ಭಾನುವಾರ, ಸೆಪ್ಟೆಂಬರ್ 22, 2019
25 °C
ಒಡಲಾಳ ಬಿಚ್ಚಿಟ್ಟ ಕ್ಯಾನ್ಸರ್‌ ತಜ್ಞೆ ವಿಜಯಲಕ್ಷ್ಮಿ ದೇಶಮಾನೆ

ಅಪ್ಪ ತೋರಿದ ಬೆಳಕಿನಲಿ ನಡೆದೆ..

Published:
Updated:
Prajavani

ಕಲಬುರ್ಗಿ: ತಳಸಮುದಾಯದ ಹೆಣ್ಣುಮಕ್ಕಳಿಗೆ ಶಿಕ್ಷಣ ಮರೀಚಿಕೆಯಾಗಿದ್ದ ಕಾಲಘಟ್ಟದಲ್ಲಿ ಅಪ್ಪ ಅದನ್ನು ದೊರಕಿಸಿಕೊಟ್ಟರು. ಅವರ ಪ್ರೋತ್ಸಾಹವೇ ನನಗೆ ದಾರಿದೀಪವಾಯಿತು...

ಹೆಸರಾಂತ ಕ್ಯಾನ್ಸರ್‌ ತಜ್ಞೆ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರ ಮನದಾಳದ ಮಾತುಗಳಿವು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಮನದಾಳದ ಮಾತು’ ಕಾರ್ಯಕ್ರಮದಲ್ಲಿ ಅವರು ತಮ್ಮ ಬದುಕಿನ ಪುಟಗಳನ್ನು ಒಂದೊಂದಾಗಿ ತೆರೆದಿಡುತ್ತ ಎಲ್ಲರ ಕಣ್ಣಾಲೆಗಳನ್ನು ಒದ್ದೆಯಾಗಿಸಿದರು.

ಬಡತನದಲ್ಲೂ ಅಕ್ಷರದ ಕನವರಿಕೆ: ‘ತಂದೆ ಎಂಎಸ್‌ಕೆ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅಮ್ಮ ಗಾಜೀಪುರದ ಬೇವಿನ ಮರದ ಕೆಳಗೆ ತರಕಾರಿ ಮಾರಾಟ ಮಾಡುತ್ತಿದ್ದರು. ಆ ದುಡ್ಡಲ್ಲೇ ಪುಸ್ತಕ ತರುತ್ತಿದ್ದರು. ಚಿಮಣಿ ಬೆಳಕಿನಲ್ಲಿ ಅವ್ವ ರೊಟ್ಟಿ ತಟ್ಟುತ್ತಿದ್ದರೆ, ಅಪ್ಪ ಪಾಟಿ ಮೇಲೆ ಅಕ್ಷರ ಹಾಕಿ ಕೊಡುತ್ತಿದ್ದರು. ಏನೇ ಕಷ್ಟ ಬಂದರೂ ಕುಗ್ಗದೆ ಎಲ್ಲರಿಗೂ ಶಿಕ್ಷಣ ಕೊಡಿಸಿದರು. ಬಡತನದಲ್ಲೂ ಅಕ್ಷರವನ್ನೇ ಕನವರಿಸುತ್ತಿದ್ದೆವು’ ಎಂದು ಸ್ಮರಿಸಿದರು.

‘ನಾನು ಆಗ ತಾನೇ ವಿಜ್ಞಾನ ವಿಷಯದಲ್ಲಿ ಪಿಯುಸಿ ಪಾಸಾಗಿದ್ದೆ, ಶಿಕ್ಷಕಿಯಾಗಬೇಕು ಎಂದುಕೊಂಡಿದ್ದೆ, ಆದರೆ ಇಎಸ್‌ಐ ಆಸ್ಪತ್ರೆಯಲ್ಲಿ ನಡೆದ ಒಂದು ಘಟನೆ ಅಪ್ಪನನ್ನು ಕಲಕಿ ನನ್ನನ್ನು ವೈದ್ಯೆಯಾಗಬೇಕು ಎಂದು ಒತ್ತಾಯಿಸಿದರು. ಅವರ ಒತ್ತಾಸೆಯಂತೆ ಶ್ರಮವಹಿಸಿ ಓದಿದೆ. ಎಂಬಿಬಿಎಸ್‌ ಪ್ರವೇಶಕ್ಕೆ ಶುಲ್ಕ ಭರಿಸಲು ಹಣ ಇಲ್ಲದಾಗ ಅವ್ವ ತಾಳಿ ಅಡವಿಟ್ಟು ಹಣ ತಂದರು. ಅದರ ಫಲವಾಗಿ ಇಂದು ಎಲ್ಲರೂ ಗುರುತಿಸುವಂತೆ ಆಗಿದ್ದೇನೆ’ ಎಂದರು.

‘ಬಳ್ಳಾರಿಯ ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸೆ ವಿಷಯದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದು, 1984ರಲ್ಲಿ ಕಿದ್ವಾಯಿಯಲ್ಲಿ ಸ್ಥಾನಿಕ ವೈದ್ಯೆಯಾಗಿ ಸೇರಿಕೊಂಡೆ. ನನ್ನಲ್ಲಿಯ ಹಳ್ಳಿಯ ಹಳಹಳಿಕೆಯನ್ನು ಕಂಡು ಕೆಲ ವೈದ್ಯರು ಹಾಗೂ ಅಲ್ಲಿಯ ಸಿಬ್ಬಂದಿ ಪ್ರಾರಂಭದಲ್ಲಿ ಕುಹಕವಾಡಿದರು. ಆದರೂ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಯುವ ಪ್ರಾಧ್ಯಾಪಕರನ್ನು ನೋಡಿ ನನಗೂ ಪ್ರಾಧ್ಯಾಪಕಿಯಾಗುವ ಕನಸು ಹುಟ್ಟಿತು. ಒಂದು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಅದಕ್ಕೆ ಅರ್ಜಿ ಹಾಕಿ ಪ್ರಾಧ್ಯಾಪಕಿಯಾಗಿ ಆಯ್ಕೆಯಾದೆ’ ಎಂದು ಹೇಳಿದರು.

‘ಮುಂದೆ ಹಿರಿಯ ಪ್ರಾಧ್ಯಾಪಕಿಯಾಗಿ ಬಡ್ತಿ ಪಡೆದೆ. ನನ್ನನ್ನು ಕಿದ್ವಾಯಿ ಆಸ್ಪತ್ರೆಯಲ್ಲಿ ‘ಗುಲಬರ್ಗಾ ಡಾಕ್ಟರ್‌ ’ ಎಂದೇ ಕರೆಯುತ್ತಿದ್ದರು. ಪ್ರಭಾರ ನಿರ್ದೇಶಕಿಯಾಗಿ ನೇಮಕವಾದೆ. 300 ಹಾಸಿಗೆ ಸಾಮರ್ಥ್ಯದ ಒಂದು ಕಟ್ಟಡ ಬಳಕೆಗೆ ಮುಕ್ತವಾಗಿರಲಿಲ್ಲ. ಅದನ್ನು ಸ್ವಚ್ಛ ಮಾಡಿಸಿ ರೋಗಿಗಳಿಗೆ ಅನುಕೂಲ ಮಾಡಿಕೊಟ್ಟೆ. ಹೈದರಾಬಾದ್‌ ಕರ್ನಾಟಕ ಭಾಗದವರು ಯಾರಾದರೂ ಬಂದರೆ ಅವರಿಗೆ ಮೊದಲು ಪ್ರವೇಶ ಕೊಡಿಸುತ್ತಿದ್ದೆ. ಕಿದ್ವಾಯಿ ಗೇಟ್‌ ದಾಟಿ ಹೊರಗೆ ಬರುತ್ತಿರಲಿಲ್ಲ’ ಎಂದರು.

ತಮ್ಮನ ನೆನಪು: ‘ತಮ್ಮ ಅಜಯ್‌ ಘೋಷ್‌ ಕುಟುಂಬಕ್ಕೆ ನಾವಿಕನಂತಿದ್ದ. ನಮ್ಮನ್ನು ಕೆಲಸ ಮಾಡಲು ಬಿಡುತ್ತಿರಲಿಲ್ಲ. ತಾನೇ ಎಲ್ಲವನ್ನು ಮಾಡುತ್ತಿದ್ದ. ಅವನು ವಸತಿ ನಿಲಯದಲ್ಲಿ ಇದ್ದಾಗ ತಂಗಿ ರೊಟ್ಟಿ ತೆಗೆದುಕೊಂಡು ಬರಲು ಹೋಗುತ್ತಿದ್ದರು. ಸಹೋದರಿ ಸೆರಗು ಒಡ್ಡುತ್ತಿದ್ದರು. ತಮ್ಮ ಮೇಲಿನಿಂದ ರೊಟ್ಟಿ ಎಸೆಯುತ್ತಿದ್ದ. ಅವನು ಇರಬೇಕಿತ್ತು’ ಎಂದು ಭಾವುಕರಾದರು.

ಹೃದಯಾಘಾತ: ‘ತಾಯಿ ಹಾಗೂ ಸಹೋದರನ ಅಗಲಿಕೆ ತುಂಬಾ ನೋವನ್ನು ಉಂಟು ಮಾಡಿತು. ಆದ್ದರಿಂದ ಹೃದಯಾಘಾತ ಉಂಟಾಯಿತು. ಜಯದೇವಕ್ಕೆ ತೆರಳಿ ತೋರಿಸಿಕೊಂಡೆ, ಅಲ್ಲಿಯ ನಿರ್ದೇಶಕ ಮಂಜುನಾಥ ಉತ್ತಮವಾಗಿ ಸ್ಪಂದಿಸಿದರು’ ಎಂದರು.

ಕೃಷ್ಣ ಎಂದರೆ ಇಷ್ಟ: ಮೊದನಿಂದಲೂ ನನಗೆ ಶ್ರೀಕೃಷ್ಣ ಎಂದರೆ ಇಷ್ಟ. ಬೆಂಗಳೂರಿನಲ್ಲಿ ಕೃಷ್ಣ ಮಂದಿರ ಕಟ್ಟಿಸಿದ್ದೇನೆ. ಮನಸ್ಸಿಗೆ ತುಂಬಾ ನೋವಾದಾಗ ಭಗವದ್ಗೀತೆ ಓದುತ್ತೇನೆ. ನೋವೆಲ್ಲ ಮಾಯವಾಗುತ್ತದೆ. ಪೂಜೆ ಮಾಡದಿದ್ದರೆ ಮನುಷ್ಯ ಸ್ವಸ್ಥವಾಗಿರಲು ಸಾಧ್ಯವಿಲ್ಲ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವೀರಭದ್ರ ಸಿಂಪಿ, ಬಾಬುರಾವ ದೇಶಮಾನೆ, ಸಾಹಿತಿ ವಸಂತ ಕುಷ್ಟಗಿ, ಡಾ.ನಾಗರತ್ನ ದೇಶಮಾನೆ, ಶಾಸಕ ಎಂ.ವೈ.ಪಾಟೀಲ,  ನರಸಿಂಗರಾವ ಹೇಮನೂರು, ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್, ಆನಂದ ನಂದೂರಕರ್ ಹಾಗೂ ಶಿವಶರಣಪ್ಪ ಕೊಬಾಳ ಇದ್ದರು.

ಸವಿತಾ ನಾಶಿ ನಿರೂಪಿಸಿದರು. ಸುಜಾತ ರೆಡ್ಡಿ ಸ್ವಾಗತಿಸಿದರು.

Post Comments (+)