ಶನಿವಾರ, ಜೂನ್ 25, 2022
24 °C
ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಸಂಘದ ಸದಸ್ಯರಿಂದ ಪ್ರತಿಭಟನೆ

ಹಾಸ್ಟೆಲ್ ಹೊರಗುತ್ತಿಗೆ ನೌಕರರ ಬಾಕಿ ವೇತನಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಸರ್ಕಾರಿ ಹಾಸ್ಟೆಲ್‌ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರ ಬಾಕಿ ವೇತನವನ್ನು ತಕ್ಷಣ ಪಾವತಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಕಾರ್ಯಕರ್ತರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಜಿಲ್ಲೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿರುವ ಎಲ್ಲ ವಸತಿ ನಿಲಯಗಳಿಗೆ ಮ್ಯಾನ್‌ ಪವರ್ ಏಜೆನ್ಸಿಯವರು ಸರ್ಕಾರದ ಆದೇಶದಿಂದ ಪ್ರತಿ ತಿಂಗಳು ನಿಗದಿತ ವೇತನ ಪಾವತಿಸುವ ಬದಲು ಒಂದು ಸಾವಿರ ರೂಪಾಯಿ ಕಡಿಮೆ ವೇತನ ಪಾವತಿಸುತ್ತಿದ್ದಾರೆ. ಇಪಿಎಫ್‌ ಮತ್ತು ಇಎಸ್‌ಐ ಕಂತಿನ ಹಣವನ್ನು ತಿಂಗಳು ಸರಿಯಾಗಿ ಕಟ್ಟುತ್ತಿಲ್ಲ. ಅಲ್ಲದೇ, ನಾಲ್ಕೈದು ತಿಂಗಳಿಂದ ವೇತನ ಪಾವತಿಸದೇ ಇರುವುದರಿಂದ ನೌಕರರು ಅತ್ಯಂತ ಸಂಕಷ್ಟದಲ್ಲಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿರುವ ಮೊರಾರ್ಜಿ ದೇಸಾಯಿ ಮತ್ತು ಇಂದಿರಾ ಗಾಂಧಿ, ಡಾ.ಬಿ.ಆರ್. ಅಂಬೇಡ್ಕರ್, ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯಗಳ ಹೊರಗುತ್ತಿಗೆ ನೌಕರರಿಗೆ ಮತ್ತೊಂದು ಮ್ಯಾನ್‌ ಪವರ್ ಏಜೆನ್ಸಿಯು ನೌಕರರಿಗೆ ಬಹಳಷ್ಟು ವಿಳಂಬವಾಗಿ ವೇತನ ಪಾವತಿಸಲಾಗುತ್ತದೆ. ಕಿತ್ತೂರು ರಾಣಿ ಚನ್ನಮ್ಮ, ಎನ್‌.ಎನ್‌. ತಾಂಡಾ ನಿಡಗುಂದಾ ಮೊರಾರ್ಜಿ ದೇಸಾಯಿ, ಚಿತ್ತಾಪುರ ಮೊರಾರ್ಜಿ ದೇಸಾತಯಿ ಶಾಲೆ, ಗುಂಡಗುರ್ತಿ, ಅಡಕಿ ಈ ವಸತಿ ನಿಲಯಗಳಲ್ಲಿ ದುಡಿಯುತ್ತಿರುವ ನೌಕರರಿಗೆ 3–4 ತಿಂಗಳ ವೇತನ ಪಾವತಿಸದೇ ಅಲೆದಾಡಿಸುತ್ತಿದ್ದಾರೆ ಎಂದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೊರಾರ್ಜಿ ದೇಸಾಯಿ, ದಂಡೋತಿ ಮತ್ತು ಯಳವಾರ ವಸತಿ ನಿಲಯಗಳಲ್ಲಿ 2021ರ ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಕೋವಿಡ್ ಸಂದರ್ಭದಲ್ಲಿ ವಸತಿ ನಿಲಯ ರಜೆಯಿದ್ದರೂ ಎಲ್ಲಾ ಹೊರಗುತ್ತಿಗೆ ನೌಕರರಿಗೆ ಶಾಲಾ ಆವರಣದಲ್ಲಿ ಹುಲ್ಲು ತೆಗೆಯುವುದು, ಗಿಡ ಹಚ್ಚುವುದು, ಕಾಂಪೌಂಡ್ ಸ್ವಚ್ಛತೆಯ ಕೆಲಸ ಹಚ್ಚಿದ್ದಾರೆ. ಆದರೆ, ಈ ಕೆಲಸಕ್ಕೆ ವೇತನ ಪಾವತಿಸಿಲ್ಲ.

ಬಿಸಿಎಂ ಇಲಾಖೆಯಲ್ಲಿ 2020–21ನೇ ಸಾಲಿನ ವಸತಿ ನಿಲಯಗಳಲ್ಲಿ ಸೇವೆ ಸಲ್ಲಿಸಿದ ಹೊರಗುತ್ತಿಗೆ ನೌಕರರಿಗೆ ಏಳೆಂಟು ತಿಂಗಳ ಬಾಕಿ ವೇತನವನ್ನು ಇಲ್ಲಿಯವರೆಗೂ ಪಾವತಿಸಿಲ್ಲ. ಅಲ್ಲದೇ, 10, 12 ವರ್ಷಗಳಿಂದ ಸೇವೆ ಸಲ್ಲಿಸಿದ ನೌಕರರನ್ನು ಕೆಲಸದಿಂದ ತೆಗೆದು ಹಾಕಿ ನಾಲ್ಕೈದು ವರ್ಷ ಸೇವೆ ಸಲ್ಲಿಸಿದವರಿಗೆ ಮತ್ತು ಹೊಸದಾಗಿ ಕೆಲಸಕ್ಕೆ ಸೇರಿಸಿಕೊಂಡು ಹತ್ತಾರು ವರ್ಷಗಳಿಂದ ಅತ್ಯಂತ ಕಡಿಮೆ ವೇತನದಲ್ಲಿ ದುಡಿದ ನೌಕರರಿಗೆ ಅನ್ಯಾಯ ಮಾಡಿದ್ದಾರೆ. ಹೀಗಾಗಿ, ಹೆಚ್ಚು ವರ್ಷ ಸೇವೆ ಸಲ್ಲಿಸಿದ ನೌಕರರಿಗೆ ಆದ್ಯತೆ ಕೊಟ್ಟು ಸೇವೆಯಲ್ಲಿ ಮುಂದುವರಿಸಬೇಕೆಂದು ಆಗ್ರಹಿಸಲಾಗಿದೆ. ಈ ಬಗ್ಗೆ ಬಿಸಿಎಂ ಜಿಲ್ಲಾ ಅಧಿಕಾರಿಗೆ ಮಾಹಿತಿ ಕೇಳಿ ಅರ್ಜಿ ಸಲ್ಲಿಸಿದರೂ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದರು.

ಸಂಘದ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಉಪಾಧ್ಯಕ್ಷ ಮೇಘರಾಜ ಕಠಾರೆ, ಜಗದೇವಿ ಚಂದನಕೇರಾ, ಮಾಪಣ್ಣ ಜಾನಕರ, ಪರಶುರಾಮ ಹಡಲಗಿ, ಬಾಬು ಹೊಸಮನಿ, ಚಂದ್ರಕಾಂತ ಮಾಂಗ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.