ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉದ್ಯೋಗಾವಕಾಶ: ಸರ್ಕಾರದ ಆದ್ಯತೆ’

ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಮುರುಗೇಶ ನಿರಾಣಿ ರಾಷ್ಟ್ರಧ್ವಜಾರೋಹಣ
Last Updated 15 ಆಗಸ್ಟ್ 2022, 16:41 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕೊರೊನಾ ಭೀತಿ ಕಡಿಮೆಯಾಗಿದ್ದ ಕಾರಣ ಮಕ್ಕಳು, ಹಿರಿಯರು ಸೇರಿದಂತೆ ಎಲ್ಲರೂ ಸಂಭ್ರಮದಿಂದ ಭಾಗವಹಿಸಿದರು. ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಹಂಚಿಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ರಾಷ್ಟ್ರಧ್ವಜಾರೋಹಣ ನಡೆಸಿದರು. ಅಲಂಕೃತ ಜೀಪ್‌ನಲ್ಲಿ ಸಾಗಿದ ಅವರು ವಿವಿಧ ಪಡೆಗಳಿಂದ ಧ್ವಜವಂದನೆ ಸ್ವೀಕರಿಸಿದರು.

ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಕೈಗಾರಿಕೆಗಳು ಒಂದೇ ಕಡೆ ಇರುವಂತೆ ಕೈಗಾರಿಕೆ ಹಬ್ ಮಾಡಲು ಕಲಬುರಗಿ ವಿಮಾನ ನಿಲ್ದಾಣ ಬಳಿ 1000 ಎಕರೆ ಭೂಮಿ ಭೂಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದೆ. ರಾಜ್ಯದಲ್ಲಿ ಉದ್ಯೋಗ ಸೃಜನೆಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದ್ದು, ಇದಕ್ಕಾಗಿ ಉದ್ಯಮ ಸ್ನೇಹಿ ಕೈಗಾರಿಕಾ ನೀತಿ ಜಾರಿಗೊಳಿಸಲಾಗಿದೆ. ನೇರ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕಳೆದ ವರ್ಷದ ಮೊದಲನೇ ತ್ರೈಮಾಸಿಕದಲ್ಲಿ ದೇಶದಲ್ಲಿನ ಒಟ್ಟು ಪಾಲಿನಲ್ಲಿ ಶೇ 42ರಷ್ಟು ಕರ್ನಾಟಕಕ್ಕೆ ಲಭಿಸಿದೆ’ ಎಂದರು.

‘ದಾವೋಸ್ ಆರ್ಥಿಕ ಶೃಂಗ ಫಲಪ್ರದವಾಗಿದ್ದು, ಮುಂದಿನ 3–4 ತಿಂಗಳಲ್ಲಿ ₹ 1 ಲಕ್ಷ ಕೋಟಿ ರಾಜ್ಯದಲ್ಲಿ ಹೂಡಿಕೆಯಾಗಲಿದೆ. ಇದಲ್ಲದೇ ನವೆಂಬರ್ 2ರಿಂದ 4ರವರೆಗೆ ಬೆಂಗಳೂರಿನಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಿದ್ದು, ₹ 5 ಲಕ್ಷ ಕೋಟಿ ಹೂಡಿಕೆ ನಿರೀಕ್ಷೆ ಹೊಂದಿದ್ದೇವೆ. ಇದಕ್ಕಾಗಿ ಜಪಾನ್, ದಕ್ಷಿಣ ಕೊರಿಯಾ ದೇಶಗಳಲ್ಲಿ ಈಗಾಗಲೇ ರೋಡ್ ಶೋ ಮಾಡಿ ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿನ ಕೈಗಾರಿಕೆ ಸ್ನೇಹಿ ವಾತಾವರಣದ ಬಗ್ಗೆ ಪ್ರತಿಷ್ಠಿತ ಕಂಪನಿಗಳಿಗೆ ಮನವರಿಕೆ ಮಾಡಿ ಆಹ್ವಾನ ನೀಡಿದ್ದೇವೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿಯಿಂದ 1860ಕ್ಕೂ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿದ್ದು, ಈ ಪೈಕಿ 1400ಕ್ಕೂ ಹೆಚ್ಚಿನ ಫಲಾನುಭವಿಗಳಿಗೆ ₹ 10 ಸಾವಿರ ತಕ್ಷಣದ ಪರಿಹಾರ ನೀಡಲಾಗಿದೆ. ಮಳೆಯಿಂದ ಜೀವ ಕಳೆದುಕೊಂಡ 6 ಮೃತರ ಅವಲಂಬಿತರಿಗೆ ತಲಾ ₹ 5 ಲಕ್ಷ ಪರಿಹಾರ ವಿತರಿಸಿದೆ. ಜಿಲ್ಲೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶ ಬೆಳೆ ಹಾನಿ ಅಂದಾಜಿಸಿದ್ದು, ಜಂಟಿ ಸಮೀಕ್ಷೆ ಮಾಡಲಾಗುತ್ತಿದೆ. ನೆರೆ ಹಾವಳಿ ಪರಿಹಾರಕ್ಕೆ ಜಿಲ್ಲಾಧಿಕಾರಿ ಖಾತೆಯಲ್ಲಿ ₹ 41 ಕೋಟಿ ಹಣ ಇದೆ. ಹೀಗಾಗಿ ನೆರೆ ಹಾವಳಿ ಪರಿಹಾರಕ್ಕೆ ಅನುದಾನದ ಕೊರತೆಯಿಲ್ಲ’ ಎಂದರು.

ಸಾಧಕರಿಗೆ ಸನ್ಮಾನ: 2022ನೇ ಸಾಲಿನ ಕೇಂದ್ರ ಗೃಹ ಸಚಿವರ ಪದಕಕ್ಕೆ ಪಾತ್ರರಾದ ಕಲಬುರಗಿ ಸಿಐಡಿ ಡಿವೈಎಸ್ಪಿ ಶಂಕರಗೌಡ ವಿ. ಪಾಟೀಲ, 2021ನೇ ಸಾಲಿನ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪ್ರಶಸ್ತಿ ಪುರಸ್ಕೃತ ಕಲಬುರಗಿ ನಗರದ ಎಸಿಪಿ ಗಂಗಾಧರ ಬಿ.ಎಂ. ಹಾಗೂ ಸರ್ವಶ್ರೇಷ್ಠ ರಾಷ್ಟ್ರಪತಿ ಪದಕ ಪುರಸ್ಕೃತ ಜಿಲ್ಲಾ ಪೊಲೀಸ್ ಡಿ.ಸಿ.ಆರ್ ವಿಭಾಗದ ಡಿವೈಎಸ್ಪಿ ಜೆ.ಎಚ್ ಇನಾಂದಾರ ಅವರಿಗೆ ನಿರಾಣಿ ಸನ್ಮಾನಿಸಿದರು.

11 ಪ್ರಗತಿಪರ ರೈತರಿಗೆ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಅಂಕ ಪಡೆದ 6 ಶಾಲಾ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಲಾಯಿತು. ಅಮೃತ ಮಹೋತ್ಸವ ಅಂಗವಾಗಿ ಶಾಲಾ ಮಕ್ಕಳಿಂದ ಜರುಗಿದ ದೇಶಭಕ್ತಿ ಗೀತೆಗಳಿಗೆ ಸಮೂಹ ನೃತ್ಯ ಎಲ್ಲರ ಗಮನ ಸೆಳೆಯಿತು.

ಅಂಗವಿಕಲರಿಗೆ ತ್ರಿಚಕ್ರ ವಿತರಣೆ: ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಸಾಂಕೇತಿಕವಾಗಿ ಜಿಲ್ಲೆಯ 7 ಅಂಗವಿಕಲರಿಗೆ ಸಚಿವರು ತ್ರಿಚಕ್ರ ವಾಹನ ವಿತರಿಸಿದರು. ಇದಲ್ಲದೆ ಜಿಲ್ಲಾ ಪಂಚಾಯತಿಯಿಂದ ಗ್ರಾಮದಲ್ಲಿ ಕಸ ಸಂಗ್ರಹಣೆ ಮಾಡುವ 85 ಸ್ವಚ್ಛತಾ ವಾಹಿನಿಗೂ ಸಚಿವರು ಚಾಲನೆ ನೀಡಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಸಂಸದ ಡಾ.ಉಮೇಶ ಜಾಧವ, ಶಾಸಕ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಶಾಸಕ ಸುನೀಲ ವಲ್ಯಾಪೂರೆ, ಶಶೀಲ್‌ ನಮೋಶಿ, ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ, ಸಾರಿಗೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮತ್ತು ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ, ಐಜಿಪಿ ಮನೀಷ್ ಖರ್ಬಿಕರ್, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ, ಎಸ್ಪಿ ಇಶಾ ಪಂತ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಗಿರೀಶ್ ಡಿ. ಬದೋಲೆ, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಲಬುರಗಿ ಹೆಚ್ಚುವರಿ ಆಯುಕ್ತೆ ಗರಿಮಾ ಪನ್ವಾರ್, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಹೆಚ್ಚುವರಿ ಡಿ.ಸಿ. ಭೀಮಾಶಂಕರ ತೆಗ್ಗೆಳ್ಳಿ, ಉಪವಿಭಾಗಾಧಿಕಾರಿ ಮೋನಾ ರೋತ್ ಸೇರಿದಂತೆ ಶಾಲಾ ಮಕ್ಕಳು, ಸಾರ್ವಜನಿಕರು, ಅಧಿಕಾರಿಗಳು ಇದ್ದರು.

ಕುದುರೆ ಏರಿದ ಚನ್ನಮ್ಮ, ರಾಯಣ್ಣ!

ಕೊರೊನಾ ಆತಂಕದ ಹಿನ್ನೆಲೆಯಲ್ಲಿ 2020 ಮತ್ತು 2021ರ ಸ್ವಾತಂತ್ರ್ಯ ದಿನಾಚರಣೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿರಲಿಲ್ಲ. ಸೋಮವಾರ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು.

ಶರಣಬಸವೇಶ್ವರ ವಸತಿ ಶಾಲೆಯ 700ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ನೃತ್ಯದ ಭಾಗವಾಗಿ ಕಿತ್ತೂರು ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ವೇಷಧಾರಿಗಳು ಕುದುರೆ ಏರಿ ಸಭಿಕರನ್ನು ಆಕರ್ಷಿಸಿದರು.

ದೇಶದ ವಿವಿಧ ಜನಸಮುದಾಯ, ಸಂಸ್ಕೃತಿ, ಭಾಷೆ, ಉಡುಗೆ, ತೊಡುಗೆಯನ್ನು ತೊಟ್ಟ ವಿದ್ಯಾರ್ಥಿಗಳು ಗಮನ ಸೆಳೆದರು.

ಭಾರತಮಾತೆ, ಮಹಾತ್ಮ ಗಾಂಧೀಜಿ, ಜವಹರಲಾಲ್ ನೆಹರೂ, ನೇತಾಜಿ ಸುಭಾಷ್ ಚಂದ್ರ ಬೋಸ್, ಶಹೀದ್ ಭಗತ್ ಸಿಂಗ್, ಡಾ.ಬಿ.ಆರ್. ಅಂಬೇಡ್ಕರ್, ಅಬ್ದುಲ್ ಕಲಾಂ ಆಜಾದ್ ಸೇರಿದಂತೆ ಹಲವು ಮಹನೀಯರ ವೇಷ ಧರಿಸಿ ಗಮನ ಸೆಳೆದರು.

ಬೆಥನಿ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿಗಳು ಖಾಕಿ ದಿರಿಸುವ ಧರಿಸಿ ದೇಶಭಕ್ತಿ ಗೀತೆಗೆ ಹೆಜ್ಜೆ ಹಾಕಿದರು.

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಝಾನ್ಸಿ ರಾಣಿ ಲಕ್ಷ್ಮಿಬಾಯಿ ಕಥನವನ್ನು ಕಟ್ಟಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT