ದೈಹಿಕ ಸಾಮರ್ಥ್ಯ ವೃದ್ಧಿಸಲು ಸಲಹೆ

7
ಪೊಲೀಸ್ ಸಿಬ್ಬಂದಿಗೆ ಆರೋಗ್ಯ ರಕ್ಷಣೆ; ಸುಧಾರಣೆ ಶಿಬಿರ

ದೈಹಿಕ ಸಾಮರ್ಥ್ಯ ವೃದ್ಧಿಸಲು ಸಲಹೆ

Published:
Updated:

ಕಲಬುರ್ಗಿ: ‘ಪೊಲೀಸ್ ಸಿಬ್ಬಂದಿ ದೈಹಿಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವ ಮೂಲಕ ವೈಯಕ್ತಿಕವಾಗಿ ಹಾಗೂ ಇಲಾಖೆ ಮತ್ತು ಸಾರ್ವಜನಿಕರಿಗೆ ನೆರವಾಗಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ಹೇಳಿದರು.

ನಗರದ ಪೊಲೀಸ್ ಭವನದಲ್ಲಿ ಪೊಲೀಸ್ ಸಿಬ್ಬಂದಿಗೆ ಸೋಮವಾರ ಏರ್ಪಡಿಸಿದ್ದ ‘ಆರೋಗ್ಯ ರಕ್ಷಣೆ; ಸುಧಾರಣೆ’ ಶಿಬಿರದಲ್ಲಿ ಅವರು ಮಾತನಾಡಿದರು.

‘ಪೊಲೀಸರು ದೈಹಿಕವಾಗಿ ಅಸಮರ್ಥರಾಗಿದ್ದಾರೆ, ಅದರಿಂದ ಕಾರ್ಯ ನಿರ್ವಹಣೆಗೆ ತೊಂದರೆಯಾಗುತ್ತಿದೆ ಎಂಬ ದೂರುಗಳಿವೆ. ಆದರೆ ಈ ಪ್ರಮಾಣ ಕಡಿಮೆ ಇದೆ. ವಯೋಸಹಜ ಹಾಗೂ ಬೇರೆ ಬೇರೆ ಕಾರಣಗಳಿಂದ ಕೆಲವು ಕಾನ್‌ಸ್ಟೆಬಲ್‌ಗಳು ಮತ್ತು ಅಧಿಕಾರಿಗಳಲ್ಲಿ ದೈಹಿಕ ಸಾಮರ್ಥ್ಯ ಕಡಿಮೆ ಆಗಿರುವುದು ನಿಜ. ಅಂತಹ 72 ಪುರುಷರು ಮತ್ತು 18 ಮಹಿಳೆಯರನ್ನು ಗುರುತಿಸಿ, ಆರೋಗ್ಯ ರಕ್ಷಣೆ ತರಬೇತಿ ನೀಡಲಾಗುತ್ತಿದೆ’ ಎಂದು ತಿಳಿಸಿದರು.

‘ಶಿಬಿರಕ್ಕೆ ಆಯ್ಕೆಯಾಗಿರುವ ಸಿಬ್ಬಂದಿ ಪ್ರತಿ ನಿತ್ಯ ಬೆಳಿಗ್ಗೆ 6.30 ರಿಂದ 9.30 ಗಂಟೆಯವರೆಗೆ ಹಾಗೂ ಸಂಜೆ 4.30 ರಿಂದ 6.30ರ ವರೆಗೆ ಒಳಾಂಗಣ ತರಬೇತಿಗೆ ಹಾಜರಾಗಬೇಕು. ನುರಿತ ವೈದ್ಯರು ಆರೋಗ್ಯ ತಪಾಸಣೆ ನಡೆಸಿ, ಜೀವನ ಶೈಲಿ ಮತ್ತು ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡುತ್ತಾರೆ. ಯೋಗ ಪಟು ಯೋಗಾಸನ ಬಗ್ಗೆ ಹೇಳಿ ಕೊಡುತ್ತಾರೆ. ಆದ್ದರಿಂದ ಯಾರೊಬ್ಬರೂ ಶಿಬಿರಕ್ಕೆ ಗೈರಾಗಬಾರದು. ಶಿಸ್ತು ಪಾಲಿಸದಿದ್ದರೆ ಕಠಿಣ ಕ್ರಮಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಒಂದು ವಾರದ ಒಳಾಂಗಣ ತರಬೇತಿ ಬಳಿಕ, ಮೂರು ವಾರ ಹೊರಾಂಗಣ ತರಬೇತಿ ಇರುತ್ತದೆ. ಇದರಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ, ವೇಗದ ನಡಿಗೆ, ಓಟ, ಕ್ರೀಡಾಕೂಟ ಹಾಗೂ ಬೇರೆ ಬೇರೆ ಚಟುವಟಿಕೆಗಳು ಇರುತ್ತವೆ’ ಎಂದು ಹೇಳಿದರು.

‘ಪೊಲೀಸ್ ಸಿಬ್ಬಂದಿಯ ದೈಹಿಕ ಆರೋಗ್ಯ ಹಾಳಾದರೆ, ಮಾನಸಿಕ ಆರೋಗ್ಯವೂ ಹಾಳಾಗುತ್ತದೆ. ಅದರಿಂದ ವೈಯಕ್ತಿಕವಾಗಿ ಮತ್ತು ಇಲಾಖೆಗೆ ನಷ್ಟವಾಗುತ್ತದೆ. ಆದ್ದರಿಂದ ಇದಕ್ಕೆ ಯಾರೂ ಆಸ್ಪದ ಮಾಡಿಕೊಡಬಾರದು’ ಎಂದು ತಿಳಿಸಿದರು.

ವೈದ್ಯರಾದ ಡಾ.ಬಸವರಾಜ ಜಿ.ಟಿ., ಡಾ.ಅಭಿಷೇಕ ಮಾಲಿಪಾಟೀಲ, ಯೋಗ ಪಟು ಸುಮಂಗಲಾ ಚಕ್ರವರ್ತಿ ಇದ್ದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಬಿ.ಜೆ. ವಂದಿಸಿದರು.

*
ಅನ್ನ, ಎಣ್ಣೆ ಪದಾರ್ಥಗಳು, ಮಾಂಸಾಹಾರ, ಮದ್ಯ ಸೇವನೆ ತ್ಯಜಿಸಬೇಕು. ಪ್ರತಿ ನಿತ್ಯ ವ್ಯಾಯಾಮ, ವೇಗದ ನಡಿಗೆ, ಯೋಗಾಸನ ಮಾಡಬೇಕು.
-ಎನ್.ಶಶಿಕುಮಾರ್ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !