ಶನಿವಾರ, ಆಗಸ್ಟ್ 13, 2022
24 °C
ನಗರ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಮಳೆ; ಆಕರ್ಷಣೆಯ ಕೇಂದ್ರವಾದ ಭೋಸಗಾ ಕೆರೆ–ಯುವಕರ ಸೆಲ್ಫಿ ಸಂಭ್ರಮ

ಸತತ ಮೂರನೇ ದಿನವೂ ಬಿರುಸಿನ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಸತತ ಮೂರನೇ ದಿನವೂ ಕಲಬುರ್ಗಿ ನಗರದಲ್ಲಿ ಗುರುವಾರ ಬಿರುಸಿನ ಮಳೆ ಸುರಿಯಿತು. ಬೆಳಿಗ್ಗೆ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಸಂದರ್ಭದಲ್ಲಿ ಬಿಡುವು ಕೊಟ್ಟ ಮಳೆ ಮಧ್ಯಾಹ್ನದ ಬಳಿಕ ಬಿರುಸಿನಿಂದ ಸುರಿಯಿತು. ಇದರಿಂದಾಗಿ ಜನರು ತಮ್ಮ ದೈನಂದಿನ ಕೆಲಸಗಳಿಗಾಗಿ ಸಂಜೆ ಹೊರಗೆ ಹೋಗುವುದನ್ನು ಕೈಬಿಟ್ಟರು.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಬಡಾವಣೆಗಳಲ್ಲಿನ ಹಳೆಯ ಮನೆಗಳು ಶಿಥಿಲಗೊಂಡಿದ್ದು, ಯಾವುದೇ ಕ್ಷಣಗಳಲ್ಲಿ ಬೀಳುವ ಆತಂಕ ಎದುರಾಗಿದೆ. ನಗರದ ಚರಂಡಿಗಳು, ನಾಲಾಗಳಲ್ಲಿ ನೀರು ನಿಂತುಕೊಂಡಿದ್ದು, ಹೆಚ್ಚುವರಿ ನೀರು ರಸ್ತೆಯ ಮೇಲೆ ನಿಲ್ಲುತ್ತಿದೆ. ಜಿಲ್ಲಾ ನ್ಯಾಯಾಲಯದಿಂದ ಜೆಸ್ಕಾಂ ಕೇಂದ್ರ ಕಚೇರಿಗೆ ತೆರಳುವ ರಸ್ತೆ, ಕೆಬಿಎನ್ ಆಸ್ಪತ್ರೆ ಎದುರಿನ ರಸ್ತೆಯಲ್ಲಿ ಸಾಕಷ್ಟು ನೀರು ನಿಂತುಕೊಂಡಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

ಆಳಂದ ರಸ್ತೆಯ ರಾಣೇಶಪೀರ ದರ್ಗಾ ಬಳಿಯ ಕೃಷಿ ಮಹಾವಿದ್ಯಾಲಯಕ್ಕೆ ತೆರಳುವ ರಸ್ತೆಯೂ ಮಳೆಯಿಂದಾಗಿ ಸಂಪೂರ್ಣ ಹದಗೆಟ್ಟಿದ್ದು, ಆ ರಸ್ತೆಯಲ್ಲಿ ಹೋದವರಿಗೆ ಕೆಸರಿನ ಮಜ್ಜನ ಸಾಮಾನ್ಯ ಎನ್ನುವಂತಾಗಿದೆ. ಹಲವು ವಾಹನ ಸವಾರರು ನೀರಿನಲ್ಲಿರುವ ತಗ್ಗುಗಳನ್ನು ಗಮನಿಸದೇ ಬಿದ್ದು ಗಾಯ ಮಾಡಿಕೊಂಡಿರುವ ಘಟನೆಗಳು ನಡೆದಿವೆ.

ಕೋಡಿ ಬಿದ್ದ ಭೋಸಗಾ ಕೆರೆ: ನಗರಕ್ಕೆ ನೀರು ಪೂರೈಸುತ್ತಿದ್ದ ತಾಲ್ಲೂಕಿನ ಕೆರಿ ಭೋಸಗಾ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಸಾಕಷ್ಟು ಮಳೆಯಾಗುತ್ತಿರುವುದರಿಂದ ಕೋಡಿ ಬಿದ್ದಿದೆ. ಹೀಗಾಗಿ, ಇದೊಂದು ಪ್ರವಾಸಿ ತಾಣವಾಗಿದ್ದು, ಜನರನ್ನು ಆಕರ್ಷಿಸುತ್ತಿದೆ. ಭಾರಿ ಪ್ರಮಾಣದ ನೀರು ಕೆರೆಯಿಂದ ಕೋಡಿ ಮೂಲಕ ಹೋಗುತ್ತಿದ್ದು, ಅದರಲ್ಲಿಯೇ ಕೆಲ ಯುವಕರು ನಿಂತು ಫೋಟೊ ತೆಗೆಸಿಕೊಳ್ಳುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಪೊಲೀಸರ ಗಸ್ತನ್ನು ಹೆಚ್ಚಿಸಲಾಗಿದೆ. ಪೊಲೀಸರು ಯುವಕರಿಗೆ ತಿಳಿವಳಿಕೆ ನೀಡಿ ಅಲ್ಲಿಂದ ಕಳಿಸುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಕೆರೆ ಏರಿಯ ದ್ವಾರವನ್ನು ಮುಚ್ಚಲಾಗಿದ್ದು, ಕೋಡಿ ಬೀಳುವಲ್ಲಿ ತೆರಳುವ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು