ಸೋಮವಾರ, ಡಿಸೆಂಬರ್ 16, 2019
18 °C
ವಿದ್ಯಾರ್ಥಿನಿಯರ ಸುರಕ್ಷತೆಗೆ ಕಠಿಣ ಕ್ರಮ ಕೈಗೊಳ್ಳದ ಜಿಲ್ಲಾಡಳಿತ; ವಿದ್ಯಾರ್ಥಿಗಳ ಪ್ರಶ್ನೆ

ಹಾಸ್ಟೆಲ್‌ಗೆ ನುಗ್ಗಿದ ಪುಂಡನ ವಿರುದ್ಧ ಕ್ರಮ ಯಾಕಿಲ್ಲ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಇಲ್ಲಿನ ಐವಾನ್‌ ಇ– ಶಾಹಿ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ನುಗ್ಗಿದ ಯುವಕನ ಮೇಲೆ 48 ಗಂಟೆಗಳ ನಂತರವೂ ಸಂಬಂಧಿಸಿದ ಅಧಿಕಾರಿಗಳು ಗಂಭೀರ ಕ್ರಮ ಕೈಗೊಂಡಿಲ್ಲ’ ಎಂದು ಮಹಿಳಾ ಹೋರಾಟಗಾರರು ಹಾಗೂ ವಿದ್ಯಾರ್ಥಿ ಸಂಘಟನೆಗಳವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಈ ಘಟನೆ ನಡೆದಿದ್ದು ಶುಕ್ರವಾರ ತಡರಾತ್ರಿ ಎಂದು ಪೊಲೀಸರು ಹೇಳಿದರೆ, ಶನಿವಾರ ತಡರಾತ್ರಿ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ!

‘ಅತ್ಯಾಚಾರ ನಡೆದಾಗ ಮಾತ್ರ ಎಲ್ಲ ಅಧಿಕಾರಿಗಳೂ ನಿದ್ರೆಯಿಂದ ಏಳುತ್ತಾರೆ. ಅವರು ಮತ್ತೆ ಎದ್ದೇಳುವುದು ಮತ್ತೊಂದು ಅತ್ಯಾಚಾರವಾದ ಮೇಲೆಯೇ’ ಎಂದು ಜನವಾದಿ ಮಹಿಳಾ ಸಂಘಟನೆಯ ನಾಯಕಿ ಕೆ.ನೀಲಾ ಕಿಡಿ ಕಾರಿದರು.

ಪಾನಮತ್ತನಾದ ಸತೀಶ (28) ಎಂಬಾತ ಶನಿವಾರ ತಡರಾತ್ರಿ 1.30ಕ್ಕೆ ಹಾಸ್ಟೆಲ್‌ ಹಿಂಬದಿ ಕಾಂಪೌಂಡ್‌ ನೆಗೆದು ಒಳನುಗ್ಗಿದ್ದ. ಇದನ್ನು ಗಮನಿಸಿದ ವಿದ್ಯಾರ್ಥಿನಿಯರೇ ಆತನನ್ನು ಹಿಡಿದು ಕಟ್ಟಿಹಾಕಿದ್ದರು. ಕಣ್ಣಿಗೆ ಖಾರದ ಪುಡಿ ಎರಚಿ ಗೂಸಾ ನೀಡಿದ್ದರು. ಸ್ಟೇಷನ್‌ ಬಜಾರ್‌ ಠಾಣೆಗೆ ಮಾಹಿತಿ ರವಾನಿಸಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದರು.

ಸೋಮವಾರ (48 ಗಂಟೆ ನಂತರ) ಆರೋಪಿಯ ಕತೆ ಏನಾಯಿತು ಎಂದು ಕೇಳಿದರೆ ಅಧಿಕಾರಿಗಳು ನಿಖರ ಮಾಹಿತಿ ನೀಡಲಿಲ್ಲ. ಯಾವ ಕಲಂ ಅಡಿ ಪ್ರಕರಣ
ದಾಖಲಿಸಲಾಗಿದೆ? ಕನಿಷ್ಠ ಪಕ್ಷ ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಯಿತೇ?  ಎಂಬ ಪ್ರಶ್ನೆಗೆ ಸಂಬಂಧಿಸಿದ ಅಧಿಕಾರಿಗಳು ಸಮರ್ಪಕ ಉತ್ತರ ನೀಡಲಿಲ್ಲ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್‌. ಸತೀಶ, ‘ವಿದ್ಯಾರ್ಥಿನಿಯರ ಧೈರ್ಯ ಮೆಚ್ಚುವಂಥದ್ದು. ನಮ್ಮ ವಾರ್ಡನ್‌ ಮೇಡಂ ಅವರೇ ಆರೋಪಿಯನ್ನು ಹಿಡಿದಿದ್ದಾರೆ. ಹಾಗಾಗಿ, ಇದನ್ನು ಭದ್ರತೆಯ ಲೋಪ ಎನ್ನಲಾಗುವುದಿಲ್ಲ. ರಸ್ತೆಗೆ ಅಂಟಿಕೊಂಡೇ ಈ ಹಾಸ್ಟೆಲ್‌ ಇದೆ. ಹಾಗಾಗಿ, ಕುಡುಕ ಒಳಗೆ ನುಗ್ಗಲು ಸಹಕಾರಿಯಾಗಿದೆ. ನಾವು ದೂರು ಕೊಟ್ಟಿದ್ದೇವೆ. ಮುಂದಿನ ಕೆಲಸ ಪೊಲೀಸರಿಗೆ ಬಿಟ್ಟಿದ್ದು. ನಾನು ಕಚೇರಿಯಿಂದ ಹೊರಗೆ ಇದ್ದೇನೆ. ಮುಂದೇನಾಗಿದೆ ಎಂಬುದು ಗೊತ್ತಿಲ್ಲ’ ಎಂದರು.

ಪೊಲೀಸರ ದ್ವಂದ್ವ ಹೇಳಿಕೆ: ಅಪರಾಧ ತಡೆ ವಿಭಾಗದ ಎಸ್‌ಐ ಲಾಡ್ಲೇಸಾಬ ಗೌಂಡಿ ಅವರು, ‘ಆರೋಪಿ ವಿರುದ್ಧ ವಿದ್ಯಾರ್ಥಿನಿಯರಾಗಲೀ, ವಾರ್ಡನ್‌ ಆಗಲಿ ದೂರು ನೀಡಿಲ್ಲ. ಹಾಗೆಂದು ನಾವು ಸುಮ್ಮನಿರಲಾಗದು. ರಾತ್ರಿಯೇ ಬಂಧಿಸಿ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದೇವೆ. ಸ್ವಯಂಪ್ರೇರಣೆಯಿಂದ ಕೇಸ್‌ ದಾಖಲಿಸಿದ್ದೇವೆ. ಕುಡಿದ ಅಮಲಿನಲ್ಲಿ ರಸ್ತೆ ಬದಿ ಬಿದ್ದಿದ್ದ ಆತ, ತುಂಬ ಚಳಿಯಾಗಿದ್ದರಿಂದ ರಕ್ಷಣೆಗಾಗಿ ಒಳಗೆ ಹೋದೆ– ಅದು ಹಾಸ್ಟೆಲ್‌ ಎಂದು ಗೊತ್ತಿರಲಿಲ್ಲ ಎಂದು ಹೇಳಿದ್ದಾನೆ. ಸಾಹೇಬರ ಮುಂದೆ ಆತನನ್ನು ಹಾಜರುಪಡಿಸಿದ್ದು, ಬೇಲ್‌ ಸಿಕ್ಕಿದೆ’ ಎಂದು ಹೇಳಿದರು.

‘ಸಾಮಾನ್ಯವಾಗಿ ಇಂಥ ಪ್ರಕರಣಗಳಲ್ಲಿ ಆರೋಪಿಯನ್ನು ಬಿಟ್ಟು ಕಳಿಸುವುದು ವಿರಳ. ಹಾಗಾಗಿ, ಬಿಟ್ಟಿರಲಿಕ್ಕಿಲ್ಲ. ಏನಾಗಿದೆ ಎಂದು ಪರಿಶೀಲಿಸಿ ನಾಳೆ (ಮಂಗಳವಾರ) ಬೆಳಿಗ್ಗೆ ಹೇಳುತ್ತೇನೆ’ ಎಂದು ನಗರ ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)