ಮಂಗಳವಾರ, ನವೆಂಬರ್ 19, 2019
29 °C

ಕಲ್ಯಾಣ ಕರ್ನಾಟಕ: ದಿನಾಚರಣೆಯೋ ಉತ್ಸವವೋ?

Published:
Updated:

ಕಲಬುರ್ಗಿ: ನಿಜಾಮನ ಆಳ್ವಿಕೆಯಿಂದ ಬಿಡುಗಡೆಗೊಂಡು ಭಾರತ ಒಕ್ಕೂಟದ ಸೇರಿದ್ದಕ್ಕಾಗಿ ಪ್ರತಿ ವರ್ಷ ಸೆ 17ರಂದು ಆಚರಿಸಲಾಗುವ ಹೈ–ಕ ವಿಮೋಚನಾ ದಿನಾಚರಣೆಗೆ ಈ ಬಾರಿ ವಿಶೇಷ ಕಳೆ ಬಂದಿದ್ದು, ಸರ್ಕಾರ ಖುದ್ದು ಆಸಕ್ತಿ ವಹಿಸಿ ‘ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ’ಯನ್ನಾಗಿ ಆಚರಿಸಲು ಮುಂದಾಗಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಈಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನಾಗಿ ಬದಲಾಯಿಸಿ ಆದೇಶ ಹೊರಡಿಸಿತ್ತು. ಜೊತೆಗೆ ಇಡೀ ಭಾಗವನ್ನು ಕಲ್ಯಾಣ ಕರ್ನಾಟಕ ಎಂದೇ ಗುರುತಿಸಲು ಆಸ್ಥೆ ವಹಿಸಿದ ಪರಿಣಾಮ ಹೈ–ಕ ವಿಮೋಚನಾ ದಿನಾಚರಣೆ ಹೆಸರನ್ನು ಬದಲಾಯಿಸಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಎಂದು ಮರುನಾಮಕರಣಗೊಳಿಸಿತ್ತು.

ಇದು ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ಕಲ್ಯಾಣ ಕರ್ನಾಟಕ ವಿಮೋಚನೆ ಎಂಬ ಹೆಸರು ಶರಣರಿಗೆ ಮಾಡಿದ ಅಪಮಾನದಂತಿದೆ ಎಂದು ಬಸವ ತತ್ವ ಅನುಯಾಯಿಗಳು ಹಾಗೂ ವಿರೋಧ ಪಕ್ಷದ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು.

ಇದರಿಂದ ಸರ್ಕಾರ ಎಚ್ಚೆತ್ತುಕೊಂಡಿದ್ದು, ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯನ್ನಾಗಿ ಬದಲಾಯಿಸಿ ಆದ ತಪ್ಪನ್ನು ತಿದ್ದಿಕೊಂಡಿದೆ. ಮುಖ್ಯಮಂತ್ರಿ ಅವರ ಪ್ರವಾಸ ಪಟ್ಟಿಯಲ್ಲಿಯೂ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಬದಲಾಗಿದೆ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಂದೇ ಉಲ್ಲೇಖಿಸಲಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆಯನ್ನು ಬಿಎಸ್‌ವೈ ಅದೇ ವೇದಿಕೆ ಮೇಲೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಸೇಡಂನ ಬಿಜೆಪಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರು ಹೈದರಾಬಾದ್‌ ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ಬದಲಾಯಿಸುವಂತೆ ಈ ಭಾಗದ ಎಲ್ಲ ಶಾಸಕರ ಸಹಿ ಸಂಗ್ರಹಿಸಿ ಮುಖ್ಯಮಂತ್ರಿಗೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರತಿಕ್ರಿಯಿಸಿ (+)