ಸೋಮವಾರ, ಜನವರಿ 25, 2021
27 °C
ರೆಡ್‍ಕ್ರಾಸ್, ರೋಟರಿ, ವಿಕಾಸ ಅಕಾಡೆಮಿ ಸಹಕಾರದೊಂದಿಗೆ ಮುಂದಾದ ಸುಧಾ ಮೂರ್ತಿ

ಕಲಬುರ್ಗಿ: ನೆರೆ ಸಂತ್ರಸ್ತರ ನೆರವಿಗೆ ಬಂದ ಇನ್ಫೊಸಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಪ್ರವಾಹದಿಂದ ತತ್ತರಿಸಿರುವ ಜಿಲ್ಲೆಯ ಜೇವರ್ಗಿ ಮತ್ತು ಅಫಜಲಪುರ ತಾಲ್ಲೂಕಿನ ಸಂತ್ರಸ್ತರ ನೆರವಿಗೆ ಇನ್ಫೊಸಿಸ್‌ ಸಂಸ್ಥೆ ಸಹಾಯ ಹಸ್ತ ಚಾಚಿದೆ. ಈಗಾಗಲೇ ರಾಯಚೂರು, ಯಾದಗಿರಿ ಜಿಲ್ಲೆಗಳ ಸಂತ್ರಸ್ತ ಕುಟುಂಬಗಳಿಗೆ ಕಿಟ್ ವಿತರಣೆ ಮಾಡಲಾಗಿದ್ದು, ಶುಕ್ರವಾರದಿಂದ ಶನಿವಾರದ ವರೆಗೆ ಕಲಬುರ್ಗಿ ಜಿಲ್ಲೆಯ ಸಂತ್ರಸ್ತರಿಗೆ ವಿತರಣೆ ಮಾಡಲಾಗುತ್ತಿದೆ’ ಎಂದು ಪಾವಗಡದ ರಾಮಕೃಷ್ಣ ಸೇವಾಶ್ರಮ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತ ಆರೋಗ್ಯ ಕೇಂದ್ರದ ಮುಖ್ಯಸ್ಥ ಸ್ವಾಮಿ ಜಪಾನಂದಜಿ ಹೇಳಿದರು.

‘ಉತ್ತರ ಕರ್ನಾಟಕದ ಜನರು ಸಂಕಷ್ಟಕ್ಕೆ ಸಿಲುಕಿದಾಗೊಮ್ಮೆ ಸುಧಾ ಮೂರ್ತಿ ಅವರು ತಮ್ಮ ತಂಡದೊಂದಿಗೆ ಸಹಾಯ ಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಈ ಬಾರಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಜನರ ಸಹಾಯಕ್ಕೂ ಮುಂದಾಗಿದ್ದಾರೆ’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಿರಾಣಿ ಸಾಮಗ್ರಿಗಳು, ಹಾಸಿಗೆ ಸೇರಿದಂತೆ ಅಗತ್ಯ ವಸ್ತುಗಳನ್ನು ಹೊತ್ತುಕೊಂಡು ಆರು ಲಾರಿಗಳು ಜಿಲ್ಲೆಗೆ ಬಂದಿವೆ. ಇನ್ಫೊಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾ ಮೂರ್ತಿ ಅವರು ಸಿಎಸ್‍ಆರ್ ಅಡಿಯಲ್ಲಿ ಸಮರ್ಪಣ ಘಟಕದಿಂದ ಎಲ್ಲ ವಸ್ತುಗಳನ್ನು ನೀಡಿದ್ದಾರೆ. ಅವನ್ನು ರಾಮಕೃಷ್ಣ ಸೇವಾಶ್ರಮ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕಲಬುರ್ಗಿ, ರೋಟರಿ ಕ್ಲಬ್ ಆಫ್ ಮಿಡ್‍ಟೌನ್, ವಿಕಾಸ ಅಕಾಡೆಮಿ ಇತರ ಸ್ವಯಂ ಸೇವಾ ಸಂಸ್ಥೆಗಳ ಜತೆಗೂಡಿಕೊಂಡು ಎರಡು ದಿನಗಳ ಕಾಲ ಅಫಜಲಪುರ, ಜೇವರ್ಗಿ ತಾಲ್ಲೂಕಿನಲ್ಲಿ ಕಿಟ್‍ಗಳನ್ನು ವಿತರಿಸಲಾಗುವುದು. ನಂತರ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ 1500 ಕುಟುಂಬಗಳಿಗೂ ಕಿಟ್ ವಿತರಿಸಲು ತಂಡ ತೆರಳಲಿದೆ’ ಎಂದು ಹೇಳಿದರು.

‘ಪ್ರತಿ ಕುಟುಂಬಕ್ಕೂ ಒಂದೂವರೆ ತಿಂಗಳಿಗೆ ಸಾಲುವಷ್ಟು ಅಕ್ಕಿ, ಬೇಳೆ, ಎಣ್ಣೆ, ಮಸಾಲೆ ವಸ್ತುಗಳು ಇನ್ನಿತರ ರೇಷನ್, ಬಕೀಟ್, ಚೊಂಬು, ಚಾಪೆ, ಬೆಡ್‍ಶೀಟ್, ಬ್ಲಾಂಕೆಟ್, ಟವಲ್, ಸಾಬೂನು, ಟೂತ್‌ಪೇಸ್ಟ್ ಹೀಗೆ ಮುಂತಾದ ಸಾಮಗ್ರಿಗಳು ಇದರಲ್ಲಿ ಇವೆ. ಮನೆ ಕಳೆದುಕೊಂಡವರಿಗೆ ತಕ್ಷಣಕ್ಕೆ ಅನುವು ಮಾಡಿಕೊಡಲು ಟಾರ್ಪಲಿನ್ ಸಹ ನೀಡಲಾಗುವುದು. ಮೊದಲ ಹಂತದಲ್ಲಿ ಇಷ್ಟು ಹಂಚಿಕೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ನೆರವು ನೀಡಲು ಸುಧಾ ಮೂರ್ತಿ ಅವರು ಮುಂದಾಗಿದ್ದಾರೆ‘ ಎಂದು ಸ್ವಾಮಿ ಜಪಾನಂದಜಿ ತಿಳಿಸಿದರು.

‘ಫೌಂಡೇಷನ್‌ ವತಿಯಿಂದ 8,500 ಸಂತ್ರಸ್ತ ಕುಟುಂಬಗಳಿಗೆ ಇಂಥ ಕಿಟ್‌ಗಳನ್ನು  ತಲುಪಿಸಲಾಗಿದೆ. ಇನ್ನೂ 2,500 ಕುಟುಂಬಗಳಿಗೆ ಹಂಚಲಾಗುವುದು’ ಎಂದರು.

ಇನ್ಫೊಸಿಸ್ ಫೌಂಡೇಷನ್‌ನ ಸಮರ್ಪಣ ವಿಭಾಗದ ಮುಖ್ಯಸ್ಥ ಮಹೇಶ ಮಾತನಾಡಿ, ‘ಶುಕ್ರವಾರ ಕಟ್ಟಿಸಂಗಾವಿ, ರದ್ದೇವಾಡಗಿ, ಮಂದರವಾಡ, ಕೂಡಿ, ಕೋನಾ ಹಿಪ್ಪರಗಾ ಇನ್ನಿತರ ಹಳ್ಳಿಗಳಲ್ಲಿ ವಿತರಿಸುತ್ತಿದ್ದು, ಶನಿವಾರ ಅಫಜಲಪುರ ತಾಲ್ಲೂಕಿನ ಹಳ್ಳಿಗಳಲ್ಲಿ ಕಿಟ್ ವಿತರಿಲಾಗುವುದು’ ಎಂದರು.

ರೆಡ್‍ಕ್ರಾಸ್ ಅಧ್ಯಕ್ಷ ಅಪ್ಪರಾವ ಅಕ್ಕೋಣಿ, ಕಾರ್ಯದರ್ಶಿ ರವೀಂದ್ರ ಶಾಬಾದಿ, ರೋಟರಿ ಕ್ಲಬ್ ಆಫ್ ಮಿಡ್‍ಟೌನ್ ಅಧ್ಯಕ್ಷೆ ಡಾ.ಸುಧಾ ಹಾಲಕಾಯಿ, ವಿಕಾಸ ಅಕಾಡೆಮಿಯ ಶೇಷಾದ್ರಿ ಕುಲಕರ್ಣಿ, ಅರುಣಕುಮಾರ ಲೋಯಾ, ಮಲ್ಲಿಕಾರ್ಜುನ ಬಿರಾದಾರ, ಧನರಾಜ ಭಾಸಗಿ, ಭಾಗ್ಯಲಕ್ಷ್ಮಿ, ಸಂಧ್ಯಾರಾಜ ಸ್ಯಾಮುವೆಲ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು