದ್ದ ನೀರು ಲಕ್ಷಾಂತರ ರೂಪಾಯಿ ಹಾನಿಗೆ ಕಾರಣವಾಗಿತ್ತು.
ಸುಮಾರು 15 ದಿನಗಳಿಂದ ನಿಯಮಿತವಾಗಿ ಮಳೆ ಸುರಿಯುತ್ತಿರುವುದರಿಂದ ಗುಲಬರ್ಗಾ ವಿಶ್ವವಿದ್ಯಾಲಯ, ಹುಮನಾಬಾದ್ ರಸ್ತೆಯಲ್ಲಿ ಹಸಿರ ವನರಾಶಿ ಮನಸೂರೆಗೊಳ್ಳುತ್ತಿದೆ. ಕೆರೆ ಕಟ್ಟೆಗಳು ಭರ್ತಿಯಾಗುವ ಹಂತ ತಲುಪಿದ್ದು, ಚಿಂಚೋಳಿ ತಾಲ್ಲೂಕಿನ ತೆಲಂಗಾಣದ ಗಡಿಯಲ್ಲಿರುವ ಎತ್ತಿಪೋತೆ ಜಲಪಾತ ಮೈದುಂಬಿ ಹರಿಯುತ್ತಿದೆ.
ಮಳೆ ಬರುವುದನ್ನು ಕಾಯುತ್ತಿದ್ದ ಜಿಲ್ಲೆಯ ರೈತರು ಬಹುತೇಕ ಬಿತ್ತನೆ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.