6
ಕಲಬುರ್ಗಿ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಸುಧಾರಣೆಗೆ ಕ್ರಮ

ನೀರು ಸೋರಿಕೆ ತಡೆ ಕಾಮಗಾರಿಗೆ ಯುಜಿಡಿ ಹಣ

Published:
Updated:

ಕಲಬುರ್ಗಿ: ಬೆಣ್ಣೆತೊರಾ ಜಲಾಶಯದಿಂದ ನಗರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಯಲ್ಲಿ ಸೋರಿಕೆಯಾಗುತ್ತಿದೆ. ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯ ಉಳಿಕೆ ಹಣ ಬಳಸಿಕೊಂಡು ಸೋರಿಕೆ ತಡೆ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.

ಕಲಬುರ್ಗಿ ಉತ್ತರ ಕ್ಷೇತ್ರದ ಶಾಸಕಿ ಕನ್ನೀಜ್‌ ಫಾತಿಮಾ ಅವರು ಈ ವಿಷಯವಾಗಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಜಿಲ್ಲಾಧಿಕಾರಿ ಅವರ ಸಲಹೆಯ ಮೇರೆಗೆ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಠರಾವು ಅಂಗೀಕರಿಸಿದೆ. ಇದಕ್ಕೆ ಅನುಮೋದನೆ ನೀಡುವಂತೆ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಕಳಿಸಲಾಗಿದೆ.

ಬೆಣ್ಣೆತೊರಾ ಜಲಾಶಯದಿಂದ ಕಲಬುರ್ಗಿ ನಗರಕ್ಕೆ ನೀರು ಪೂರೈಸುವ ಯೋಜನೆ ಅನುಷ್ಠಾನಗೊಂಡಿದ್ದು 1978ರಲ್ಲಿ. ನಗರದ ಬಹುಪಾಲು ಪ್ರದೇಶಕ್ಕೆ ಈ ಯೋಜನೆಯಿಂದ ನೀರು ಪೂರೈಸಲಾಗುತ್ತಿದೆ. ಈ ಯೋಜನೆಯ 9.20 ಕಿ.ಮೀ.ನಲ್ಲಿ 600 ಎಂ. ಎಂ ವ್ಯಾಸದ ಸಿಮೆಂಟ್‌ (ಪಿ.ಎಸ್‌.ಸಿ) ಪೈಪ್‌ಲೈನ್‌ ಅಳವಡಿಸಲಾಗಿದೆ. ಈಗ ಈ ಕೊಳವೆ ಮಾರ್ಗವು ಸೋರಿಕೆಯಾಗಿ, ನೀರು ಪೋಲಾಗುತ್ತಿದೆ.

‘ಬೆಳೆಯುತ್ತಿರುವ ನಗರಕ್ಕೆ ನೀರು ಪೂರೈಕೆ ವ್ಯವಸ್ಥೆ ಸುಧಾರಿಸಬೇಕಿದೆ. 9.20 ಕಿ.ಮೀ. ವ್ಯಾಪ್ತಿಯಲ್ಲಿರುವ ಸಿಮೆಂಟ್‌ ಪೈಪ್‌ಗಳ ಬದಲಾಗಿ 660 ಎಂ.ಎಂ ವ್ಯಾಸದ ಕಬ್ಬಿಣದ (ಎಂ.ಎಸ್‌) ಪೈಪ್‌ ಅಳವಡಿಕೆ ಅನಿವಾರ್ಯ. ಇದಕ್ಕೆ ₹12.89 ಕೋಟಿ ಹಣದ ಅವಶ್ಯಕತೆ ಇದೆ’ ಎಂದು ಕನ್ನೀಜ್‌ ಫಾತಿಮಾ ಅವರು ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದರು.

‘ಕಲಬುರ್ಗಿ ನಗರಕ್ಕೆ ಅಮೃತ್‌ ಯೋಜನೆಯಡಿ ₹156.80 ಕೋಟಿ ಅನುದಾನಕ್ಕೆ ಅನುಮೋದನೆ ದೊರೆತಿದ್ದು, ಒಳಚರಂಡಿ ಕಾಮಗಾರಿಗೆ ₹12.36 ಕೋಟಿ ಹೆಚ್ಚುವರಿ ಅನುದಾನ ನೀಡಲಾಗಿದೆ. ಹೆಚ್ಚುವರಿ ಅನುದಾನವನ್ನು ಕುಡಿಯುವ ನೀರಿನ ಪೈಪ್‌ಲೈನ್‌ ಬದಲಾಯಿಸುವ ಈ ಕಾಮಗಾರಿಗೆ ಬಳಸಿಕೊಳ್ಳುವುದು ಸೂಕ್ತ’ ಎಂದು ಅವರು ಅಭಿಪ್ರಾಯಪಟ್ಟಿದ್ದರು.

‘ಒಳಚರಂಡಿ ಯೋಜನೆಯ ಉಳಿತಾಯ ಮೊತ್ತವನ್ನು ನೀರು ಪೂರೈಕೆ ಸೋರಿಕೆ ತಡೆಗೆ ಬಳಸಿಕೊಳ್ಳಬಹುದು. ಆದರೆ, ಇದಕ್ಕೆ ಮಹಾನಗರ ಪಾಲಿಕೆಯ ಒಪ್ಪಿಗೆ ಬೇಕು’ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳು ಹೇಳಿದ್ದರು.

ಶೇ 95ರಷ್ಟು ಪೂರ್ಣ: ‘ನಗರ ನೀರು ಪೂರೈಕೆ ಯೋಜನೆ ಬಲಪಡಿಸಲು ಅನುದಾನ ಕೋರಿ ಕನ್ನೀಜ್‌ ಫಾತಿಮಾ ಅವರು ನಗರಾಭಿವೃದ್ಧಿ ಸಚಿವರು ಹಾಗೂ ಪ್ರಧಾನ ಕಾರ್ಯದರ್ಶಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು. ಒಳಚರಂಡಿ ಕಾಮಗಾರಿಯ ಉಳಿಕೆ ಹಣವನ್ನು ಅದಕ್ಕೆ ಬಳಸಿಕೊಳ್ಳಲು ಸಚಿವರು ಸಲಹೆ ನೀಡಿದ್ದರು’ ಎಂದು ಪಾಲಿಕೆಯ ಸದಸ್ಯ ಭೀಮರಡ್ಡಿ ಪಾಟೀಲ ಕುರಕುಂದಾ ಹೇಳಿದರು.

‘ಒಟ್ಟಾರೆ 160 ಕಿ.ಮೀ. ಒಳಚರಂಡಿ ಕಾಮಗಾರಿಯಲ್ಲಿ ಶೇ 95ರಷ್ಟು ಪೂರ್ಣಗೊಂಡಿದೆ. ಈ ಕಾಮಗಾರಿಗೆ ಆಗಿನ ಸಚಿವ ಖಮರುಲ್‌ ಇಸ್ಲಾಂ ಅವರು ₹141 ಕೋಟಿ ಮಂಜೂರು ಮಾಡಿಸಿದ್ದರು. ನಾನು ಮೇಯರ್‌ ಆಗಿದ್ದಾಗ ಮಹಾನಗರ ಪಾಲಿಕೆಯಿಂದ ₹20 ಕೋಟಿ ನೀಡಿದ್ದೆ. ರಾಜ್ಯ ಸರ್ಕಾರ ₹40 ಕೋಟಿ ಹಾಗೂ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ₹30 ಕೋಟಿ ನೀಡಿತ್ತು. ಉಳಿದ ಹಣವನ್ನು ಬ್ಯಾಂಕ್‌ಗಳಿಂದ ಸಾಲ ಪಡೆಯಲಾಗಿತ್ತು. ಅದರ ಜೊತೆಗೆ ಅಮೃತ್‌ ಯೋಜನೆಯ ಅನುದಾನವು ಬಂದಿದೆ. ಹೀಗಾಗಿ ₹12.36 ಕೋಟಿ ಪಡೆದುಕೊಂಡರೂ ಒಳಚರಂಡಿ ಕಾಮಗಾರಿ ಪೂರ್ಣಗೊಳ್ಳಲು ಯಾವುದೇ ಸಮಸ್ಯೆ ಇಲ್ಲ’ ಎಂದು ಅವರು ತಿಳಿಸಿದರು.

*
ಕಲಬುರ್ಗಿ ನಗರದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸೋರಿಕೆ ತಡೆ ಅನಿವಾರ್ಯ. ಶೀಘ್ರವೇ ಸರ್ಕಾರದ ಅನುಮೋದನೆ ಪಡೆದು ಕಾಮಗಾರಿ ಆರಂಭಿಸಲಾಗುವುದು.
–ಕನ್ನೀಜ್‌ ಫಾತಿಮಾ, ಶಾಸಕಿ ಕಲಬುರ್ಗಿ ಉತ್ತರ

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !