ಸೋಮವಾರ, ಅಕ್ಟೋಬರ್ 21, 2019
26 °C
ಹೈದರಾಬಾದ್‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಅಮರನಾಥ ಪಾಟೀಲ ಟೀಕೆ

ಕೈಗಾರಿಕಾ ನೀತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ

Published:
Updated:
Prajavani

ಕಲಬುರ್ಗಿ: ವಿಧಾನಮಂಡಲ ಅಧಿವೇಶನ ಮುಕ್ತಾಯವಾದ ಕೂಡಲೇ ಅನುಮೋದನೆಯಾಗಲಿರುವ 2019–2024ನೇ ಸಾಲಿನ ಕೈಗಾರಿಕಾ ನೀತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಮಾರಕವಾದ ಅಂಶಗಳಿದ್ದು, ಅವುಗಳನ್ನು ಕೂಡಲೇ ತೆಗೆದು ಹಾಕಬೇಕು ಎಂದು ಹೈದರಾಬಾದ್‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್‌ಕೆಸಿಸಿಐ) ಅಧ್ಯಕ್ಷ ಅಮರನಾಥ ಪಾಟೀಲ ಒತ್ತಾಯಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೊದಲು ನಮ್ಮ ಭಾಗವನ್ನು ಕೈಗಾರಿಕಾ ವಲಯ 1ರಲ್ಲಿ ಸೇರಿಸಲಾಗಿತ್ತು. ಇದರಿಂದ ಒಂದಷ್ಟು ಉತ್ತೇಜನಗಳು ಸಿಗುವ ಸಾಧ್ಯತೆ ಇತ್ತು. ಈಗ ವಲಯ 1ರಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಜೊತೆಗೆ ಮುಂಬೈ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸೇರ್ಪಡೆ ಮಾಡುವ ಹುನ್ನಾರ ನಡೆದಿದ್ದು, ಇದರಿಂದ ಮೊದಲೇ ಕೈಗಾರಿಕೆಯಲ್ಲಿ ಹಿಂದುಳಿದ ಕಲಬುರ್ಗಿ ಕಂದಾಯ ವಿಭಾಗದ ಜಿಲ್ಲೆಗಳಲ್ಲಿನ ಕೈಗಾರಿಕಾ ಪ್ರಗತಿ ಕುಂಠಿತವಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಆರ್ಥಿಕವಾಗಿ ಹಿಂದುಳಿದ ಈ ಭಾಗದ ಅಭಿವೃದ್ಧಿಗಾಗಿ ನಂಜುಂಡಪ್ಪ ವರದಿಯು ಶೇ 40ರಷ್ಟು ಬಜೆಟ್‌ನಲ್ಲಿ ಹಣ ಮೀಸಲಿಡಬೇಕು ಎಂದು ಶಿಫಾರಸು ಮಾಡಿತ್ತು. 2015ರಿಂದ 2019ರ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ₹ 4 ಸಾವಿರ ಕೋಟಿ ಬಿಡುಗಡೆ ಮಾಡಬೇಕಿತ್ತು. ಆದರೆ, ₹ 2500 ಕೋಟಿ ಬಿಡುಗಡೆ ಮಾಡಿದೆ. ಇದರಿಂದ ಈ ಭಾಗಕ್ಕೆ ಅನ್ಯಾಯವಾದಂತಾಗುವುದಿಲ್ಲವೇ ಎಂದು ಪಾಟೀಲ ಪ್ರಶ್ನಿಸಿದರು.

ಬೃಹತ್‌ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಹಾಗೂ ಸುರೇಶ ಅಂಗಡಿ ಅವರು ಪ್ರಭಾವಿ ಸಚಿವರು. ಹೀಗಾಗಿ, ಕೈಗಾರಿಕೆಗಳಿಗೆ ದೊರೆಯುವ ಅನುಕೂಲತೆಗಳನ್ನು ತಮ್ಮ ಜಿಲ್ಲೆಗಳಿಗೆ ಪಡೆಯುವ ಸಾಧ್ಯತೆಗಳಿವೆ. ಈಗಾಗಲೇ ಜೋಶಿಯವರು ರಾಯಚೂರು ಜಿಲ್ಲೆಗೆ ಮಂಜೂರಾಗಿದ್ದ ಐಐಟಿಯನ್ನು ಧಾರವಾಡಕ್ಕೆ ಒಯ್ದಿದ್ದಾರೆ. ಹೀಗಾಗಿ, ಕೈಗಾರಿಕಾ ವಲಯ 1ರಲ್ಲಿ ಕಲ್ಯಾಣ ಕರ್ನಾಟಕ ಭಾಗವನ್ನು ಮಾತ್ರ ಉಳಿಸಿಕೊಂಡು ಮುಂಬೈ ಕರ್ನಾಟಕ ಜಿಲ್ಲೆಗಳನ್ನು ಕೈಬಿಡಬೇಕು. ಕೈಬಿಡಲು ಆಗದಿದ್ದರೆ ನಮ್ಮ ಭಾಗಕ್ಕೆ ವಿಶೇಷ ಸೌಕರ್ಯಗಳನ್ನಾದರೂ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಈ ಭಾಗದಲ್ಲಿ ಕೈಗಾರಿಕೆ ಬೆಳವಣಿಗೆ ದೃಷ್ಟಿಯಿಂದ ವಿಶೇಷ ಆರ್ಥಿಕ ವಲಯಗಳನ್ನು ಆರಂಭಿಸಬೇಕು. ಕೈಗಾರಿಕಾ ವಲಯಕ್ಕೆ ನೀರಿನ ಕೊರತೆಯಾಗದಂತೆ ಆಲಮಟ್ಟಿ ಅಣೆಕಟ್ಟಿಯಿಂದ ನೀರನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು. ಕರ್ನಾಟಕ ರಾಜ್ಯ ಹಣಕಾಸು ನಿಗಮದಿಂದ ಶೇ 4ರ ಬಡ್ಡಿ ದರದಲ್ಲಿ 10 ವರ್ಷಗಳ ದೀರ್ಘಾವಧಿಗೆ ಸಾಲಗಳನ್ನು ನೀಡಬೇಕು. ತೊಗರಿ ಬೇಳೆಯನ್ನು ಕೃಷಿ ಆಧಾರಿತ ಉದ್ಯಮ ಎಂದು ಪರಿಗಣಿಸಿ ಸವಲತ್ತು ನೀಡಬೇಕು ಎಂದು ಆಗ್ರಹಿಸಿದರು.

ಎಚ್‌ಕೆಸಿಸಿಐ ಗೌರವ ಕಾರ್ಯದರ್ಶಿ ಶಶಿಕಾಂತ ಬಿ. ಪಾಟೀಲ, ಉಪಾಧ್ಯಕ್ಷ ಶರಣು ಪಪ್ಪಾ ಗೋಷ್ಠಿಯಲ್ಲಿದ್ದರು.

Post Comments (+)