ಬುಧವಾರ, ನವೆಂಬರ್ 20, 2019
21 °C
ಎಚ್‌ಕೆಆರ್‌ಡಿಬಿ: ನಿರ್ಮಿತಿ ಕೇಂದ್ರದ ವಿರುದ್ಧ ಪ್ರಕರಣ l ಎಂಜಿನಿಯರ್‌ಗಳಿಗೆ ನೋಟಿಸ್‌

‘ಪೂರ್ಣ’ಗೊಂಡ ಕಾಮಗಾರಿಗಳು ಆರಂಭವಾಗಿಲ್ಲ!

Published:
Updated:
Prajavani

ಕಲಬುರ್ಗಿ: ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ)ಯು ವಹಿಸಿರುವ ಕಾಮಗಾರಿಗಳನ್ನು ಸಕಾಲಕ್ಕೆ ಪೂರ್ಣಗೊಳಿಸಲು ವಿಫಲವಾಗಿದ್ದಕ್ಕೆ ಕಲಬುರ್ಗಿಯ ನಿರ್ಮಿತಿ ಕೇಂದ್ರದ ವಿರುದ್ಧ ಮಂಡಳಿಯ ಕಾರ್ಯದರ್ಶಿ ಸುಬೋಧ್‌ ಯಾದವ್‌ ಅವರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಾಮಗಾರಿ ಆರಂಭಗೊಳ್ಳದಿದ್ದರೂ ‘ಪ್ರಗತಿಯಲ್ಲಿವೆ’ ಎಂದು ಮಂಡಳಿಯ ಸಾಫ್ಟ್‌ವೇರ್‌ನಲ್ಲಿ ತಪ್ಪು ಮಾಹಿತಿ ನೀಡಿದ ವಿವಿಧ ಏಜೆನ್ಸಿಗಳ ಕಾರ್ಯನಿರ್ವಾಹಕ ಎಂಜಿನಿಯರ್‌ (ಇಇ) ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ (ಎಇಇ) ನೋಟಿಸ್‌ ಜಾರಿ ಮಾಡಿದ್ದಾರೆ.

ಮಂಡಳಿ ಅಸ್ತಿತ್ವಕ್ಕೆ ಬಂದ 2013–14ನೇ ಸಾಲಿನಿಂದ 2017–18ರವರೆಗೆ ಕಲಬುರ್ಗಿ ಜಿಲ್ಲೆಯಲ್ಲಿ ಮಂಡಳಿಯ ಅನುದಾನದಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಇನ್ನೂ ಆರಂಭವೇ ಆಗಿಲ್ಲ. ಆದರೂ ಮಂಡಳಿ ಹಣವನ್ನು ಬಳಸಿಕೊಳ್ಳಲಾಗಿದ್ದು, ಸೂಕ್ತ ವಿವರಣೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

‘ಕೆಲವರು ನೋಟಿಸ್‌ಗೆ ಸೂಕ್ತ ಸಮಜಾಯಿಷಿ ನೀಡಿಲ್ಲ. ಹೀಗಾಗಿ ಮತ್ತೆ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿದ್ದು, ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಆಯಾ ಏಜೆನ್ಸಿಗಳ ಮಾತೃ ಇಲಾಖೆಗಳ ಪ್ರಧಾನ ಕಾರ್ಯರ್ಶಿ, ನಿಗಮಗಳ ಪ್ರಧಾನ ವ್ಯವಸ್ಥಾಪಕರು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಶಿಫಾರಸು ಮಾಡಿದ್ದೇವೆ’ ಎಂದು ಮಂಡಳಿ ಕಾರ್ಯದರ್ಶಿ ಸುಬೋಧ್‌ ಯಾದವ್‌ ತಿಳಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಸುಬೋಧ್‌, ‘ಕಳೆದ ಏಪ್ರಿಲ್–ಮೇ ತಿಂಗಳಲ್ಲಿ ಮಂಡಳಿಯ ಸಾಫ್ಟ್‌ವೇರ್‌ನಲ್ಲಿ ದಾಖಲಾದ ಮಾಹಿತಿ ಬಗ್ಗೆ ಸಂದೇಹ ಬಂದಿತ್ತು. ಹೀಗಾಗಿ, ಮಂಡಳಿಯ ಅಧಿಕಾರಿಗಳ ತಂಡವನ್ನು ಇದಕ್ಕಾಗಿ ನಿಯೋಜಿಸಿ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸುವಂತೆ ಸೂಚಿಸಿದ್ದೆ’ ಎಂದರು.

‘ಅದರಲ್ಲಿ ನಿರ್ಮಿತಿ ಕೇಂದ್ರ, ಪಂಚಾಯತ್ ರಾಜ್ ಎಂಜಿನಿಯರಿಂಗ್‌ ವಿಭಾಗ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ‌(ಕೆಆರ್‌ಐಡಿಎಲ್‌) ಕೈಗೊಂಡಿರುವ ಕಾಮಗಾರಿಗಳೂ ಸೇರಿವೆ. ಹೀಗಾಗಿ, ವಿಳಂಬಕ್ಕೆ ಕಾರಣವಾದ ಹಾಗೂ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಕಲಬುರ್ಗಿಯ ನಿರ್ಮಿತಿ ಕೇಂದ್ರದ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ’ ಎಂದು ಹೇಳಿದರು.

‘ನಿರ್ಮಿತಿ ಕೇಂದ್ರದಂತಹ ಏಜೆನ್ಸಿಗಳಿಗೆ ಕಾಮಗಾರಿ ಪೂರ್ಣಗೊಳಿಸಿ ಬಿಲ್‌ ಸಲ್ಲಿಸಿದ ಬಳಿಕವೇ ಹಣ ಪಾವತಿ ಮಾಡುತ್ತೇವೆ. ಸರ್ಕಾರದ ನೇರ ಮೇಲ್ವಿಚಾರಣೆಯಲ್ಲಿರುವ ಕೆಅರ್‌ಐಡಿಎಲ್‌ನಂತಹ ಏಜೆನ್ಸಿಗಳಿಗೆ ಮುಂಗಡವಾಗಿ ಶೇ 40ರಷ್ಟು ಮೊತ್ತವನ್ನು ಬಿಡುಗಡೆ ಮಾಡಿರುತ್ತೇವೆ. ಕಾಮಗಾರಿ ಮುಕ್ತಾಯವಾದ ಬಳಿಕ ಮತ್ತೊಂದು ಕಂತನ್ನು ಬಿಡುಗಡೆ ಮಾಡುತ್ತೇವೆ. ಮಂಡಳಿ ಖಾತೆಯಿಂದ ಬೆಂಗಳೂರಿನಲ್ಲಿರುವ ಆ ಏಜೆನ್ಸಿಯ ಕೇಂದ್ರೀಕೃತ ಖಾತೆಗೆ ಹಣ ವರ್ಗಾವಣೆ ಆಗಿರುತ್ತದೆ. ಹೀಗಾಗಿ ಹಣದ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿಲ್ಲ. ಆದರೆ, ಕಾಮಗಾರಿ ವಿಳಂಬವಾಗಿದ್ದಕ್ಕೆ ಸ್ಪಷ್ಟೀಕರಣ ನೀಡುವಂತೆ ಕೇಳಲಾಗಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ಪ್ರತಿಕ್ರಿಯಿಸಿ (+)