ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಹಳ್ಳಕ್ಕೆ ಬೆಚ್ಚಿಬಿದ್ದ ‘ಪಟ್ಟಣ’ ಗ್ರಾಮಸ್ಥರು

ಸತತ ಆರು ಗಂಟೆ ಸೇತುವೆ ಮೇಲೆ ಹರಿದ ಪ್ರವಾಹದ ನೀರು
Last Updated 21 ಸೆಪ್ಟೆಂಬರ್ 2021, 16:21 IST
ಅಕ್ಷರ ಗಾತ್ರ

ಕಲಬುರ್ಗಿ: ಆಳಂದ ರಸ್ತೆಯಲ್ಲಿರುವ ಕಲಬುರ್ಗಿ ತಾಲ್ಲೂಕಿನ ಪಟ್ಟಣವನ್ನು ಸಂಪರ್ಕಿಸುವ ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ ಭಾರಿ ಮಳೆಗೆ ಸುತ್ತಮುತ್ತಲಿನ ಗ್ರಾಮಗಳ ಪ್ರವಾಹದ ನೀರು ಹಳ್ಳಕ್ಕೆ ಸೇರಿದ್ದರಿಂದ ಸುಮಾರು ಆರು ತಾಸು ಗ್ರಾಮಕ್ಕೆ ಸಂಚಾರ ಅಕ್ಷರಶಃ ಸ್ಥಗಿತಗೊಂಡಿತ್ತು.

ಸೋಮವಾರ ಸಂಜೆಯವಷ್ಟೇ ಇದೇ ರಸ್ತೆಯಲ್ಲಿ ಹಾದು ಹೋಗಿದ್ದ ಜನರು ಬೆಳಿಗ್ಗೆ ತಮ್ಮ ವ್ಯಾಪಾರ ವಹಿವಾಟಿಗಾಗಿ ಕಲಬುರ್ಗಿಗೆ ಬರುತ್ತಿದ್ದ ಸಂದರ್ಭದಲ್ಲೇ ರಸ್ತೆ ಮಧ್ಯದ ಕಿರು ಸೇತುವೆ ಮೇಲೆ ಭಾರಿ ಪ್ರಮಾಣದ ಹಳ್ಳದ ನೀರು ಹರಿಯುತ್ತಿತ್ತು. ಸೇತುವೆ ಮೇಲಿಂದ ಸುಮಾರು ಮೂರು ಅಡಿಯವರೆಗೆ ನೀರು ಭಾರಿ ರಭಸದಿಂದ ಹರಿಯುತ್ತಿದ್ದುದರಿಂದ ಗ್ರಾಮಸ್ಥರು ತಮ್ಮ ವಾಹನಗಳೊಂದಿಗೆ ಹಳ್ಳದ ಆಚೆಯೇ ನಿಂತರು.

ಆದರೂ ಕೆಲವರು ಧೈರ್ಯ ಮಾಡಿ ಇತರರ ಸಹಾಯದಿಂದ ಬೈಕ್ ಚಲಾಯಿಸಿಕೊಂಡು ಈಚೆಯ ದಡ ಸೇರಿದರು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಸಾರಿಗೆ ಸಂಸ್ಥೆಯ ಬಸ್‌ ಕೆಲ ಹೊತ್ತು ಪ್ರಯಾಣಿಕರನ್ನು ಹೊತ್ತು ದಡದಲ್ಲಿಯೇ ನಿಂತಿತ್ತು. ಬಸ್‌ನ ಚಕ್ರಗಳು ಸಲೀಸಾಗಿ ಪ್ರವಾಹ ದಾಟಬಹುದು ಎಂದು ಪ್ರಯಾಣಿಕರು ಹೇಳಿದ್ದರಿಂದ ಬಸ್ ಚಾಲಕ ಹಳ್ಳ ದಾಟಿಸಿಕೊಂಡು ಪಟ್ಟಣಕ್ಕೆ ತೆರಳಿದರು.

ನೀರಲ್ಲಿ ನಿಂತ ತೊಗರಿ: ಸಾವಳಗಿ, ಪಟ್ಟಣ, ಕೆರಿಬೋಸಗಾ, ಯಳವಂತಗಿ, ಹತಗುಂದಾ ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ 2.30ರಿಂದ ಬೆಳಿಗ್ಗೆ 5ರವರೆಗೆ ಭಾರಿ ಮಳೆ ಸುರಿದಿದ್ದರಿಂದ ಬಿತ್ತನೆ ಮಾಡಿದ್ದ ತೊಗರಿ ಬೆಳೆ ಸಂಪೂರ್ಣವಾಗಿ ನೀರಿನಲ್ಲಿ ನಿಂತಿದೆ. ಪಟ್ಟಣದ ರೈತ ಗುಂಡೇರಾಯ ದೂಳಗೊಂಡ ಅವರ ಜಮೀನಿನಲ್ಲಿ ಬೆಳೆದಿರುವ ಚಿಕ್ಕು ಗಿಡಗಳು ಜಲಾವೃತವಾಗಿದ್ದವು. ಆಳಂದ ರಸ್ತೆಯ ಇಕ್ಕೆಲಗಳಲ್ಲಿಯೂ ನೀರು ನಿಂತಿತ್ತು.

ಎರಡನೇ ಬಾರಿ ಹಳ್ಳ: ಒಂದು ತಿಂಗಳ ಅವಧಿಯಲ್ಲಿ ಪಟ್ಟಣದ ಮೂಲಕ ಹಾಯ್ದು ಹೋಗಿರುವ ಹಳ್ಳವು ಎರಡನೇ ಬಾರಿ ತುಂಬಿ ಹರಿಯಿತು. ಇದರಿಂದಾಗಿ ಬೆಳಿಗ್ಗೆ ಜನ ಸಂಚಾರದಲ್ಲಿ ವ್ಯತ್ಯಯವುಂಟಾಯಿತು.

ಸಾವಳಗಿಯಲ್ಲಿ 75 ಎಂ.ಎಂ. ಮಳೆ

ಕಲಬುರ್ಗಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ಅತಿ ಹೆಚ್ಚು ಅಂದರೆ 75 ಮಿಲಿ ಮೀಟರ್ ಮಳೆ ಸುರಿದಿದೆ. ಪಟ್ಟಣದಲ್ಲಿ 36 ಎಂ.ಎಂ. ಮಳೆ ಸುರಿದಿದ್ದು, ಹೊಲಗಳಲ್ಲಿ ನೀರು ನಿಂತಿದ್ದು, ಬೆಳೆಗಳು ಕೊಳೆತು ಹೋಗುವ ಸ್ಥಿತಿ ತಲುಪಿದೆ.

ತೊಗರಿ, ಉಳ್ಳಾಗಡ್ಡಿ, ಹೆಸರು, ಸೋಯಾ ಬೆಳೆಗಳಿಗೆ ಭಾರಿ ಪ್ರಮಾಣದಲ್ಲಿ ಹಾನಿಯಾಯಿತು.

ಸೇಡಂ, ಕಾಳಗಿ ಹಾಗೂ ಯಡ್ರಾಮಿ ತಾಲ್ಲೂಕಿನ ಹಲವೆಡೆ ಮಂಗಳವಾರ ಮಧ್ಯಾಹ್ನ ಹಾಗೂ ಸಂಜೆ ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT