ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಬರ್ಗಾ ವಿ.ವಿ ಯುವಜನೋತ್ಸವ; ವಿದ್ಯಾರ್ಥಿಗಳ ಸಂಭ್ರಮ

Last Updated 29 ಡಿಸೆಂಬರ್ 2022, 4:25 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಗುಲಬರ್ಗಾ ವಿಶ್ವ ವಿದ್ಯಾಲಯದ ಜ್ಞಾನಗಂಗೆ ಆವರಣದಲ್ಲಿ ಬುಧವಾರ ಆರಂಭಗೊಂಡ ಅಂತರ್ ಮಹಾವಿದ್ಯಾಲಯ ಯುವಜನೋತ್ಸವ ದಲ್ಲಿ ವಿದ್ಯಾರ್ಥಿಗಳು ಸಂಭ್ರಮಿಸಿದರು.

ಬೆಳಿಗ್ಗೆಯಿಂದಲೇ ಕೈಯಲ್ಲಿ ಡೋಲು, ಹಲಗೆ, ಬಣ್ಣ ಬಣ್ಣದ ಛತ್ರಿ–ಚಾಮರ ಹಿಡಿದ ವಿದ್ಯಾರ್ಥಿಗಳು ತಂಡೋಪತಂಡವಾಗಿ ಜ್ಞಾನಗಂಗೆ ಆವರಣಕ್ಕೆ ಬಂದರು. ಕ್ಯಾಂಪಸ್‌ನ ಚಾಲುಕ್ಯ ಮಹಾದ್ವಾರ ಪ್ರವೇಶಿಸಿ ತಗ್ಗು ದಿನ್ನೆಗಳ ರಸ್ತೆಗಳನ್ನು ಹಾದು ಇಲ್ಲಿನ ಯುವಜನೋತ್ಸವದಲ್ಲಿ ಪಾಲ್ಗೊಂಡರು.

ಕಾರ್ಯಸೌಧ ಮುಂಭಾಗದಲ್ಲಿ ಹಿನ್ನಲೆ ಗಾಯಕಿ ಬಿ.ಆರ್‌ ಛಾಯಾ ಅವರು ಡೊಳ್ಳು ಬಾರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ತಮಟೆ, ಡೊಳ್ಳು, ವಾದ್ಯ ಮೇಳಗಳ ನಾದಕ್ಕೆ ಯುವಕರು–ಯುವತಿಯರು ಹೆಜ್ಜೆ ಹಾಕಿದರು.

ಡಾ. ಬಿ.ಆರ್ ಅಂಬೇಡ್ಕರ್ ಭವನದವರೆಗೆ ಸಾಂಸ್ಕೃತಿಕ ಕಲರವದೊಂದಿಗೆ 40 ನಿಮಿಷ ಮೆರವಣಿಗೆ ಸಾಗಿತು. ಬೀದರ್ ಮತ್ತು ಕಲಬುರಗಿ ಜಿಲ್ಲೆಯ ವಿದ್ಯಾರ್ಥಿಗಳು, ಉಪನ್ಯಾಸಕರು, ಕಾರ್ಯಕ್ರಮ ಆಯೋಜಕರು ಮೆರವಣಿಗೆಯಲ್ಲಿ ಭಾಗವಹಿಸಿದರು.

ಮೂರು ದಿನ ನಡೆಯುವ ಯುವಜನೋತ್ಸವದಲ್ಲಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗಗಳ, ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರಗಳಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿದರು. 28 ತಂಡಗಳಿಂದ 450 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಪ್ರತಿ ಸ್ಪರ್ಧೆಗೆ ಮೂವರು ತೀರ್ಪುಗಾರರನ್ನು ನಿಯೋಜಿಸಲಾಗಿದೆ.

ಯುವಜನೋತ್ಸವದ ಅಂಗವಾಗಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಹೊರತಂದ ವಿಶೇಷ ಸಂಚಿಕೆ ‘ಜ್ಞಾನಗಂಗಾ’ ಬಿಡುಗಡೆ ಮಾಡಲಾಯಿತು.

ಗುಲಬರ್ಗಾ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥ ವಿ.ಟಿ. ಕಾಂಬಳೆ ಮಾತನಾಡಿ, ‘ಇಂದಿನ ಯುವ ಸಮೂಹ ದೇಶದ ಆಸ್ತಿ. ಅವರು ಶಿಕ್ಷಣವನ್ನು ಪಡೆದು ಉನ್ನತ ಹುದ್ದೆ ಗಳಿಸಿದಾಗ, ಸಾರ್ಥಕವಾಗುತ್ತದೆ’ ಎಂದರು.

‘42 ವರ್ಷಗಳಿಂದ ವಿಶ್ವವಿದ್ಯಾಲಯವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮುನ್ನುಡಿಯಾಗಿದೆ. ಹಲವಾರು ವಿದ್ಯಾರ್ಥಿಗಳು ತಮ್ಮ ಸಾಧನೆ ಮೂಲಕ ದೇಶಕ್ಕೆ ಕೊಡುಗೆ ನೀಡುತ್ತಿದ್ದಾರೆ. ಎಲ್ಲ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

ಕುಲಸಚಿವ ಡಾ. ಬಿ.ಶರಣಪ್ಪ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಪ್ರತಿಭಾ ಛಾಮಾ, ವಿದ್ಯಾ ವಿಷಯಕ್ ಪರಿಷತ್ ಸದಸ್ಯ ನಿಂಗಯ್ಯ ಎಸ್.ಹಿರೇಮಠ, ಮೌಲ್ಯಮಾಪನ ಕುಲಸಚಿವ ಜ್ಯೋತಿ ಧಮ್ಮ ಪ್ರಕಾಶ, ಹಣಕಾಸು ಅಧಿಕಾರಿ ಪ್ರೊ. ಎನ್.ಬಿ. ನಡುವಿನಮನಿ, ಪ್ರೊ. ಕೆ.ಸಿದ್ದಪ್ಪ, ವಿದ್ಯಾರ್ಥಿಗಳ ಕಲ್ಯಾಣಾಧಿಕಾರಿ ಪ್ರೊ. ಕೆ.ಲಿಂಗಪ್ಪ ಇದ್ದರು.


‘ಉತ್ತರ ಕರ್ನಾಟಕ ಜನಪದ ಗಾಯನದ ತವರು ಮನೆ’

ಯುವಜನೋತ್ಸವ ಉದ್ಘಾಟಿಸಿದ ಗಾಯಕಿ ಬಿ.ಆರ್ ಛಾಯಾ ಮಾತನಾಡಿ, ‘ಮಾತಿನ ಬದಲು ಹಾಡು ಹೇಳುವುದೇ ನನಗೆ ತುಂಬಾ ಇಷ್ಟ. ಉತ್ತರ ಕರ್ನಾಟಕದ ಜನಪದಗಳು ನನ್ನ ಗಾಯನದ ತವರು ಮನೆ ಇದ್ದಂತೆ’ ಎಂದರು.‘ಇಂದ್ರಜಿತ್’ ಚಿತ್ರದ ‘ಬೆಳ್ಳಿ ರಥದಲ್ಲಿ ಸೂರ್ಯ ತಂದ ಕಿರಣ’ ಗೀತೆ ಹಾಡಿದರು.

‘ಏಕೋ ಹೀಗಾಯ್ತೋ ನಾನು ಕಾಣೆನು’, ತ್ರಿಪುರ ಸುಂದರಿ ಬಾರೆ ನೀ ಹಸೆಮಣೆಗೆ’, ಹುಚ್ಚು ಕೋಡಿ ಮನಸು. ಅದು ಹದಿನಾರರ ವಯಸು‘, ‘ಕೆಂಪು ತೋಟದಲ್ಲಿ ಒಮ್ಮೆ ಹಾರ ಬಾರದೇನೆ ಪಾರಿವಾಳವೇ’, ‘ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು, ರಾಘವೇಂದ್ರ’.... ಎಂಬ ಗೀತೆಗಳನ್ನು ಹಾಡಿದರು.

ಶರೀಫ ಅಜ್ಜರ ‘ಏನು ಕೊಡ ಏನು ಕೊಡವಾ ಹುಬ್ಬಳ್ಳಿ ಮಾಟ ಏನು ಚೆಂದುಳ್ಳ ಕೊಡವ’, ಜವಾರಿ ಜನಪದಗಳಾದ ‘ಬಿಟ್ಟು ಹೊಂಟ್ಯೆಲ್ಲಾ ನನಹಳ್ಳಿ’, ‘ನೀ ಜಗ್ಗಬ್ಯಾಡ ಬಿಡು ಸೆರಗ ಮಾವ’, ‘ಉಡಿಯಕ್ಕಿ ಹಾಕತಾರ, ಊರ ಬಿಟ್ಟು ಕಳುಹಿಸುತ್ತಾರೆ’.... ಹಾಡುಗಳು ಕೇಳುತ್ತಿದ್ದಂತೆ ಯುವಕ–ಯುವತಿಯರ ಉತ್ಸಾಹ ಮೇರೆ ಮೀರಿತು. ಶಿಳ್ಳೆ, ಚಪ್ಪಾಳೆಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಛಾಯಾ ಅವರ ಗಾಯನಕ್ಕೆ ‘ಅಮೃತಗಳಿಗೆ’ಯ ‘ಹಿಂದುಸ್ತಾನವು ಎಂದೂ ಮರೆಯದ ಭಾರತ ರತ್ನವು ನೀನಾಗು’ ಹಾಡನ್ನು ನೆರದವರಿಂದಲೇ ಹಾಡಿಸಿ ಯುವಜನೋತ್ಸವಕ್ಕೆ ಶುಭ ಕೋರಿದರು.

ವಿವಿಧ ಸ್ಪರ್ಧೆ, ಏಕಾಂಕ ನಾಟಕ ಪ್ರದರ್ಶನ

ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಬುಧವಾರ ವೃಂದ ಗಾಯನ (ಭಾರತೀಯ), ಏಕವ್ಯಕ್ತಿ ಸ್ವರ ಮತ್ತು ವೃಂದಗಾಯನ (ಪಾಶ್ಚಿಮಾತ್ಯ), ಗಣಿತ ವಿಭಾಗದ ಭಾಸ್ಕರ್‌ ಸಭಾಂಗಣದಲ್ಲಿ ರಸ ಪ್ರಶ್ನೆ ಸ್ಪರ್ಧೆ ನಡೆದವು.

ಡಾ. ಬಿ.ಆರ್‌. ಅಂಬೇಡ್ಕರ್‌ ಸಭಾಂಗಣದ ಮೊದಲ ಮಹಡಿಯಲ್ಲಿ ಮಣ್ಣಿನ ಆಕೃತಿ, ಅಂಟು ಪತ್ರಗಳ ತಯಾರಿಕೆ ನಡೆಯಿತು. ಮುಖ್ಯ ಸಭಾಂಗಣದಲ್ಲಿ ಸಚಿನ್ ಬುಳ್ಳಾ, ಪೂರ್ಣಿಮಾ, ಜಮೀರ್ ಪಟೇಲ್ ಅಭಿನಯದ ‘ಕರ್ಣ ರಸಾಯನ’ ಪ್ರಹಸನ ಹಾಗೂ ಶ್ರುತಿ ನಿಂಬರ್ಗಾ, ಸಚಿನ್ ಮತ್ತು ವೀರೇಶ್ ಅಭಿನಯದ ‘ದೇಶ ಮಾರಾಟಕ್ಕಿದೆ’ ಏಕಾಂಕ ನಾಟಕ ಪ್ರದರ್ಶನ ಕಂಡಿತು.

ತಿಳಿ ಸಾಂಬರ್, ಅನ್ನ!

‘ಯುವಜನೋತ್ಸವದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು, ತಂಡದ ವ್ಯವಸ್ಥಾಪಕರು ಮತ್ತು ತೀರ್ಪುಗಾರರಿಗೆ ವಿಶ್ವವಿದ್ಯಾಲಯದ ಆವರಣದ ಕ್ಯಾಂಟೀನ್‌ನಲ್ಲಿ ಊಟ, ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ಊಟದ ವೇಳೆ ಆಹಾರ ಪದಾರ್ಥ ಕಡಿಮೆಯಾಗಿ ಕೆಲ ಹೊತ್ತು ಕಾದು ಊಟ ಮಾಡಬೇಕಾಯಿತು’ ಎಂದು ಸ್ಪರ್ಧಾರ್ಥಿಗಳು ಬೇಸರ ವ್ಯಕ್ತಪಡಿಸಿದರು.

‘ಊಟಕ್ಕಾಗಿ ಮಾಡಿದ್ದ ಸಾಂಬರ್ ತಿಳಿಯಾಗಿತ್ತು. ಸರಿಯಾಗಿ ಉಪ್ಪು, ಖಾರ ಹಾಕಿರಲಿಲ್ಲ. ಚಪಾತಿಗಳು ಸಹ ಬೇಗನೆ ಖಾಲಿಯಾದವು. ಬೇರೆ ದಾರಿಯಿಲ್ಲದೆ ತಿಳಿ ಸಾಂಬರ್, ಅನ್ನ ತಿನ್ನಬೇಕಾಯಿತು’ ಎಂದರು.

‘ಸ್ಥಳದಲ್ಲೇ ಹೆಚ್ಚಿನ ಕಾಲೇಜುಗಳು ನೋಂದಾಯಿಸಿದ್ದರಿಂದ ಸ್ಪರ್ಧಾರ್ಥಿಗಳ ಸಂಖ್ಯೆ ಹೆಚ್ಚಾಯಿತು. ಉದ್ಘಾಟನೆ ಕಾರ್ಯಕ್ರಮ ತಡವಾಗಿ ಮುಕ್ತಾಯ ಆಗಿದ್ದರಿಂದ ಒಂದೇ ಸಮಯದಲ್ಲಿ ಸ್ಪರ್ಧಾರ್ಥಿಗಳು ಜಮಾಯಿಸಿದ್ದರು. ಹೀಗಾಗಿ, ಊಟದಲ್ಲಿ ಸ್ವಲ್ಪ ಅಡಚಣೆ ಆಯಿತು. ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸುತ್ತೇವೆ’ ಎಂದು ಯುವಜನೋತ್ಸವ ಆಹಾರ ಸಮಿತಿಯ ಪ್ರೊ.ಚಂದ್ರಕಾಂತ ಕೆಳಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

ಯುವ ಜನೋತ್ಸವದಲ್ಲಿ ಇಂದು

ಮಹಾತ್ಮಗಾಂಧಿ ಸಭಾಂಗಣದಲ್ಲಿ ಬೆಳಿಗ್ಗೆ 9 ರಿಂದ 11.30ರವರೆಗೆ ಶಾಸ್ತ್ರೀಯ ಏಕವ್ಯಕ್ತಿ ಗಾಯನ. 11.30 ರಿಂದ ಮಧ್ಯಾಹ್ನ 1ರವರೆಗೆ ಕ್ಲಾಸಿಕಲ್‌ ಇನ್‌ಸ್ಟ್ರೂಮೆಂಟಲ್‌ ಸೋಲೊ. ಮಧ್ಯಾಹ್ನ 2ರಿಂದ 3.30 ರವರೆಗೆ ಏಕವ್ಯಕ್ತಿ ಲಘು ಸಂಗೀತ, 3.30 ರಿಂದ ಸಂಜೆ 5ರವರೆಗೆ ಜಾನಪದ ಸಂಗೀತ ಸ್ಪರ್ಧೆ ನಡೆಯಲಿದೆ.

ಭಾಸ್ಕರ್‌ ಸಭಾಂಗಣದಲ್ಲಿ ವಾಕ್ಪಟುತ್ವ ಸ್ಪರ್ಧೆ ಬೆಳಿಗ್ಗೆ 9 ರಿಂದ 11ರವರೆಗೆ, ಚರ್ಚಾ ಸ್ಪರ್ಧೆ 11.30 ರಿಂದ ಮಧ್ಯಾಹ್ನ 1.30ರವರೆಗೆ, ರಸ ಪ್ರಶ್ನೆ ಅಂತಿಮ ಮಧ್ಯಾಹ್ನ 2 ರಿಂದ 4.30ರವರೆಗೆ.

ಡಾ.ಬಿ.ಆರ್. ಅಂಬೇಡ್ಕರ್‌ ಭವನದ ಮೊದಲ ಮಹಡಿಯಲ್ಲಿ ಸ್ಪಾಟ್ ಫೊಟೊಗ್ರಾಫಿ ಬೆಳಿಗ್ಗೆ 8 ರಿಂದ 10.30ರವರೆಗೆ, ಪ್ರತಿಷ್ಠಾನ ಕಲೆ ಹಾಗೂ ಮೆಹಂದಿ ಬೆಳಿಗ್ಗೆ 10.30 ರಿಂದ 1ರವರೆಗೆ, ಸ್ಪಾಟ್‌ ಪೇಟಿಂಗ್, ರಂಗೋಲಿ, ಮಧ್ಯಾಹ್ನ 3 ರಿಂದ 6 ರವರೆಗೆ.

ಡಾ.ಬಿ.ಆರ್. ಅಂಬೇಡ್ಕರ್‌ ಮುಖ್ಯಸಭಾಂಗಣದಲ್ಲಿ ಮೂಕಾಭಿನಯ ಬೆಳಿಗ್ಗೆ 8 ರಿಂದ 9 ರವರೆಗೆ, ಅನುಕರಣೆ ಬೆಳಿಗ್ಗೆ 9 ರಿಂದ 12 ರವರೆಗೆ, ಜಾನಪದ/ಬುಡಕಟ್ಟು ಶೈಲಿಯ ನೃತ್ಯ ಮಧ್ಯಾಹ್ನ 2 ರಿಂದ 4.30 ರವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT