ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್‌ ವಿಮೋಚನಾ ಹೋರಾಟದ ರೋಚಕ ಸಂಗತಿ ಬಿಚ್ಚಿಟ್ಟ ಪ್ರೊ.ಮಹಾಬಳೇಶ್ವರ

ರಾಷ್ಟ್ರೀಯ ಪ್ರಜ್ಞೆಯೇ ವಿಮೋಚನೆಗೆ ನಾಂದಿ
Last Updated 17 ಸೆಪ್ಟೆಂಬರ್ 2019, 11:12 IST
ಅಕ್ಷರ ಗಾತ್ರ

ಕಲಬುರ್ಗಿ: ‘ಯಾವುದೇ ಪ್ರದೇಶ ಸ್ವಾತಂತ್ರ್ಯವಾಗಬೇಕಾದರೆ ಅಲ್ಲಿನ ಜನರಿಗೆ ರಾಷ್ಟ್ರೀಯ ಪ್ರಜ್ಞೆ ಇರಬೇಕಾಗುತ್ತದೆ. ಆದರೆ, ಹೈದರಾಬಾದ್‌ ವಿಮೋಚನಾ ಚಳವಳಿಯಲ್ಲಿ ರಾಷ್ಟ್ರೀಯ ಪ್ರಜ್ಞೆ ಮಾತ್ರವಲ್ಲ; ಧರ್ಮಸಹಿಷ್ಣುತೆಯೂ ಬಹಳ ದೊಡ್ಡ ಪಾತ್ರ ವಹಿಸಿದೆ’ ಎಂದು ನಿವೃತ್ತ ಇತಿಹಾಸ ಪ್ರಾಧ್ಯಾಪಕ ಬಿ.ಸಿ. ಮಹಾಬಳೇಶ್ವರ ಹೇಳಿದರು.

ಎಚ್‌ಕೆಇ ಸಂಸ್ಥೆಯ ವಿ.ಜಿ. ಮಹಿಳಾ ವಿದ್ಯಾಲಯದ ಇತಿಹಾಸ ವಿಭಾಗ ಹಾಗೂ ಭಾರತ ಜ್ಞಾನ– ವಿಜ್ಞಾನ ಸಮಿತಿ ಆಶ್ರಯದಲ್ಲಿ ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಹೈದರಾಬಾದ್‌ ವಿಮೋಚನೆ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘1947ರಲ್ಲಿ ಭಾರವು ಅಹಿಂಸೆಯಿಂದಲೇ ಸ್ವಾತಂತ್ರ್ಯ ಗಳಿಸಿತು. ಆದರೆ, ಮರು ವರ್ಷವೇ (1948) ನಡೆದ ಹೈದರಾಬಾದ್‌ ವಿಮೋಚನಾ ಹೋರಾಟಕ್ಕೆ ಶಸ್ತ್ರಾಸ್ತ್ರ ಬಳಸಿ ಯುದ್ಧ ಮಾಡಿ, ರಕ್ತ ಹರಿಸುವ ಸ್ಥಿತಿಗೆ ದೇಶ ಬಂದುಬಿಟ್ಟಿತ್ತು. ಈ ಹೋರಾಟದಲ್ಲಿ ಗುಲಾಮಗಿರಿಯ ವಿರುದ್ಧ ನಿಲ್ಲುವ ಜತೆಜತೆಗೇ ಧರ್ಮ ಸಂಘರ್ಷದ ವಿರುದ್ಧವೂ ಹೋಗಬೇಕಾದ ಅನಿವಾರ್ಯ ಬಂತು. ಹೀಗಾಗಿ, ಜಗತ್ತಿನ ಎಲ್ಲ ಹೋರಾಟಗಳಲ್ಲೂ ಇದು ವಿಶೇಷವಾಗಿ ಕಾಣಿಸುತ್ತದೆ’ ಎಂದು ವಿವರಿಸಿದರು.

‘ನಿಜಾಮನ ಜತೆಗೆ ನಿಂತ ರಜಾಕರ ಸೈನ್ಯದಲ್ಲಿ ಶೇಕಡ 30ರಷ್ಟು ಮಂದಿ ಹಿಂದೂಗಳಿದ್ದರು. ಅದೇ ರೀತಿ ನಿಜಾಮನ ವಿರುದ್ಧವಾಗಿ ದೇಶದ ಜತೆಗೆ ನಿಂತ ಮುಸ್ಲೀಮರೂ ಸಾಕಷ್ಟಿದ್ದರು. ಹಾಗಾಗಿ, ದಬ್ಬಾಳಿಕೆ ಹಾಗೂ ವಿಮೋಚನೆ ಹೋರಾಟ; ಎರಡನ್ನೂ ಯಾವುದೇ ಧರ್ಮದ ಮೇಲಿನ ಸೇಡು ಎಂದು ಪರಿಗಣಿಸಬಾರದು’ ಎಂದೂ ಅವರು ಹೇಳಿದರು.

‘ನಿಜಾಮ್‌ ರಾಜ್ಯವನ್ನು ವಿಲೀನಗೊಳಿಸಲು ರಾಜಕೀಯ ಕಾರಣ ಮಾತ್ರವಲ್ಲ; ಪ್ರಾದೇಶಿಕ ಕಾರಣಗಳೂ ಇದ್ದವು. ಕರ್ನಾಟಕ, ಆಂಧ್ರ ಹಾಗೂ ಮಹಾರಾಷ್ಟ್ರ ರಾಜ್ಯಗಳು ಇದರ ಸುತ್ತ ಇದ್ದವು. ಮುಕ್ಕಾಲು ಭಾಗದಷ್ಟು ಜನ ಮುಸ್ಲಿಮೇತರರು ಇದ್ದರು. ಭಾಷೆ ಹಾಗೂ ಸಾಂಸ್ಕೃತಿಕವಾಗಿಯೂ ಇವರನ್ನು ಬೇರೆ ಮಾಡಲು ಸಾಧ್ಯವಿಲ್ಲ. ಯಾವುದೇ ಪ್ರದೇಶ ಸ್ವತಂತ್ರ ಅಸ್ತಿತ್ವ ಹೊಂದಲು ಇಂಥ ನಿಯಮಗಳ ಪಾಲನೆ ಅಗತ್ಯ. ಹಾಗಾಗಿ, ಹೋರಾಟವೇ ಅನಿವಾರ್ಯವಾಗಿತ್ತು’ ಎಂದರು.

ಸಮಿತಿಯ ಉಪಾಧ್ಯಕ್ಷ ಶ್ರೀಶೈಲ ಘೂಳಿ ಸಂವಾದ ನಡೆಸಿಕೊಟ್ಟರು. ಪ್ರಾಚಾರ್ಯ ಈಶ್ವರಯ್ಯ ಮಠ ಅಧ್ಯಕ್ಷತೆ ವಹಿಸಿದ್ದರು. ಡಿಡಿಪಿಯು ಶಿವಶರಣ ಮೂಳೆಗಾಂವ, ಇತಿಹಾಸ ವಿಭಾಗದ ಮುಖ್ಯಸ್ಥೆ ಕಲಾವತಿ ಡಿ., ನಾಗೇಂದ್ರ ಅವರಾದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT