ಬುಧವಾರ, ಮೇ 18, 2022
24 °C
ಮಧ್ಯಮ ಪ್ರತಿನಿಧಿಗಳಿಗೆ ಕೋವಿಶೀಲ್ಡ್‌ ಲಸಿಕೆ ಕುರಿತ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಹೇಳಿಕೆ

ನಾನು ಲಸಿಕೆ ಪಡೆದಿದ್ದೇನೆ, ನೀವೂ ಪಡೆಯಿರಿ: ವಿ.ವಿ. ಜೋತ್ಸ್ನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ದೇಶದ ಕೋವಿಡ್‌ ಲಸಿಕೆಗಳು ಸಂಪೂರ್ಣ ಸುರಕ್ಷತೆಯಿಂದ ಕೂಡಿವೆ. ಇವುಗಳ ಗುಣಮಟ್ಟದ ಬಗ್ಗೆ ಜನರು ಅನುಮಾನ ಪಡುವ ಅಗತ್ಯವಿಲ್ಲ. ಡಿ ದರ್ಜೆ ಸಿಬ್ಬಂದಿಯಿಂದ ಹಿಡಿದು ಎಲ್ಲ ಹಿರಿಯ ಅಧಿಕಾರಿಗಲೂ ಈ ಚುಚ್ಚುಮದ್ದು ಪಡೆದಿದ್ದೇವೆ. ಯಾರಿಗೂ ಏನೂ ತೊಂದರೆ ಆಗಿಲ್ಲ’ ಎಂದು ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ ಹೇಳಿದರು.

ನಗರದಲ್ಲಿ ಗುರುವಾರ ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಾಧ್ಯಮ ಪ್ರತಿನಿಧಿಗಳಿಗಾಗಿ ಆಯೋಜಿಸಿದ್ದ ‘ಕೋವಿಡ್‌ ವ್ಯಾಕ್ಸಿನ್’ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕೋವಿಡ್ ಲಸಿಕೆಗಳ ಬಗ್ಗೆ ಜನರಲ್ಲಿ ಇನ್ನೂ ಗೊಂದಲಗಳಿವೆ. ಅದನ್ನು ಹೋಗಲಾಡಿಸುವ ಜವಾಬ್ದಾರಿ ಸುಶಿಕ್ಷಕತರ ಮೇಲಿದೆ. ಜಿಲ್ಲೆಯ ಜನರಲ್ಲಿ ವಿಶ್ವಾಸ ಬರಲಿ ಎಂಬ ಉದ್ದೇಶದಿಂದ ಸ್ವತಃ ನಾನೂ ಕೋವಿಶೀಲ್ಡ್‌ ಪಡೆದಿದ್ದೇನೆ. ನನಗೇನೂ ತೊಂದರೆ ಆಗಿಲ್ಲ’ ಎಂದು ಅವರು ಹೇಳಿದರು.

‘ಲಸಿಕೆ ಪಡೆಯಲು ಕೆಲವು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಕೂಡ ಹಿಂದೆ ಸರಿಯುತ್ತಿದ್ದಾರೆ. ವೈದ್ಯ ವಿಜ್ಞಾನದ ಬಗ್ಗೆ ಖಚಿತ ಮಾಹಿತಿ ಇರುವವರು ಕೂಡ ಇಂಥ ಧೋರಣೆ ತಾಳಬಾರದು. ಮುಂದೆ ಬಂದು ಲಸಿಕೆ ಪಡೆಯುವ ಮೂಲಕ ಇತರರಿಗೆ ಮಾದರಿ ಆಗಬೇಕು’ ಎಂದು ಅವರು ಸೂಚಿಸಿದರು.‌

‘ಜನವರಿ 30ರ ವರೆಗೆ ಸರ್ಕಾರಿ ವಲಯದಲ್ಲಿ ಶೇ 53ರಷ್ಟು ಹಾಗೂ ಖಾಸಗಿ ವಲಯದಲ್ಲಿ ಕೇವಲ ಶೇ 15ರಷ್ಟು ಅರೋಗ್ಯ ಸಿಬ್ಬಂದಿ ಲಸಿಕೆ ಪಡೆದಿದ್ದರು. ಲಸಿಕೆ ಕುರಿತು ಅರೋಗ್ಯ ಸಿಬ್ಬಂದಿಗೆ ಅರಿವು ಮೂಡಿಸಲು ಅರೋಗ್ಯ ಇಲಾಖೆ ಹಾಗೂ ಖಾಸಗಿ ವಲಯದ ವೈದ್ಯರೊಂದಿಗೆ ಸಭೆ ನಡೆಸಿದರ ಪರಿಣಾಮ, ಫೆ.17ರವರೆಗೆ ಸರ್ಕಾರಿ ವಲಯದಲ್ಲಿ ಶೇ 71ರಷ್ಟು ಹಾಗೂ ಖಾಸಗಿ ವಲಯದಲ್ಲಿ ಶೇ 40ರಷ್ಟು ವ್ಯಾಕ್ಸಿನೇಷನ್ ಹೆಚ್ಚಳವಾಗಿದೆ’ ಎಂದರು.

ಕೋವಿಡ್‌ ಲಸಿಕೆ ಪಡೆದ ನಂತರ ಸಣ್ಣ ಪ್ರಮಾಣದ ಜ್ವರ, ತಲೆನೋವು, ವಾಂತಿ ಮುಂತಾದ ಸಣ್ಣ– ಪುಟ್ಟ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದು ಎಲ್ಲ ಲಸಿಕೆ ಪಡೆದಾಗಲೂ ಆಗುವಂಥ ಸಮಸ್ಯೆ. ಅದನ್ನು ಬಿಟ್ಟರೆ ಯಾವುದೇ ಗಂಭೀರ ಅಡ್ಡಪರಿಣಾಮ ಇಲ್ಲಿಯವರೆಗೆ ದೇಶದಲ್ಲಿ ಎಲ್ಲಿಯೂ ಕಂಡುಬಂದಿಲ್ಲ. ಈಗ ಸಣ್ಣ ಜ್ವರ, ಕೆಮ್ಮು ಕಾಣಿಸಿಕೊಳ್ಳದಂತೆ ಮಾಡಲು ಮುಂಚಿತವಾಗಿ ಒಂದು ‘ಪ್ಯಾರಸಿಟಮಲ್’ ಮಾತ್ರೆ ಸೇವಿಸಲು ತಿಳಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ವಿವರಿಸಿದರು.

‘ಜಿಲ್ಲೆಯಲ್ಲಿ ಕೋವಿಶಿಲ್ಡ್ ಲಸಿಕೆ ಮಾತ್ರ ನೀಡಲಾಗುತ್ತಿದ್ದು, ಮೊದಲ ಡೋಸ್ ತೆಗೆದುಕೊಂಡ 28 ದಿನಗಳ ಬಳಿಕ 2ನೇ ಡೋಸ್ ತೆಗೆದುಕೊಳ್ಳಬೇಕು. ಶೀಘ್ರದಲ್ಲಿ 3ನೇ ಹಂತದಲ್ಲಿ ಕೋವಿಡ್ ವ್ಯಾಕ್ಸಿನ್ ನೀಡುವ ಕಾರ್ಯಾರಂಭವಾಗಲಿದೆ. 50 ವರ್ಷ ದಾಟಿದ ನಾಗರಿಕರಿಗೆ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ವಿತರಿಸಲಾಗುವುದು. ಸಾರ್ವಜನಿಕರು ಭಯಪಡದೇ ಲಸಿಕೆ ಪಡೆದುಕೊಳ್ಳಿ’ ಎಂದರು.

‘ಕೋವಿಶೀಲ್ಡ್‌ನ ಅವಧಿ ಆರು ತಿಂಗಳು ಇರುತ್ತದೆ. ಅದಕ್ಕಿಂತ ಒಂದು ದಿನ ಮುಂಚೆ ಪಡೆದರೂ ಏನೂ ತೊಂದರೆ ಇಲ್ಲ. ಅವಧಿ ಮುಗಿದ ಮೇಲೆ ಪಡೆದರೂ ಅದರ ಅಡ್ಡಪರಿಣಾಮ ಏನೂ ಇಲ್ಲ; ಬದಲಾಗಿ ಅದು ಪರಿಣಾಮಕಾರಿ ಕೆಲಸ ಮಾಡುವುದಿಲ್ಲ ಅಷ್ಟೇ. ದೇಶದಲ್ಲಿ ಈವರೆಗೆ 43 ಲಕ್ಷ ಹಾಗೂ ರಾಜ್ಯದಲ್ಲಿ 2.3 ಲಕ್ಷ ಆರೋಗ್ಯ ಸಿಬ್ಬಂದಿ ಲಸಿಕೆ ಪಡೆದಿದ್ದಾರೆ. ಲಸಿಕೆ ಪಡೆದ ನಂತರ 30 ನಿಮಿಷ ಆರೋಗ್ಯದ ಮೇಲೆ ನಿಗಾ ಇಡಲಾಗುತ್ತದೆ. ಇದರ ಏನೇ ಪರಿಣಾಮ ಆಗಬೇಕೆಂದರೂ 30 ನಿಮಿಷದಲ್ಲಿ ಮಾತ್ರ ಆಗುತ್ತದೆ. ಹಾಗಾಗಿ, ಈ ನಿಗಾ ಅವಧಿ ಕಡ್ಡಾಯ ಮಾಡಲಾಗಿದೆ’ ಎಂದು ಜೋತ್ಸ್ನಾ ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರ ಡಾ.ದಿಲೀಶ್ ಸಾಸಿ ಮಾತನಾಡಿ, ‘ದೇಶದಲ್ಲಿ ಈ ಮುಂಚೆ ಪೋಲಿಯೊ, ಸಿಡುಬು ನಂತಹ ಮಾರಕ ಕಾಯಿಲೆಗಳು ಬಂದಿವೆ. ಅವುಗಳನ್ನು ನಿಯಂತ್ರಣ ಮಾಡಲು ತೆಗೆದುಕೊಂಡಂತಹ ಕ್ರಮಗಳನ್ನೇ ಕೋವಿಡ್ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಪೋಲಿಯೊ, ಸಿಡುಬು ಮುಕ್ತ ದೇಶವಾದಂತೆಯೇ ಕೋವಿಡ್ ಮುಕ್ತ ದೇಶಕ್ಕೆ ಸಾರ್ವಜನಿಕರು ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಜಿಮ್ಸ್ ಆಸ್ಪತ್ರೆಯ ಕೋವಿಡ್ ನೋಡಲ್ ಅಧಿಕಾರಿ ಡಾ.ಗುರುರಾಜ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಪ್ರಭುಲಿಂಗ್ ಮಾನಕರ್, ವಿವಿಧ ಮಾಧ್ಯಮಗಳ ಪ್ರತಿನಿಧಿಗಳು ಹಾಗೂ ಅರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು