ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಲು ಗಡುವು: ಸುಬೋಧ್‌ ಯಾದವ್‌

Last Updated 10 ಮೇ 2019, 13:59 IST
ಅಕ್ಷರ ಗಾತ್ರ

ಕಲಬುರ್ಗಿ: ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 2013-14ನೇ ಸಾಲಿನಿಂದ 2017-18ನೇ ಸಾಲಿನವರೆಗೆ ಅನುಮೋದನೆ ನೀಡಿರುವ ಎಲ್ಲ ಕಾಮಗಾರಿಗಳನ್ನು ಜೂನ್ ಅಂತ್ಯದವರೆಗೆ ಪೂರ್ಣಗೊಳಿಸುವಂತೆ ಅನುಷ್ಠಾನ ಏಜೆನ್ಸಿಗಳಿಗೆ ಮಂಡಳಿ ಕಾರ್ಯದರ್ಶಿ ಸುಬೋಧ್ ಯಾದವ್‌ ಗಡುವು ನೀಡಿದ್ದಾರೆ.

ಗುರುವಾರ ನಗರದ ಪ್ರಾದೇಶಿಕ ಆಯುಕ್ತರ ಸಭಾಂಗಣದಲ್ಲಿ ಹೈ.ಕ. ಭಾಗದ ಕಲಬುರ್ಗಿ, ಬೀದರ್‌, ಯಾದಗಿರಿ, ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಮಂಡಳಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿರುವ ವಿವಿಧ ಅನುಷ್ಠಾನ ಏಜೆನ್ಸಿ ಅಧಿಕಾರಿಗಳ ಸಭೆ ನಡೆಸಿದ ಅವರು, ಯಾವುದೇ ಕಾರಣಕ್ಕೂ ನಿಧಾನಗತಿ ಪ್ರಗತಿ ಸಹಿಸುವುದಿಲ್ಲ. 2018-19ನೇ ಸಾಲಿನಲ್ಲಿ ಪ್ರಾಯೋಜನೆ ಮಾಡಿಕೊಂಡಿರುವ ಕಾಮಗಾರಿಗಳಲ್ಲಿ ಪ್ರಗತಿ ಹಂತದಲ್ಲಿರುವ ಎಲ್ಲಾ ಕಾಮಗಾರಿಗಳು ಸಹ ಜೂನ್ ಅಂತ್ಯಕ್ಕೆ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಂಡಳಿಯು ಪ್ರತಿ ಕಾಮಗಾರಿಗೆ ಪ್ರತ್ಯೇಕವಾಗಿ ಅನುದಾನವನ್ನು ಆಯಾ ಅನುಷ್ಠಾನ ಏಜೆನ್ಸಿಗಳಿಗೆ ಬಿಡುಗಡೆ ಮಾಡಿದೆ. ಆದರೆ ಅನುಷ್ಠಾನ ಏಜೆನ್ಸಿಗಳು ಒಂದು ಕಾಮಗಾರಿಗೆ ಬಿಡುಗಡೆ ಮಾಡಿದ ಮೊತ್ತ ಇನ್ನೊಂದು ಕಾಮಗಾರಿಗಳಿಗೆ ಬಳಸುತ್ತಿರುವುದು ಮಂಡಳಿ ಗಮನಕ್ಕೆ ಬಂದಿದೆ. ಇದು ಸರಿಯಾದ ಕ್ರಮವಲ್ಲ. ನಿಗದಿಪಡಿಸಿದ ಕಾಮಗಾರಿಗಳ ಬದಲಾಗಿ ಬೇರೊಂದಕ್ಕೆ ಮೊತ್ತ ಬಳಸುತ್ತಿರುವುದಕ್ಕೆ ಸೂಕ್ತ ಕಾರಣದೊಂದಿಗೆ ಪ್ರತಿ ಕಾಮಗಾರಿವಾರು ವರದಿಯನ್ನು ಮೇ 13ರೊಳಗೆ ಮಂಡಳಿಗೆ ಸಲ್ಲಿಸಬೇಕು. ಒಂದೇ ಹಂತದಲ್ಲಿ ಈ ಎಲ್ಲಾ ಕಾಮಗಾರಿಗಳ ಆರ್ಥಿಕ ಲೆಕ್ಕವನ್ನು ಕ್ರಮಬದ್ಧಗೊಳಿಸಲಾಗುವುದು. ಇನ್ನು ಮುಂದೆ ಆಯಾ ಕಾಮಗಾರಿಗಳಿಗೆ ಹಂಚಿಕೆ ಮಾಡಲಾದ ಅನುದಾನವನ್ನು ಅವುಗಳಿಗೆ ಮಾತ್ರ ಬಳಸಬೇಕು. ಇಲ್ಲದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಹಿಂದೆ ಮಂಡಳಿಯ ಕಾಮಗಾರಿಗಳ ಆರ್ಥಿಕ ವೆಚ್ಚದ ಮಾಹಿತಿಯನ್ನು ಮಂಡಳಿಯ ಅಂತರ್ಜಾಲದಲ್ಲಿ ಅಪ್‌ಲೋಡ್ ಮಾಡಲು ಅವಕಾಶ ನೀಡಲಾಗಿತ್ತು. ಲೆಕ್ಕಕ್ಕೆ ಹೊಂದಾಣಿಕೆಯಾದಂತೆ ಅನುಷ್ಠಾನ ಏಜೆನ್ಸಿಗಳು ತಪ್ಪಾಗಿ ಮಾಹಿತಿ ಒದಗಿಸುತ್ತಿರುವುದರಿಂದ ಆರ್ಥಿಕ ವೆಚ್ಚದ ಮಾಹಿತಿಯನ್ನು ಅಪ್‌ಲೋಡ್ ಮಾಡುವ ವ್ಯವಸ್ಥೆಯನ್ನು ತೆಗದುಹಾಕಲಾಗಿದೆ. ಇನ್ನು ಮುಂದೆ ಅನುಷ್ಠಾನ ಏಜೆನ್ಸಿಗಳು ಕೇವಲ ಭೌತಿಕ ಪ್ರಗತಿ ಮಾತ್ರ ಅಪ್‌ಲೋಡ್ ಮಾಡಬಹುದಾಗಿದೆ. ಕಲಬುರ್ಗಿಯಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಪ್ರಗತಿ ಅರಿಯಲು ಇತ್ತೀಚೆಗೆ ಮಂಡಳಿ ಸಿಬ್ಬಂದಿಯಿಂದ ಪರಿಶೀಲನೆ ಮಾಡಲಾಗಿದ್ದು, ಮಂಡಳಿ ಸಿಬ್ಬಂದಿ ಒದಗಿಸಿರುವ ಮಾಹಿತಿ ಹಾಗೂ ಅನುಷ್ಠಾನ ಏಜೆನ್ಸಿಗಳು ನೀಡುವ ಮಾಹಿತಿ ಒಂದಕ್ಕೊಂದು ತಾಳೆಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಂಡಳಿ ಉಪ ಕಾರ್ಯದರ್ಶಿ ಡಾ.ಬಿ.ಸುಶೀಲಾ, ಅಧೀಕ್ಷಕ ಎಂಜಿನಿಯರ್‌ ತಿಪ್ಪೇಶ, ಹೈ–ಕ ಭಾಗದ ಎಲ್ಲಾ ಜಿಲ್ಲೆಯ ಕೆ.ಆರ್.ಐ.ಡಿ.ಎಲ್, ನಿರ್ಮಿತಿ ಕೇಂದ್ರ ಹಾಗೂ ಇನ್ನಿತರ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT