ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್‌, ಅಸಹಾಯಕರಿಗೆ ನೆಮ್ಮದಿ

ಪಾಲಿಕೆ ವ್ಯಾಪ್ತಿಯ ನಿರ್ಗತಿಕರ ಪುನರ್ವಸತಿ ಕೇಂದ್ರಗಳಿಗೂ ಆಹಾರ ವಿತರಣೆ
Last Updated 3 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದ ಎಲ್ಲ ಹೋಟೆಲ್‌ಗಳು, ದರ್ಶಿನಿಗಳು, ಬೀದಿ ಬದಿ ಉಪಾಹಾರ ತಯಾರಿಸುವ ಬಂಡಿಗಳೂ ಮುಚ್ಚಿರುವ ಈ ಸಂದರ್ಭದಲ್ಲಿ ಅಸಹಾಯಕರು, ವೃದ್ಧರಿಗೂ ಇಂದಿರಾ ಕ್ಯಾಂಟೀನ್‌ ಒಂದೇ ಆಸರೆಯಾಗಿದೆ.

ಹಸಿದು ಬಂದ ಬಡವರಿಗೆ ಕಡಿಮೆ ದರದಲ್ಲಿ ಊಟ ನೀಡುವುದರ ಜೊತೆಗೆ ನಗರದ ಐದು ಕಡೆಗಳಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ‘ನೆಮ್ಮದಿ ಹಿರಿಯರ ಮನೆ’, ವಸತಿ ರಹಿತರ ಆಶ್ರಯ ಕೇಂದ್ರ, ನಗರ ವಸತಿ ರಹಿತರ ಆಶ್ರಯ ಕೇಂದ್ರ, ನಿರ್ಗತಿಕ ಮಹಿಳೆಯರ ಪರಿಹಾರ ಕೇಂದ್ರಗಳಲ್ಲಿರುವ 65 ಜನರಿಗೆ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಮಹಾನಗರ ಪಾಲಿಕೆ ಆಯುಕ್ತರ ಸೂಚನೆ ಮೇರೆಗೆ ಅಲ್ಲಿಗೇ ತೆರಳಿ ಊಟದ ಪ್ಯಾಕೇಟ್‌ಗಳನ್ನು ಕೊಟ್ಟು ಬರಲಾಗುತ್ತಿದೆ.

ಬಂಗಾಳದ ಎಂಟು ಜನರಿಗೂ ಉಚಿತ ಊಟ: ‘ನಗರ ಜಿಮ್ಸ್‌ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಜಯದೇವ ಹೃದ್ರೋಗ ಕಟ್ಟಡ ನಿರ್ಮಾಣ ಕೆಲಸಕ್ಕೆ ಪಶ್ಚಿಮ ಬಂಗಾಳದಿಂದ ಬಂದಿರುವ ಎಂಟು ಜನರು ಅಕ್ಷರಶಃ ಅನ್ನ ನೀರು ಇಲ್ಲದೇ, ಖರೀದಿಸಲೂ ಹಣವೂ ಇಲ್ಲದೇ ಕಂಗಾಲಾಗಿದ್ದರು. ಈ ಕಾರ್ಮಿಕರ ನೆರವಿಗೆ ಬಂದಿದ್ದು ಇಂದಿರಾ ಕ್ಯಾಂಟೀನ್‌ ಸಿಬ್ಬಂದಿ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಕ್ಯಾಂಟೀನ್‌ ವ್ಯವಸ್ಥಾಪಕ ಶ್ರೀಶೈಲ ರಾವ್‌, ‘ಕಾರ್ಮಿಕರು ತಮ್ಮ ಹತ್ತಿರ ಊಟ ಮಾಡಲು ರೊಕ್ಕ ಇಲ್ಲ ಎಂದು ಹೇಳಿ ಅಳಲು ಶುರು ಮಾಡಿದರು. ಈ ಸಂದರ್ಭದಲ್ಲಿ ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ಆಸರೆಯಾಗಬೇಕು ಎಂಬ ಉದ್ದೇಶದಿಂದ ಅಷ್ಟೂ ಜನರಿಗೆ ಉಚಿತವಾಗಿ ಊಟ ಕೊಡುತ್ತಿದ್ದೇವೆ. ಲಾಕ್‌ಡೌನ್‌ ಮುಗಿಯುವವರೆಗೂ ಅವರಿಗೆ ಊಟ, ಉಪಾಹಾರ ನೀಡಲಿದ್ದೇವೆ. ಪಾಲಿಕೆ ಅಧಿಕಾರಿಗಳು ತಿಳಿಸಿದ ನಿರ್ಗತಿಕರ ಆಶ್ರಯ ಕೇಂದ್ರಗಳಿಗೂ ಮೂರು ಹೊತ್ತು ಊಟವನ್ನು ಪೂರೈಸುತ್ತಿದ್ದು, ಸದ್ಯಕ್ಕೆ ಹಣ ಪಡೆಯುತ್ತಿಲ್ಲ’ ಎಂದರು.

ಕುಸಿದ ಬೇಡಿಕೆ: ಲಾಕ್‌ಡೌನ್‌ ಘೋಷಣೆಗೂ ಮುನ್ನ ನಗರದಲ್ಲಿರುವ ಏಳು ಇಂದಿರಾ ಕ್ಯಾಂಟೀನ್‌ಗಳಲ್ಲಿ ನಿತ್ಯ ಸರಾಸರಿ 50 ಸಾವಿರ ಪ್ಲೇಟ್‌ ಊಟವನ್ನು ವಿತರಿಸುತ್ತಿದ್ದೆವು. ಇದೀಗ ಜನರೇ ಹೊರಕ್ಕೆ ಬರುತ್ತಿಲ್ಲ. ಹೀಗಾಗಿ, ನಿತ್ಯ ಹೆಚ್ಚೆಂದರೆ 8ರಿಂದ 10 ಸಾವಿರ ಪ್ಲೇಟ್‌ ಊಟ ಖರ್ಚಾಗುತ್ತಿದೆ. ಜನಸಂದಣಿ ಹೆಚ್ಚಾಗುತ್ತಿದೆ ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಸೂಚನೆಯಂತೆ ಇಂದಿರಾ ಕ್ಯಾಂಟೀನ್‌ ಒಂದು ದಿನ ಮುಚ್ಚಿದ್ದೆವು. ಆದರೆ, ಜನರಿಗೆ ಇದರಿಂದ ಸಾಕಷ್ಟು ತೊಂದರೆಯಾಗುವುದು ಗಮನಕ್ಕೆ ಬಂದ ಬಳಿಕ ಮಹಾನಗರ ಪಾಲಿಕೆ ಸೂಚನೆಯಂತೆ ಮತ್ತೆ ಆರಂಭಿಸಿದ್ದೇವೆ. ಜಿಮ್ಸ್‌ನಲ್ಲಿರುವ ಕ್ಯಾಂಟೀನ್‌ನಿಂದ ನಿತ್ಯ ಒಂದು ಬಾರಿಗೆ 500 ಪ್ಲೇಟ್‌ ಊಟ ಖರ್ಚಾಗುತ್ತಿದೆ. ರೈಲು ನಿಲ್ದಾಣ, ಬಸ್‌ ನಿಲ್ದಾಣದಲ್ಲಿರುವ ಕ್ಯಾಂಟೀನ್‌ನಲ್ಲಿ 200ರಿಂದ 250 ಪ್ಲೇಟ್‌ ಮಾತ್ರ ಖರ್ಚಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT