ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹೊಲಕ್ಕೆ ಹರಿಯುವುದೇ ನೀರು?

ಜಿಲ್ಲೆಯಲ್ಲಿ ಐದು ಪ್ರಮುಖ ಅಣೆಕಟ್ಟೆಗಳಿದ್ದರೂ ಪೂರ್ಣಗೊಳ್ಳದ ನೀರಾವರಿ
Last Updated 17 ಫೆಬ್ರುವರಿ 2022, 5:25 IST
ಅಕ್ಷರ ಗಾತ್ರ

ಕಲಬುರಗಿ: ರಾಜ್ಯದಲ್ಲಿ ಅತಿ ಹೆಚ್ಚು ವಿಸ್ತೀರ್ಣ ಹೊಂದಿದ ಜಿಲ್ಲೆಗಳ ಪೈಕಿ ಅವಿಭಜಿತ ಕಲಬುರಗಿ ಜಿಲ್ಲೆಯೂ ಒಂದು. ಹೀಗಾಗಿ, ರೈತರ ಹೊಲಗಳಿಗೆ ನೀರು ಹರಿಸುವ ಉದ್ದೇಶದಿಂದ ಸಾವಿರಾರು ಕೋಟಿ ವೆಚ್ಚ ಮಾಡಿ ಅಣೆಕಟ್ಟುಗಳನ್ನು ಕಟ್ಟಿದ್ದರೂ ಕಾಲುವೆಯ ನೀರು ಟೇಲ್‌ ಎಂಡ್‌ವರೆಗೆ ಹರಿದಿಲ್ಲ. ರೈತರ ಬದುಕೂ ಹಸನಾಗಿಲ್ಲ.

ಹೀಗಾಗಿ, ಈ ಬಾರಿಯ ಬಜೆಟ್‌ನಲ್ಲಿ ಕಾಲುವೆಗಳ ಆಧುನೀಕರಣಕ್ಕೆ, ಈಗಾಗಲೇ ಇರುವ ಕಾಲುವೆಗಳ ಹೂಳೆತ್ತಲು ಹೆಚ್ಚಿನ ಪ್ರಮಾಣದ ಹಣವನ್ನು ನೀಡಬೇಕು ಎಂಬುದು ಜಿಲ್ಲೆಯ ರೈತ ಮುಖಂಡರ ಆಗ್ರಹವಾಗಿದೆ. ಹಣಕಾಸು ಖಾತೆಯನ್ನೂ ತಮ್ಮ ಬಳಿ ಉಳಿಸಿಕೊಂಡಿರುವ ಜಲಸಂಪನ್ಮೂಲ ತಜ್ಞರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಾರಿಯ ಬಜೆಟ್‌ ಮಂಡಿಸಲಿದ್ದಾರೆ. ಹಿಂದೆ ಕೆಲ ಕಾಲ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬೊಮ್ಮಾಯಿ ಅವರು ಇಲ್ಲಿಯವರೆಗೆ ಜಿಲ್ಲೆಯ ವಿಚಾರಕ್ಕೆ ಸಂಬಂಧಿಸಿದಂತೆ ನೀಡಿದ ಬಹುತೇಕ ಭರವಸೆಗಳನ್ನು ಈಡೇರಿಸಿದ್ದಾರೆ.

ಅಲ್ಲದೇ, ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಹಾಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಮಲಾಪುರ ತಾಲ್ಲೂಕಿನ ಗಂಡೋರಿ ನಾಲಾ ಜಲಾಶಯಕ್ಕೆ ಭೇಟಿ ನೀಡಿದ್ದರು. 2020ರಲ್ಲಿ ಅತಿವೃಷ್ಟಿ ಸಂಭವಿಸಿದಾಗ ಸೊನ್ನ ಭೀಮಾ ಬ್ಯಾರೇಜ್, ನಾಗರಾಳ ಜಲಾಶಯ, ಬೆಣ್ಣೆತೊರಾ ಅಣೆಕಟ್ಟೆಯ ಬಗ್ಗೆ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದರು. ಹೀಗಾಗಿ, ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂಬ ಉದ್ದೇಶ ದಿಂದ ಅದಕ್ಕೆ ಪೂರಕವಾಗಿ ಹಣವನ್ನು ಬಿಡುಗಡೆ ಮಾಡುತ್ತಾರೆ ಎಂಬ ಆಶಾಭಾವ ಸ್ಥಳೀಯರಲ್ಲಿ ಇದೆ.

ಗಂಡೋರಿ ನಾಲಾ ನೀರಾವರಿ ಯೋಜನೆಯಿಂದ 7,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಬೇಕಿತ್ತು. 5,000 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಗಿದೆ ಎಂಬುದು ಅಧಿಕಾರಿಗಳ ಸಮಜಾಯಿಷಿ. ಆದರೆ, ಜಲಾಶಯದ ಪಕ್ಕದಲ್ಲೇ ಇರುವ ನಾಲೆಗಳಿಗೆ ನೀರು ಹರಿದಿಲ್ಲ ಎನ್ನುತ್ತಾರೆ ಮಹಾಗಾಂವ ಭಾಗದ ರೈತರು.

ಬೆಣ್ಣೆತೊರಾ ಜಲಾಶಯದಿಂದ 80 ಕಿ.ಮೀ. ದೂರದವರೆಗೆ ಕಾಲುವೆ ನಿರ್ಮಿಸಲಾಗಿದೆ. ಅದಕ್ಕಾಗಿ ನೂರಾರು ಕೋಟಿ ಹಣ ವೆಚ್ಚ ಮಾಡಲಾಗಿದೆ. ಆದರೆ, ಮುಖ್ಯ ಕಾಲುವೆಗುಂಟ ಹರಿಯುವ ನೀರು ಕಿರುಗಾಲುವೆಗಳಿಗೆ ಹರಿಯುವುದೇ ಇಲ್ಲ ಎಂಬ ಆರೋಪ ರೈತರದ್ದು. ಇದರಿಂದ ಬೇಸಿಗೆಯಲ್ಲಿ ಕೃಷಿ ಚಟುವಟಿಕೆ ಮಾಡಲು ಸಾಧ್ಯವೇ ಆಗುವುದಿಲ್ಲ ಎಂದು ಅವರು ಹೇಳುತ್ತಾರೆ.

2011ರಲ್ಲಿ ಲೋಕಾರ್ಪಣೆಯಾದ ಅಫಜಲಪುರ ಬಳಿಯ ಸೊನ್ನ ಭೀಮಾ ಬ್ಯಾರೇಜ್‌ನ ಸಂಗ್ರಹ ಸಾಮರ್ಥ್ಯ 3.14 ಟಿಎಂಸಿ ಅಡಿ. ಕಳೆದ ವರ್ಷದ ಅತಿವೃಷ್ಟಿಯ ಸಂದರ್ಭದಲ್ಲಿ ಬ್ಯಾರೇಜ್ ಸಂಪೂರ್ಣ ಭರ್ತಿಯಾಗಿತ್ತು. ಬೇಸಿಗೆ ಆರಂಭವಾಗಿರುವುದರಿಂದ ರೈತರ ಹೊಲಗಳಿಗೆ ನೀರು ಹರಿಸುವುದು ಆಗುತ್ತಿಲ್ಲ. ತಾಲ್ಲೂಕಿನ ತೆಲ್ಲೂರು ಬಳಿಯ ಕಾಲುವೆವರೆಗೆ ಮಾತ್ರ ನೀರು ಹರಿ ಯುತ್ತದೆ. ಅದಾದ ಬಳಿಕ ಸುಮಾರು 50 ಅಡಿ ಆಳದ ತಿರುವಿನಲ್ಲಿ ಹೂಳು ತುಂಬಿಕೊಂಡಿರುವುದರಿಂದ ನೀರು ಮುಂದೆ ಹೋಗುವುದಿಲ್ಲ ಎನ್ನುತ್ತಾರೆ ನೀರು ಬಳಕೆದಾರರ ಸಂಘದ ಅಧ್ಯಕ್ಷ ಲತೀಫ್‌ ಪಟೇಲ್.

ನನೆಗುದಿಗೆ ಬಿದ್ದ ನೀರಾವರಿ ಯೋಜನೆ

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೊನ್ನ ಭೀಮಾ ಬ್ಯಾರೇಜಿನಿಂದ ಆಳಂದ ತಾಲ್ಲೂಕಿನ ಅಮರ್ಜಾ ಜಲಾಶಯಕ್ಕೆ ನೀರು ಹರಿಸುವ ಹಾಗೂ ದಾರಿಯಲ್ಲಿ ಬರುವ ಸುಮಾರು 10 ಕೆರೆಗಳನ್ನು ತುಂಬಿಸುವ ₹ 350 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಿದ್ದರು.

ಕಾಮಗಾರಿಯೂ ಆರಂಭವಾಗಿತ್ತು. ಆದರೆ, ನಂತರ ಬಂದ ಸರ್ಕಾರ ಆ ಯೋಜನೆಗೆ ಹಣವನ್ನು ಬಿಡುಗಡೆ ಮಾಡಲು ವಿಳಂಬ ಮಾಡಿದ್ದರಿಂದ ಯೋಜನೆಯು ಕುಂಟುತ್ತಾ ಸಾಗಿದೆ. ಗುತ್ತಿಗೆದಾರರು ಈ ಯೋಜನೆ ಪೂರ್ಣಗೊಳಿಸಲು ಆಗುವುದಿಲ್ಲ ಎಂದು ಹೇಳಿ ಯೋಜನೆಯಿಂದ ಹಿಂದೆ ಸರಿದಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

2021ರ ಜನವರಿಯಲ್ಲಿ ಕಲಬುರಗಿ ತಾಲ್ಲೂಕಿನ ಎಂಟು ಕೆರೆಗಳನ್ನು ಬೆಣ್ಣೆತೊರಾ ಜಲಾಶಯದಿಂದ ಏತನೀರಾವರಿ ಮೂಲಕ ತುಂಬಿಸುವ ಯೋಜನೆಗೆ ಹತಗುಂದಾ ಗ್ರಾಮದಲ್ಲಿ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಚಾಲನೆ ನೀಡಿದ್ದರು. ಆದರೆ, ವರ್ಷ ಕಳೆದರೂ ಯೋಜನೆಯ ಪ್ರಗತಿ ಮಾತ್ರ ಆಗಿಲ್ಲ. ₹197 ಕೋಟಿ ವೆಚ್ಚದ ಈ ಯೋಜನೆಯು ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಜಿಲ್ಲೆಯ ಹರಸೂರ ಸಣ್ಣ ನೀರಾವರಿ ಕೆರೆ, ಕುಮಸಿ ಕೆರೆ, ಸೈಯದ್ ಚಿಂಚೋಳಿ ಕೆರೆ, ಬೋಸಗಾ ಕೆರೆ, ಸಿಂದಗಿ/ ಸಾವಳಗಿ ಜಿನಗು ಕೆರೆ, ಯಳವಂತಗಿ ಕೆರೆ, ಹುಣಸಿ ಹಡಗಿಲ ಕೆರೆ, ಮೇಳಕುಂದಾ (ಬಿ) ಕೆರೆಗಳನ್ನು ತುಂಬಿಸುವ ಯೋಜನೆ ಇದೆ. ಆದರೆ, ಅದಿನ್ನೂ ತೆವಳುತ್ತಲೇ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT