ಗುರುವಾರ , ನವೆಂಬರ್ 21, 2019
22 °C
ಕೇಂದ್ರದ ನಿಲುವಿಗೆ ಸ್ವದೇಶಿ ಜಾಗರಣ ಮಂಚ್‌ ವಿರೋಧ

‘ಭಾರತ–ಚೀನಾ ಆರ್ಥಿಕ ಒಪ್ಪಂದ ಮಾರಕ’

Published:
Updated:
Prajavani

ಕಲಬುರ್ಗಿ: ಭಾರತವು ಚೀನಾದೊಂದಿಗೆ ಕ್ಷೇತ್ರೀಯ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ ಮಾಡಿಕೊಂಡರೆ ದೇಶದ ಕೈಗಾರಿಕೆಗಳು ಮುಚ್ಚುವ ಪರಿಸ್ಥಿತಿ ಬರಬಹುದು ಎಂದು ಸ್ವದೇಶಿ ಜಾಗರಣ ಮಂಚ್‌ನ ಅಖಿಲ ಭಾರತ ಸಹ ಸಂಯೋಜಕ ಸತೀಶಕುಮಾರ್‌ ಕಳವಳ ವ್ಯಕ್ತಪಡಿಸಿದರು.

ಹೈದರಾಬಾದ್‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈ ಸಹಭಾಗಿತ್ವವು ದೇಶದ ಪ್ರಗತಿಗೆ ಮಾರಕವಾಗಲಿದ್ದು, ದೇಶದಲ್ಲಿ ನಿರುದ್ಯೋಗ ಸಮಸ್ಯೆಯು ಉಲ್ಬಣಗೊಳ್ಳಲಿದೆ. ಕೈಗಾರಿಕಾ ವಲಯಕ್ಕೆ ಧಕ್ಕೆ ಬರಬಹುದಾಗಿದೆ. ಹೀಗಾಗಿ ನಾವು ಅದರಲ್ಲಿ ಸೇರಬಾರದು ಎಂದು ಆಗ್ರಹಿಸಿದರು.

‘ಚೀನಾ ದೇಶದೊಂದಿಗೆ ಈಗಾಗಲೇ ಇರುವ ಪ್ರತಿಕೂಲ ವ್ಯಾಪಾರ ಪರಿಸ್ಥಿತಿ 2001ರಿಂದ ಪ್ರತಿಕೂಲವಾಗಿಯೇ ಮುಂದುವರೆದಿದೆ. 2001–02ರಲ್ಲಿ ಕೇವಲ ಒಂದು ಬಿಲಿಯನ್ ಇದ್ದ ಸರಕು ವ್ಯಾಪಾರದ ಕೊರತೆ 2012–13ರ ಹೊತ್ತಿಗೆ 39 ಬಿಲಿಯನ್ ಡಾಲರಿಗೆ ಏರಿದೆ. 2015-16ರ ಹೊತ್ತಿಗೆ ಅದು 53 ಬಿಲಿಯನ್ ಡಾಲರಿಗೆ ಹೆಚ್ಚಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕ್ಷೇತ್ರೀಯ ಸಮಗ್ರ ಆರ್ಥಿಕ ಸಹಭಾಗಿತ್ವ ಅಡಿಯಲ್ಲಿ ಭಾರತವು ಚೀನಾದ ಸರಕುಗಳನ್ನು ಆಮದು ಸುಂಕವನ್ನು ಹಾಕದೇ ಮುಕ್ತವಾಗಿ ಆಮದಿಗೆ ಅವಕಾಶ ನೀಡಿದರೆ ನಮ್ಮ ಕೈಗಾರಿಕೆಗಳು, ಉದ್ಯೋಗ ಹಾಗೂ ಆರ್ಥಿಕತೆಯ ಗತಿ ಏನು’ ಎಂದು ಪ್ರಶ್ನಿಸಿದರು.

ಕಳೆದ ಆಗಸ್ಟ್‌ನಲ್ಲಿ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಈ ಸಹಭಾಗಿತ್ವ ಕುರಿತು ಕರೆದ ಸಭೆಯಲ್ಲಿ ಉದ್ಯಮಿಗಳು ಇದರಿಂದಾಗಿ ಭಾರಿ ಅಪಾಯ ಕಟ್ಟಿಟ್ಟಿದ್ದು ಎಂದು ಹೇಳಿ ಇದನ್ನು ವಿರೋಧಿಸಿದ್ದಾರೆ. ಭಾರತವು ಮಾಹಿತಿ ತಂತ್ರಜ್ಞಾನದಲ್ಲಿ ಹಾಗೂ ವಿವಿಧ ವೃತ್ತಿ ಸಂಬಂಧಿತ ಸೇವಾ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಿದ್ದು, ಆದ್ದರಿಂದ ಆರ್‌ಸಿಇಪಿ ಮಾತುಕತೆಗಳಲ್ಲಿ ಭಾರತವು ಮಾನವ ಸಂಪನ್ಮೂಲದ ಮುಕ್ತ ಚಲನೆಗೆ ಆಗ್ರಹಿಸಬೇಕು ಹಾಗೂ ಇದಕ್ಕೆ ಎಲ್ಲ ದೇಶಗಳ ಒಪ್ಪಿಗೆ ಸಿಕ್ಕಿದರೆ ಮಾತ್ರ ಇದು ಭಾರತಕ್ಕೆ ಲಾಭದಾಯಕವಾಗುತ್ತದೆ ಇಲ್ಲದಿದ್ದರೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ಅಧ್ಯಕ್ಷ ಅಮರನಾಥ ಸಿ. ಪಾಟೀಲ ಮಾತನಾಡಿ, ‘ಉದ್ಯೋಗಾವಕಾಶಗಳು ಈಗ ಕೈಗಾರಿಕಾ ಮತ್ತು ಕೃಷಿ ವಲಯಕ್ಕೆ ಮಾತ್ರ ಸೀಮಿತವಾಗಿದ್ದು, ದೇಶದ ಜಿ.ಡಿ.ಪಿ.ಯು ಬಹುತೇಕ ಅತೀ ಸಣ್ಣ ಮತ್ತು ಸಣ್ಣ ಕೈಗಾರಿಕಾ ವಲಯವನ್ನು ಅವಲಂಬಿಸಿದೆ. ನಮ್ಮ ದೇಶ ಅತೀ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿ ಜಾಗತಿಕ ಮಾರುಕಟ್ಟೆಗೆ ಹೆಚ್ಚಿನ ಗ್ರಾಹಕರನ್ನು ನೀಡುವ ದೇಶವಾಗಿದೆ. ತೊಗರಿಯ ಆಮದಿನಿಂದಾಗಿ ನಮ್ಮ ಭಾಗದ ಏಕೈಕ ಎಂ.ಎಸ್.ಎಂ.ಇ ಕೈಗಾರಿಕೆಯಾಗಿರುವ ಬೇಳೆ ಕೈಗಾರಿಕೆ ತತ್ತರಿಸಿ ಹೋಗಿದೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)