ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಡ್ಡಿ ಸಮಾಜದಿಂದ ವಸತಿನಿಲಯ ಸ್ಥಾಪನೆ: ಶಾಸಕ ದರ್ಶನಾಪೂರ

ಜಿಲ್ಲಾಡಳಿತದ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ
Last Updated 10 ಮೇ 2022, 16:27 IST
ಅಕ್ಷರ ಗಾತ್ರ

ಕಲಬುರಗಿ: ‘ಹೇಮರಡ್ಡಿ ಮಲ್ಲಮ್ಮ ಕೃಪೆಯಿಂದ ಆರ್ಥಿಕವಾಗಿ ಸ್ಥಿತಿವಂತರಾಗಿರುವ ರಡ್ಡಿ ಸಮಾಜದದವರು ಸಮಾಜದಲ್ಲಿನ ಬಡವರನ್ನು ಗುರುತಿಸಿ ನೆರವು ನೀಡಲು ಮುಂದಾಗಬೇಕು’ ಎಂದು ಶಹಾಪುರ ಶಾಸಕ ಹಾಗೂ ಜಿಲ್ಲಾ ರಡ್ಡಿ ಸಮಾಜದ ಗೌರವಾಧ್ಯಕ್ಷ ಶರಣಬಸಪ್ಪ ದರ್ಶನಾಪೂರ ಅಭಿಪ್ರಾಯಪಟ್ಟರು.

ನಗರದ ಡಾ.ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ ಹಾಗೂ ಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕಲಬುರಗಿಯ ಝೆಸ್ಟ್‌ ಕ್ಲಬ್‌ ಪಕ್ಕದಲ್ಲಿ 10 ಸಾವಿರ ಚದರ ಅಡಿ ಜಾಗವನ್ನು ಸಮಾಜದ ಚಟುವಟಿಕೆಗಳಿಗಾಗಿ ಖರೀದಿಸಲಾಗಿದ್ದು, ಅಲ್ಲಿ ಸಂಘದಿಂದ ಹಾಸ್ಟೆಲ್ ನಿರ್ಮಿಸುವ ಯೋಜನೆ ಇದೆ. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರತಿ ವರ್ಷ ವೈಯಕ್ತಿಕವಾಗಿ ₹ 2 ಲಕ್ಷ ನೀಡುವೆ’ ಎಂದು ಅವರು ಘೋಷಿಸಿದರು.

‘ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದ ಸಂಸ್ಥಾಪಕರಾದ ಚನ್ನಾರೆಡ್ಡಿ ಪಾಟೀಲ ಅವರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ತಮ್ಮ ಸಂಸ್ಥೆಯಲ್ಲಿ ಉಚಿತ ಸೀಟು ಕೊಡುತ್ತಿರುವುದು ಶ್ಲಾಘನೀಯ’ ಎಂದರು.

ಚನ್ನಾರೆಡ್ಡಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಸ್ಕಾಲರ್‌ಶಿಪ್ ನೀಡಲಾಯಿತು.

ಮುಗಳನಾಗಾಂವ ಸಿದ್ದಲಿಂಗ ಶಿವಾಚಾರ್ಯರು ಮಾತನಾಡಿ, ‘ಹೇಮರಡ್ಡಿ ಮಲ್ಲಮ್ಮ ಅತ್ತೆ–ಮಾವ, ನಾದಿನಿಯರ ಕಾಟ ಸಹಿಸಿಕೊಂಡು ತುಂಬು ಕುಟುಂಬದಲ್ಲಿ ಆದರ್ಶ ಪತ್ನಿ ಹಾಗೂ ಸೊಸೆಯಾಗಿ ಶ್ರೀಶೈಲ ಮಲ್ಲಿಕಾರ್ಜುನನ್ನು ಸಾಕ್ಷಾತ್ಕರಿಸಿಕೊಂಡು ಆದರ್ಶ ಶರಣೆಯಾಗಿ ರೂಪುಗೊಂಡಿದ್ದಳು’ ಎಂದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ.ಸುಜಾತಾ ಬಂಡೇಶರೆಡ್ಡಿ, ಹೇಮರಡ್ಡಿ ಮಲ್ಲಮ್ಮ ತಾಯಿಯ ಜೀವನ ಬೆವರಿನ ಜೀವನವಾಗಿತ್ತು. ಅಪಮಾನ, ಅವಮಾನ ಎದುರಿಸಿ ಸಮಾಜದಲ್ಲಿ ಗೌರವಯುತ ಬದುಕು ನಡೆಸಿದ ಮಹಾಶರಣೆ. ಕೌಟುಂಬಿಕ ಜವಾಬ್ದಾರಿ ನಿರ್ವಹಿಸಿಕೊಂಡು ನಿರಂತರವಾಗಿ ಪೂಜೆಯಲ್ಲಿ ತೊಡಗಿದವರು. ದುಶ್ಚಟಕ್ಕೆ ಬಲಿಯಾಗಿದ್ದ ಮೈದುನನ್ನು ಬದುಕಿನ ಸಾರ್ಥಕತೆಯ ಅರಿವಾಗುವಂತೆ ಮನಃ ಪರಿವರ್ತನೆ ಮಾಡಿದರು. ಪರಿಣಾಮ ಮೈದುನ ವೇಮನ ಅಧ್ಯಾತ್ಮಿಕ ದಾರಿಯಲ್ಲಿ ಸಾಧನೆ ತೋರಿ, ಮಹಾಯೋಗಿಯಾದರು’ ಎಂದರು.

ಇದಕ್ಕೂ ಮುನ್ನ ಜಗತ್ ವೃತ್ತದಿಂದ ಹೇಮರಡ್ಡಿ ಮಲ್ಲಮ್ಮ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.

ಜಿಲ್ಲಾಧಿಕಾರಿ ಯಶವಂತ ಗುರುಕರ್, ಮುದಗಲ್‌ನ ಮಹಾಂತ ಸ್ವಾಮೀಜಿ, ಕೃಷ್ಣಾ ಕಾಡಾ (ಭೀಮರಾಯನಗುಡಿ) ಅಧ್ಯಕ್ಷ ಶರಣಪ್ಪ ತಳವಾರ, ಮಾಜಿ ಶಾಸಕಿ ಅರುಣಾ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ಡಾ.ಶಂಕರ ವಣಿಕ್ಯಾಳ, ತಹಶೀಲ್ದಾರ್ ಪ್ರಕಾಶ ಕುದರಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಮಹೇಶ ರೆಡ್ಡಿ, ಕಾರ್ಯಾಧ್ಯಕ್ಷ ಶಾಂತರೆಡ್ಡಿ ಪೇಠಶಿರೂರ, ಶಿವಶರಣೆ ಹೇಮರೆಡ್ಡಿ ಸಮಾಜದ ಯುವ ಘಟಕದ ಅಧ್ಯಕ್ಷ ವಿಜಯರೆಡ್ಡಿ ಪಾಟೀಲ್, ಪ್ರತಿಮಾ ಕಾಮರಡ್ಡಿ, ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT