ಕಲಬುರಗಿ: ‘ಜೇವರ್ಗಿ ತಾಲ್ಲೂಕಿನ ಅಕ್ಷರ ದಾಸೋಹದ ಧಾನ್ಯ ಸರಬರಾಜು ಮಾಡುವಲ್ಲಿ ಅಲ್ಲಿನ ತಾಲ್ಲೂಕು ಅಧಿಕಾರಿ ಭ್ರಷ್ಟಾಚಾರ ಎಸಗುತ್ತಿದ್ದಾರೆ’ ಎಂದು ಆಂದೋಲಾದ ಕರುಣೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ ಆರೋಪಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಕಳೆದ ವರ್ಷ ಜೂನ್, ಜುಲೈ ತಿಂಗಳಲ್ಲಿ ಜೇವರ್ಗಿ ತಾಲ್ಲೂಕಿನ 290 ಶಾಲೆಗಳಿಗೆ ಎರಡು ತಿಂಗಳ ಧಾನ್ಯ ಸರಬರಾಜು ಮಾಡುವಲ್ಲಿ ₹65 ಲಕ್ಷ ಅಕ್ರಮವಾಗಿದೆ’ ಎಂದು ಆರೋಪಿಸಿದರು.
‘ಅಕ್ರಮ ಕುರಿತು ಜಿಲ್ಲಾ ಪಂಚಾಯಿತಿ ಸಿಇಒ ಅವರು ಅಧಿಕಾರಿಯನ್ನು ಅಮಾನತು ಮಾಡಿದ್ದರು. ಜಿಲ್ಲಾ ಪಂಚಾಯಿತಿಯಲ್ಲಿ ಕೆಲ ಅಧಿಕಾರಿಗಳು ಸರಿಯಾದ ದಾಖಲೆಗಳನ್ನು ಕೆಎಟಿಗೆ ಸಲ್ಲಿಸದ ಕಾರಣ ಕೆಎಟಿಗೆ ಹೋಗಿ ಅಧಿಕಾರಿ 20 ದಿನದಲ್ಲಿ ತಡೆಯಾಜ್ಞೆ ತಂದರು’ ಎಂದು ಹೇಳಿದರು.
ತನಿಖಾಧಿಕಾರಿಗೆ ಬೆದರಿಕೆ: ಸಮಗ್ರ ತನಿಖೆಗೆ ಆಗ್ರಹಿಸಿ 300 ಪುಟಗಳಷ್ಟು ದಾಖಲೆ ಒದಗಿಸಿ ಜಿಲ್ಲಾಧಿಕಾರಿಗೆ ಮರು ದೂರು ನೀಡಲಾಗಿದೆ. ಅವರು ತನಿಖೆಗೆ ಪ್ರತ್ಯೇಕ ತಂಡ ರಚಿಸಿದ್ದಾರೆ. ಆದರೆ, ಆ ತನಿಖಾಧಿಕಾರಿಗಳಿಗೆ ತಡರಾತ್ರಿ ಮೂರು ಗಂಟೆಗೆ ಮೊಬೈಲ್ ಸಂದೇಶದ ಮೂಲಕ ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ಭ್ರಷ್ಟಾಚಾರ ನಡೆದಿದೆ. ನನ್ನ ಹೆಸರು ವರದಿಯಲ್ಲಿ ಸೇರಿಸಿದರೆ ನಿಮ್ಮ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಬೆದರಿಕೆ ಹಾಕುತ್ತಾರೆ. ಒಬ್ಬ ಅಧಿಕಾರಿ ಇಷ್ಟು ಬೆದರಿಕೆ ಹಾಕಲು ಇವರ ಹಿಂದೆ ಎಂಥ ದೊಡ್ಡ ಅಧಿಕಾರಿ ಇರಬಹುದು’ ಎಂದು ಪ್ರಶ್ನಿಸಿದರು.
ಶಾಸಕರ ಮನೆ ಡೆಮಾಲಿಷನ್ ಮಾಡಲಿ: ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರ ಮನೆ ನಿಯಮ ಬಾಹಿರವಾಗಿ ಕಟ್ಟಲಾಗಿದೆ. ಧಮ್ ಇದ್ದರೆ ಮೊದಲು ಜಿಲ್ಲಾ ಉಸ್ತುವಾರಿ ಸಚಿವರು ಆ ಮನೆ ಡೆಮಾಲಿಷನ್ ಮಾಡಲಿ’ ಎಂದರು.
‘ನನ್ನ ಗಮನಕ್ಕೆ ಬಂದಿರುವುದರಿಂದ ಕೋಟನೂರ (ಡಿ) ಶಾಖಾ ಮಠಕ್ಕೆ ನೋಟಿಸ್ ನೀಡಿದೆ. ಅದರಲ್ಲೇನು ತಪ್ಪಿದೆ’ ಎಂದು ಸಚಿವರು ಕೇಳುತ್ತಾರೆ. ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಮನೆ ಕಾಂಪೌಂಡ್ ಕಟ್ಟುವ ಸ್ಥಳದಲ್ಲಿ ಗೋಡೆ ಕಟ್ಟಿದ್ದಾರೆ. ಶಾಂತಿ ನಗರದಲ್ಲಿ ಹಲವು ಕಟ್ಟಡ ಅಕ್ರಮವಾಗಿ ನಿರ್ಮಿಸಲಾಗಿದೆ’ ಎಂದು ಆರೋಪಿಸಿದರು.
‘ಸೂಪರ್ ಮಾರುಕಟ್ಟೆಯಲ್ಲಿರುವ ಮೈಬಾಜ್ ಮಸೀದಿ ಅಕ್ರಮವಾಗಿದೆ. ವಾಯಿಸ್ ಬಾಬಾ ಒಂದು ಎಕರೆ ಸ್ಥಳ ರಸ್ತೆ ಸಹಿತ ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದಾರೆ. ನಿಮ್ಮಲ್ಲಿ ಧಮ್ ಇದ್ದರೆ ಅವುಗಳ ವಿರುದ್ಧ ನೋಟಿಸ್ ನೀಡಿ, ಡೆಮಾಲಿಷನ್ ಮಾಡಿ’ ಎಂದು ಸವಾಲು ಹಾಕಿದರು.
ದಾಖಲೆ ಕೇಳಿರುವೆ: ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಮನೆಯ ದಾಖಲೆಗಳನ್ನು ಕಳೆದ 20 ದಿನಗಳ ಹಿಂದೆ ಆರ್‌ಟಿಐ ಮುಖಾಂತರ ಕೇಳಿರುವೆ. ಈ ಹಿಂದೆ ಕೆಪಿಇ ಸಂಸ್ಥೆಯ ಸ್ಥಳದ ಬ್ಲೂ ಪ್ರಿಂಟ್ ಸೇರಿ ದಾಖಲೆ ನೀಡಿ ಎಂದಿದ್ದಕ್ಕೆ, ಕಚೇರಿಯಲ್ಲಿ ಕಡತ ಲಭ್ಯವಿಲ್ಲ’ ಎಂದು ಸರ್ಕಾರಿ ಅಧಿಕಾರಿ ಅಧಿಕಾರಿಗಳು ಉತ್ತರ ನೀಡಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಬಿಜೆಪಿ ನಾಯಕರು ಸಚಿವರು ಪಾರ್ಟ್‌ನರ್’
‘ಜಿಲ್ಲೆಯಲ್ಲಿ ಕೆಲ ಬಿಜೆಪಿ ನಾಯಕರು ಹಾಗೂ ಉಸ್ತುವಾರಿ ಸಚಿವರು ಪಾರ್ಟ್‌ನರ್ ಆಗಿದ್ದಾರೆ’ ಎಂದು ಸಿದ್ಧಲಿಂಗ ಸ್ವಾಮೀಜಿ ಆರೋಪಿಸಿದರು. ‘ಸರ್ಕಾರಿ ಸ್ಥಳಗಳನ್ನು ನುಂಗಿ ಪ್ಲಾಟ್ ಮಾಡಿಕೊಂಡಿದ್ದಾರೆ. ರಸ್ತೆ ಮೇಲೆ ಕಾಂಪ್ಲೆಕ್ಸ್ ನಿರ್ಮಾಣ ಮಾಡಿಕೊಂಡಿದ್ದಾರೆ. ಇದು ಜಿಲ್ಲೆಯ ದುರಂತವಾಗಿದ್ದು ಕಲಬುರಗಿ ಬಿಜೆಪಿಯನ್ನು ಫಿಲ್ಟರ್ ಮಾಡಬೇಕಿದೆ. ಇಲ್ಲದಿದ್ದರೇ ಬಿಜೆಪಿ ಇಲ್ಲಿ ಶೂನ್ಯವಾಗಲಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.