ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಶೌಚಾಲಯ ನಿರ್ಮಾಣದಲ್ಲಿ ಕಳಪೆ ಸಾಧನೆ

ಪರಿಣಾಮಕಾರಿ ಅನುಷ್ಠಾನ ಕಾಣದ ಸ್ವಚ್ಛ ಭಾರತ ಅಭಿಯಾನ, ರಾಜ್ಯದಲ್ಲಿ ಕಲಬುರ್ಗಿಯೇ ಕಟ್ಟಕಡೆಯ ಜಿಲ್ಲೆ
Last Updated 26 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ಸ್ವಚ್ಛ ಭಾರತ ಅಭಿಯಾನಕ್ಕೆ ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದರೆ, ಉತ್ತರ ಕರ್ನಾಟಕದ ಬಹುಪಾಲು ಜಿಲ್ಲೆಗಳಲ್ಲಿ ನಿಗದಿತ ಪ್ರಗತಿಯಾಗಿಲ್ಲ.

ಈಚೆಗೆ ಹೊರಬಿದ್ದರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–5ರಲ್ಲಿ (ಎನ್‌ಎಫ್‌ಎಚ್‌ಎಸ್–5‌) ಈ ಅಂಶ ಸ್ಪಷ್ಟವಾಗಿದೆ. ದಕ್ಷಿಣಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಹಾಗೂ ಬೆಂಗಳೂರು ನಗರಗಳಲ್ಲಿ ಸರಾಸರಿ ಶೇ 90ರಷ್ಟು ಸಾಧನೆ ಕಂಡುಬಂದಿದೆ.‌ ಆದರೆ, ಉತ್ತರ ಕರ್ನಾಟಕದ ಬೀದರ್‌, ವಿಜಯಪುರ, ಕಲಬುರ್ಗಿ, ಯಾದಗಿರಿ, ಬಾಗಲಕೋಟೆ, ಧಾರವಾಡ, ರಾಯಚೂರು, ಗದಗ, ಕೊಪ್ಪಳ, ಹಾವೇರಿ ಮುಂತಾದ ಜಿಲ್ಲೆಗಳಲ್ಲಿ ಸರಾಸರಿ ಶೇ 33ರಿಂದ 58ರಷ್ಟು ಮಾತ್ರ ಶೌಚಾಲಯ ನಿರ್ಮಿಸಲಾಗಿದೆ.

ಸ್ವಚ್ಛ ಭಾರತ್ ಅಭಿಯಾನ ಘೋಷಣೆ ಮಾಡಿದ ಕೇಂದ್ರ ಸರ್ಕಾರ 2014ರಿಂದ 2019ರ ಅವಧಿಯಲ್ಲಿ ದೇಶವನ್ನು ಸಂಪೂರ್ಣ ಬಹಿರ್ದೆಸೆ ಮುಕ್ತ ಮಾಡುವ ಸಂಕಲ್ಪ ತೊಟ್ಟಿತ್ತು. ಈ ಅಭಿಯಾನದಡಿ ಐದು ವರ್ಷಗಳಲ್ಲಿ ದೇಶದಾದ್ಯಂತ 110 ದಶಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದರಿಂದಾಗಿ 2014ರಲ್ಲಿ ಶೇ 38.7ರಷ್ಟಿದ್ದ ಸ್ವಚ್ಛತಾ ಪ್ರಮಾಣ 2019ರಲ್ಲಿ ಶೇ 93.3ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ನೀಡಿದ ವರದಿಯನ್ನೂ ಈ ಸಮೀಕ್ಷೆ ನಮೂದಿಸಿದೆ.

ರಾಜ್ಯದಲ್ಲಿರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 4ಕ್ಕಿಂತ ಸಮೀಕ್ಷೆ 5ರಲ್ಲಿ ಹೆಚ್ಚೇನು ಸುಧಾರಣೆ ಕಂಡು ಬಂದಿಲ್ಲ. ಸುಧಾರಿತ ನೈರ್ಮಲ್ಯ ಸೌಲಭ್ಯ ಹೊಂದಿರುವ ಕುಟುಂಬಗಳ ಪ್ರಮಾಣವು ಶೇ 57.8ರಿಂದ ಶೇ 74.8ಕ್ಕೆ ಏರಿದೆ.

2014ರ ವರದಿಯಲ್ಲಿಯೂ ದಕ್ಷಿಣ ಕರ್ನಾಟಕ ಆರು ಜಿಲ್ಲೆಗಳಲ್ಲಿ ಶೇ 86ರಿಂದ 88 ಶೌಚಾಲಯಗಳಿದ್ದವು. ಈಗ ಅವುಗಳ ಪ‍್ರಮಾಣ ಶೇ 92 ತಲುಪಿದೆ. ಅದೇ ರೀತಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಶೇ 30ರಷ್ಟಿದ್ದ ಜಿಲ್ಲೆಗಳು ಶೇ 33ಕ್ಕೆ ಹಾಗೂ
ಶೇ 50ರಷ್ಟಿದ್ದ ಜಿಲ್ಲೆಗಳ ಸಾಧನೆಶೇ 56 ಎಂದು ವರದಿ ನಮೂದಿಸಿದೆ.

ಅತಿಹೆಚ್ಚು– ಅತಿ ಕಡಿಮೆ: ದಕ್ಷಿಣ ಕನ್ನಡ ಜಿಲ್ಲೆಯು ಶೇ 97.1ರಷ್ಟು ಶೌಚಾಲಯ ಹೊಂದುವ ಮೂಲಕ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಇದಕ್ಕೆ ತದ್ವಿರುದ್ಧವಾಗಿ ಕಲಬುರ್ಗಿ ಜಿಲ್ಲೆ 36.5ರಷ್ಟು ಮಾತ್ರ ಸಾಧನೆ ಮಾಡಿದ್ದು, ಕೊನೆಯ ಸ್ಥಾನದಲ್ಲಿದೆ. ಅದರಲ್ಲೂ, ಕಲ್ಯಾಣ ಕರ್ನಾಟಕ ಎಲ್ಲ ಜಿಲ್ಲೆಗಳಲ್ಲೂ ಅತ್ಯಂತ ಕಳಪೆ
ಸಾಧನೆ ಕಂಡುಬಂದಿದೆ.

ಗುರಿ ತಲುಪ‍ದಿರಲು ಕಾರಣಗಳೇನು?: ವಿದ್ಯುತ್‌ ಕೊರತೆ, ನೀರಿನ ಸೌಲಭ್ಯ ಇಲ್ಲದಿರುವುದು ಹಾಗೂ ಬಹಿರ್ದೆಸೆಯ ದುಷ್ಪರಿಣಾಮಗಳ ಬಗ್ಗೆ ಪರಿಣಾಮಕಾರಿ ಮಾಹಿತಿ ನೀಡದಿರುವುದು... ಮುಂತಾದ ಕಾರಣಗಳನ್ನು ಈ ಸಮೀಕ್ಷೆ ಗುರುತಿಸಿದೆ ಎಂದು ಅರ್ಥಶಾಸ್ತ್ರಜ್ಞರಾದ ಸಂಗೀತಾ ಕಟ್ಟಿಮನಿ ಮಾಹಿತಿ ನೀಡಿದ್ದಾರೆ.

‘ಸುಸ್ಥಿರ ಅಭಿವೃದ್ಧಿಗಾಗಿ ಬಹಿರ್ದೆಸೆ ಮುಕ್ತ ವಾತಾವರಣ ಅಗತ್ಯ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹೇಳಿಕೆಯನ್ನೂ ಸಮೀಕ್ಷೆ ಉಲ್ಲೇಖಿಸಿದೆ.


ಶೌಚಾಲಯ ನಿರ್ಮಾಣ ಕಳಪೆ ಸಾಧನೆ ಮಾಡಿದ ಜಿಲ್ಲೆಗಳು

ಜಿಲ್ಲೆ; ಎನ್‌ಎಫ್‌ಎಚ್‌–5; ಎನ್‌ಎಫ್‌ಎಚ್‌ಎಸ್‌–4‌

ಕಲಬುರ್ಗಿ; 36.5; 30.2

ಯಾದಗಿರಿ; 37.4; 18.9

ವಿಜಯಪುರ; 44.8; 22.6

ಬಾಗಲಕೋಟೆ; 51.3; 23.0

ರಾಯಚೂರು; 53.0; 27.6

ಗದಗ; 55.2; 30.3

ಬೀದರ್; 56.5; 28.0

ಕೊಪ್ಪಳ; 58.8; 46.9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT