ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಹುಣ್ಣಿಮೆ, ನಾಳೆ ಬಣ್ಣದಾಟ

ಹೋಳಿ ಹುಣ್ಣಿಮೆಗೆ ಭರ್ಜರಿ ಸಿದ್ಧತೆ, ಬಣ್ಣ, ಪಿಚಕಾರಿ ಕೊಳ್ಳಲು ಮಾರುಕಟ್ಟೆಯಲ್ಲಿ ಜನಜಂಗುಳಿ
Last Updated 28 ಮಾರ್ಚ್ 2021, 5:29 IST
ಅಕ್ಷರ ಗಾತ್ರ

ಕಲಬುರ್ಗಿ: ಬಣ್ಣದ ಹಬ್ಬ ಹೋಳಿಹುಣ್ಣಿಮೆಗೆ ಜಿಲ್ಲೆಯಲ್ಲಿ ಸಿದ್ಧತೆ ಭರದಿಂದ ನಡೆದಿದೆ. ನಗರ ಹಾಗೂ ಪಟ್ಟಣಗಳ ಮಾರುಕಟ್ಟೆಗಳಲ್ಲಿ ಶನಿವಾರ ಜನಜಂಗುಳಿ ಕಂಡುಬಂತು. ವಿವಿಧ ಬಣ್ಣ, ಬಣ್ಣದ ಪ್ಯಾಕೇಟ್‌‌ಗಳು, ಪಿಚಕಾರಿಗಳು, ನೀರುಬಣ್ಣ ಗೊಜ್ಜುವ ಬಲೂನುಗಳ ಮಾರಾಟ ಜೋರಾಗಿಯೇ ನಡೆಯಿತು.

ಮಾರ್ಚ್‌ 28ರಂದು ಹುಣ್ಣಿಮೆ ಆಚರಿಸುವ ಜನರು, ರಾತ್ರಿಯೇ ಕಾಮ ದಹನ ಮಾಡಲಿದ್ದಾರೆ. ಮಾರ್ಚ್‌ 29ರಂದು ರಂಗಿನೋಕುಳಿ ಇದ್ದು ಎಲ್ಲರೂ ಬಣ್ಣ ಎರಚಾಡುವರು. ಈ ಬಾರಿ ಹಬ್ಬ ಎರಡು ದಿನ ಬಂದ ಕಾರಣ ಎರಡೂ ದಿನ ಬಣ್ಣದಾಟ ನಡೆಯಲಿದೆ. ಎರಡೂ ದಿನ ಬಣ್ಣದ ಕುಡಿಕೆಗಳನ್ನು ಒಡೆಯುವ ಆಟಕ್ಕೆ ಹಲವು ಯುವ ತಂಡಗಳು ಈಗಾಗಲೇ ಸಿದ್ಧತೆ ಮಾಡಿಕೊಂಡಿವೆ.

ಕೊರೊನಾ ಎಚ್ಚರಿಕೆ ಇರಲಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಪುಟಿಯುತ್ತಲೇ ಇದೆ. ಕೇವಲ ಐದು ದಿನಗಳಲ್ಲಿ 650ಕ್ಕೂ ಹೆಚ್ಚು ಮಂದಿಗೆ ಸೋಂಕು ಅಂಟಿಕೊಂಡಿದೆ. ಅಲ್ಲದೇ ಪ್ರತಿ ದಿನ ಇಬ್ಬರು ಸಾವನ್ನಪ್ಪುತ್ತಿದ್ದಾರೆ. ಈ ಬಗ್ಗೆ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಅಂತರ ಕಾಪಾಡಲು ಇನ್ನಿಲ್ಲದ ಜಾಗೃತಿ ಮೂಡಿಸುತ್ತಿದೆ. ಬಣ್ಣದಾಟದಲ್ಲಿ ಪರಸ್ಪರ ಕೈ, ಮುಖ, ಮೈಗೆ ಬಣ್ಣ ಹೆಚ್ಚುವುದು ಸಾಮಾನ್ಯ. ಇದರಿಂದಾಗಿ ಸೋಂಕು ಹೆಚ್ಚು ಹರಡುವ ಸಾಧ್ಯತೆ ಇದೆ. ಆದ್ದರಿಂದ ಬಣ್ಣದೋಕುಳಿ ಮಾಡದಂತೆ ಈಗಾಗಲೇ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಪುಟಾಣಿಗಳು, ಮಕ್ಕಳು, ಮಹಿಳೆಯರು, ಯುವಕರು, ಹಿರಿಯರೂ ಸೇರಿ ವಯಸ್ಸಿನ ಹಂಗು ತೊರೆದು ಬಣ್ಣಗಳಲ್ಲಿ ಮಿಂದೇಳುವುದು ಈ ಭಾಗದ ವಿಶೇಷ.ಶಾಲೆ– ಕಾಲೇಜುಗಳಿಗೆ ಸ್ಥಳೀಯವಾಗಿ ರಜೆ ಕೊಟ್ಟ ಕಾರಣ ಬಣ್ಣದಾಟಕ್ಕೆ ವಿದ್ಯಾರ್ಥಿಗಳಲ್ಲೂ ಹುಮ್ಮಸ್ಸು ಕಂಡುಬಂದಿದೆ. ಆದರೆ, ಅಂತರ ಕಾಪಾಡುವ ಹಾಗೂ ಮಸ್ಕ್‌ ಧರಿಸುವ ನಿಯಮಗಳನ್ನು ಮೀರುವುದನ್ನು ಪೊಲೀಸರು ಹೇಗೆ ನಿಯಂತ್ರಿಸುತ್ತಾರೆ ಎಂಬುದೇ ಸವಾಲಾಗಿದೆ.

ಬೆಳ್ಳುಳ್ಳಿ, ಲವಂಗ ದಹನ:ಮಲ್ಲಿಕಾರ್ಜುನ ತರುಣ ಸಂಘ ಹಾಗೂವಿದ್ಯಾನಗರ ವೆಲ್‍ಫೇರ್‌ ಸೊಸೈಟಿಯ ಆಶ್ರಯದಲ್ಲಿ ಮಾರ್ಚ್‌ 28ರಂದು ರಾತ್ರಿ 8ಕ್ಕೆ ಮಲ್ಲಿಕಾರ್ಜುನ ಸಮುದಾಯ ಭವನ ಎದುರುಗಡೆ ಕಾಮದಹನ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಬಾರಿ ಕೊರೊನಾ ನಿಯಂತ್ರಣಕ್ಕೆ ಪ್ರಾರ್ಥಿಸಿ, ಕಾಮದಹನದ ಬೆಂಕಿಯಲ್ಲಿ ಲವಂಗ ಹಾಗೂ ಬೆಳ್ಳುಳ್ಳಿಯನ್ನು ಸುಡಲಾಗುವುದು. ಆದ್ದರಿಂದ ಸರ್ವಜನಿಕರು ಮನೆಯಿಂದ ಲವಂಗ ಹಾಗೂ ಬೆಳ್ಳುಳ್ಳಿ ತಂದು ವಿಶೇಷವಾದ ಕಾಮದಹನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದುಸಂಘದ ಅಧ್ಯಕ್ಷ ಶಿವರಾಜ ಅಂಡಗಿ ಕೋರಿದ್ದಾರೆ.

ಮದ್ಯಮಾರಾಟ ನಿಷೇಧ:ಮಾರ್ಚ್ 28 ಹಾಗೂ 29ರಂದು ಜಿಲ್ಲೆಯಾದ್ಯಂತ ಹೋಳಿ ಹಬ್ಬ ಆಚರಿಸಲಾಗುತ್ತಿರುವ ಕಾರಣ, ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಮಾರ್ಚ್ 28ರ ಬೆಳಗಿನ 6 ಗಂಟೆಯಿಂದ ಮಾಚ್ 30ರ ಬೆಳಗಿನ 6 ಗಂಟೆಯವರೆಗೆ ಜಿಲ್ಲೆಯಾದ್ಯಂತ ಎಲ್ಲ ತರಹದ ಮದ್ಯ ಮಾರಾಟ ನಿಷೇಧಿಸಿ ಹಾಗೂ ಅಂಗಡಿಗಳನ್ನು ಮುಚ್ಚಬೇಕೆಂದು ಜಿಲ್ಲಾ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಅದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT