ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣ ಶೀಘ್ರ ಆರಂಭಿಸಲು ಕ್ರಮ: ಸಂಸದ ಉಮೇಶ ಜಾಧವ ಭರವಸೆ

Last Updated 3 ಜೂನ್ 2019, 15:38 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದಲ್ಲಿರುವ ವಿಮಾನ ನಿಲ್ದಾಣದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ವಿಮಾನ ಸಂಚಾರಕ್ಕೆ ಅಗತ್ಯವಾದ ಅನುಮತಿಯನ್ನುಭಾರತೀಯ ವಿಮಾನಯಾನ ಪ್ರಾಧಿಕಾರದಿಂದ (ಎಎಐ) ಪಡೆದುಕೊಂಡು ವಿಮಾನ ಆರಂಭಿಸಬೇಕು ಎಂದು ಹೈದರಾಬಾದ್‌ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಎಚ್‌ಕೆಸಿಸಿಐ) ಅಧ್ಯಕ್ಷ ಅಮರನಾಥ ಪಾಟೀಲ ಅವರು ಸಂಸದ ಡಾ.ಉಮೇಶ ಜಾಧವ ಅವರಿಗೆ ಮನವಿ ಮಾಡಿದರು.

ಎಚ್‌ಕೆಸಿಸಿಐ ಕಚೇರಿಗೆ ಸೋಮವಾರ ಭೇಟಿ ನೀಡಿದ್ದ ಸಂಸದರೊಂದಿಗೆ ಅವರು ಈ ಭಾಗದಲ್ಲಿ ಆಗಬೇಕಾಗಿರುವ ಕಾರ್ಯಗಳ ಕುರಿತು ಚರ್ಚೆ ನಡೆಸಿದರು.

ಮೂಲಸೌಕರ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್ ದವೆ ಅವರಿಗೆ ಕರೆಮಾಡಿದ ಜಾಧವ, ‘ವಿಮಾನ ನಿಲ್ದಾಣ ಪ್ರಾರಂಭಿಸಲು ಏನೇನು ಕ್ರಮ ಕೈಗೊಂಡಿದ್ದೀರಿ ಯಾವ ಹಂತದಲ್ಲಿದೆ’ ಎಂಬ ಮಾಹಿತಿ ಪಡೆದುಕೊಂಡರು.

‘ಕಲಬುರ್ಗಿ ಎಚ್‌ಕೆಸಿಸಿಐ ಕಚೇರಿಗೆ ವಿಮಾನಯಾನ ಪ್ರಾಧಿಕಾರದಿಂದ ಪತ್ರ ಬಂದಿದ್ದು, ರಾಜ್ಯ ಸರ್ಕಾರ ಹಾಗೂ ಎ.ಎ.ಐ. ನಡುವೆ ಒಪ್ಪಂದ ಆಗಬೇಕಾಗಿದೆ. ಆದಷ್ಟು ಬೇಗ ಒಡಂಬಡಿಕೆ ಮಾಡಿಕೊಂಡಿದ್ದೇ ಆದಲ್ಲಿ ಕೇಂದ್ರ ವಿಮಾನಯಾನ ಸಚಿವರೊಂದಿಗೆ ಮಾತಾಡಿ ವಿಮಾನ ಹಾರಾಟ ಆರಂಭಿಸಲಾಗುವುದು’ ಎಂದು ಜಾಧವ ತಿಳಿಸಿದರು.

2013ರಲ್ಲಿ ಕೇಂದ್ರಸರ್ಕಾರದಿಂದ ಮಂಜೂರಾಗಿರುವ ರಾಷ್ಟ್ರೀಯ ಬಂಡವಾಳ ಹಾಗೂ ಉತ್ಪಾದನಾ ವಲಯದ ಸ್ಥಾಪನೆಗೆ ಬೇಕಾಗುವ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕು ಎಂದು ಮನವಿ ಮಾಡಿದರು.

ಕುಡಿಯುವ ನೀರಿನ ಶಾಶ್ವತ ಯೋಜನೆಗಾಗಿ ಆಲಮಟ್ಟಿ ಜಲಾಶಯದಿಂದ 4 ಇಲ್ಲವೇ 5 ಟಿ.ಎಂ.ಸಿ. ಅಡಿ ನೀರನ್ನು ಕಲಬುರ್ಗಿ ನಗರಕ್ಕೆ ತೆಗೆದುಕೊಳ್ಳುವಂತಹ ಯೋಜನೆಯನ್ನು ರೂಪಿಸಿದ್ದೇ ಆದರೆ ಶಾಶ್ವತವಾಗಿ 10 ತಲೆಮಾರಿನವರೆಗೆ ಕುಡಿಯುವ ನೀರಿನ ಜ್ವಲಂತ ಸಮಸ್ಯೆಗೆ ಪರಿಹಾರ ದೊರಕುವುದು ಎಂದು ಜಾಧವ ಹೇಳಿದರು.

ಹೈ.ಕ. ಪ್ರದೇಶದ ಮುಖ್ಯ ಬೆಳೆಯಾಗಿರುವ ತೊಗರಿಯ ಉಳಿವಿಗಾಗಿ ಭಾವಾಂತರ ಯೋಜನೆಯನ್ನು ಅಳವಡಿಸಬೇಕೆಂದು ಹಾಗೂ ಅದಕ್ಕೆ ಸಂಬಂಧಿಸಿದ ದಾಲ್ ಮಿಲ್ ಉದ್ಯಮದ ಪುನರುಜ್ಜೀವಕ್ಕಾಗಿ ವಿಶೇಷ ಆರ್ಥಿಕ ನೆರವನ್ನು ಪಡೆಯಲು ಸಂಸದರು ಪ್ರಯತ್ನಿಸಬೇಕೆಂದು ಸಂಸ್ಥೆಯ ಸದಸ್ಯರು ಮನವಿ ಮಾಡಿಕೊಂಡರು.

ಕಲಬುರ್ಗಿಯಲ್ಲಿ ರೈಲ್ವೆ ವಲಯ ಸ್ಥಾಪನೆಗೆ 2014ರಲ್ಲಿ ಭಾರತ ಸರ್ಕಾರ ಮಂಜೂರಾತಿ ನೀಡಿದ್ದು, ಅದರಂತೆ ರೈಲು ವಿಭಾಗವನ್ನು ಕಲಬುರಗಿಯಲ್ಲಿ ಸ್ಥಾಪಿಸಲು ಪ್ರಯತ್ನಿಸಬೇಕು ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಜಾಧವ, ರೈಲ್ವೆ ವಿಭಾಗ ಮಟ್ಟದ ಕಚೇರಿಯನ್ನು ಶೀಘ್ರವೇ ಪ್ರಾರಂಭಿಸುವುದಾಗಿ ತಿಳಿಸಿದರು. ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಭೇಟಿ ರೈಲ್ವೆ ಮಂತ್ರಾಲಯಕ್ಕೆ ಕೊಟ್ಟಿದ್ದು, ನಮ್ಮವರೇ ಆದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿಯವರೊಂದಿಗೆ ಚರ್ಚಿಸಿದ್ದೇನೆ. ಆದಷ್ಟು ಬೇಗ ಸಿಹಿ ಸುದ್ದಿ ಕೊಡುವೆ ಎಂದು ತಿಳಿಸಿದರು.

ಸಂಸ್ಥೆ ಮಾಜಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ, ಕಾರ್ಯಕಾರಿಣಿ ಸಮಿತಿಯ ಉಪಾಧ್ಯಕ್ಷ ಶರಣಬಸಪ್ಪ ಪಪ್ಪ, ಗೌರವ ಕಾರ್ಯದರ್ಶಿ ಶಶಿಕಾಂತ ಬಿ. ಪಾಟೀಲ, ಜಂಟಿ ಗೌರವ ಕಾರ್ಯದರ್ಶಿ ರವಿಕುಮಾರ ಸರಸಂಬಿ, ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ಸಂತೋಷಕುಮಾರ ಲಂಗರ್, ಶಿವರಾಜ ಇಂಗಿನಶೆಟ್ಟಿ, ವೀರೇಂದ್ರ ಬಾಸರೆಡ್ಡಿ, ಇರ್ಫಾನ್‌ ಅಹಮದ್, ಮನಿಷ್ ಜಾಜು, ಗೋಪಾಲ್ ಬುಚ್ಚನಳ್ಳಿ, ಜಗದೀಶ ಕಡಗಂಚಿ, ಆನಂದ ದಂಡೋತಿ, ಅಮಿತ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT