ಕಲಬುರಗಿ: ‘ಸರ್ಕಾರಿ ಸೇವೆ, ಇಲ್ಲವೇ ಸಾಮಾಜಿಕ ಕಾರ್ಯದಲ್ಲಿ ಉತ್ತಮ ಕೆಲಸ ಮಾಡಿದ್ದಲ್ಲಿ ಹೆಸರು ಸಾಮಾಜಿಕವಾಗಿ ಪ್ರಚಲಿತವಾಗಿ ಜನಮಾನಸದಲ್ಲಿ ಬೇರೂರತ್ತದೆ’ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಸುಂದರೇಶಬಾಬು ಹೇಳಿದರು.
ನಗರದ ಕೆಕೆಆರ್‌ಡಿಬಿ ಕಚೇರಿಯಲ್ಲಿ ಮಂಡಳಿಯ ಅಧೀನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ದಯಾನಂದ ಪಾಟೀಲ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.
‘ಸರ್ಕಾರಿ ಸೇವೆ ಸೇರೋದು ಆಕಸ್ಮಿಕವಾದರೂ ನಿವೃತ್ತಿ ಅನಿವಾರ್ಯ. ಸರ್ಕಾರಿ ಸೇವೆಗೆ ಸೇರುವ ಭಾಗ್ಯ ಎಲ್ಲರಿಗೂ ದೊರಕುವುದಿಲ್ಲ. ಆದರೆ ದೊರೆತಿರುವ ಅವಕಾಶದಲ್ಲಿ ಜನೋಪಯೋಗಿ ಕಾರ್ಯ ಮಾಡಿದ್ದಲಿ ವೈಯಕ್ತಿಕವಾಗಿ ಉತ್ತಮ ಹೆಸರು ಮಾಡುವುದರ ಜೊತೆಗೆ ಸಾಮಾಜಿಕವಾಗಿ ಅಭಿವೃದ್ಧಿಗೆ ಪೂರಕವಾಗುತ್ತದೆ’ ಎಂದರು.
ಮಂಡಳಿಯ ಉಪಕಾರ್ಯದರ್ಶಿ ಪ್ರಮೀಳಾ ಪೆರ್ಲ ಮಾತನಾಡಿ, ‘ದಯಾನಂದ ಪಾಟೀಲ ಅವರು ಸೇವೆಯುದ್ದಕ್ಕೂ ಕಂಡುಕೊಂಡ ಅನುಭವ ಧಾರೆ ಎರೆಯುವ ಮೂಲಕ ಹಿರಿಯ ಅಧಿಕಾರಿಗಳ ವಿಶ್ವಾಸ ಗಳಿಸಿಕೊಂಡಿದ್ದರು’ ಎಂದರು.
ಜಂಟಿ ಕಾರ್ಯದರ್ಶಿ ಪ್ರವೀಣಪ್ರಿಯಾ ಡೇವಿಡ್ ಮಾತನಾಡಿದರು. ಸಮಾರಂಭದಲ್ಲಿ ದಯಾನಂದ ಪಾಟೀಲ ದಂಪತಿಯನ್ನು ಸನ್ಮಾನಿಸಿ ಶುಭ ಕೋರಲಾಯಿತು. ಮಂಡಳಿಯ ಸಿಬ್ಬಂದಿ, ಇತರರು ಹಾಜರಿದ್ದರು.