ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಂ ಐಸೋಲೇಷನ್‌: ನಿಗಾ ಅಗತ್ಯ

ಗ್ರಾಮಗಳಲ್ಲಿ ಸೋಂಕು ನಿಯಂತ್ರಣ: ಉಸ್ತುವಾರಿ ಕಾರ್ಯದರ್ಶಿ ಗುಂಜನ್ ಕೃಷ್ಣ ಸೂಚನೆ
Last Updated 22 ಮೇ 2021, 3:27 IST
ಅಕ್ಷರ ಗಾತ್ರ

ಕಲಬುರ್ಗಿ: ‘ಹೋಂ ಐಸೋಲೇಷನ್‌ನಲ್ಲಿ ಇರುವ ಕೋವಿಡ್‌ ಸೋಂಕಿತರ ಮೇಲೆ ಸರಿಯಾದ ನಿಗಾ ಇಡಬೇಕು. ಸರ್ಕಾರದ ಮಾರ್ಗಸೂಚಿಯನ್ನು ಅವರು ಯಾವುದೇ ಕಾರಣಕ್ಕೂ ಮೀರದಂತೆ ನೋಡಿಕೊಳ್ಳಬೇಕು’ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕಿಯೂ ಆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗುಂಜನ್ ಕೃಷ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣ ಮತ್ತು ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ‘ಹೋಂ ಐಸೋಲೇಷನ್‌ನಲ್ಲಿ ಇರುವವರು ಹೊರಗೆ ತಿರುಗಾಡುವುದರಿಂದ ಸೋಂಕು ಹೆಚ್ಚುವ ಸಾಧ್ಯತೆ ಇದೆ. ಆದ್ದರಿಂದ ಆಶಾ ಕಾರ್ಯ
ಕರ್ತೆಯರನ್ನೂ ಈ ಕೆಲಸಕ್ಕೆ ನಿಯೋಜಿಸಬೇಕು. ಈಗಾಗಲೇ ಇರುವ ಟಾಸ್ಕ್‌ ಫೋರ್ಸ್‌ಗಳನ್ನು ಇನ್ನಷ್ಟು ಕ್ರಿಯಾಶೀಲ ಮಾಡಬೇಕು’ ಎಂದು ಸೂಚಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ‘ಪ್ರತಿ ತಾಲ್ಲೂಕಿನ ಕೇಂದ್ರಸ್ಥಾನದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾ ಗಿದೆ. ಇದರ ಜೊತೆಗೆ ಹಳ್ಳಿ ಜನರ ಅನುಕೂಲಕ್ಕೆ ಹೋಬಳಿ ಮಟ್ಟ
ದಲ್ಲೂ ತೆರೆಯಲು ಎಲ್ಲಾ ಸಿದ್ಧತೆ ಮಾಡಿ ಕೊಂಡಿದೆ. ಆದರೆ, ಜನರು ಕೋವಿಡ್ ಕೇರ್ ಸೆಂಟರ್ ಬರಲು ಹಿಂದೇಟು ಹಾಕುತ್ತಿರುವುದೇ ಗ್ರಾಮೀಣ ಭಾಗದಲ್ಲಿ ಸೋಂಕು ಉಲ್ಬಣಕ್ಕೆ ಕಾರಣವಾಗಿದೆ. ಈಗಾಗಲೇ 13 ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು, 832 ಹಾಸಿಗೆ ಇವೆ. ಇದರಲ್ಲಿ ಪ್ರಸ್ತುತ 118 ಮಾತ್ರ ರೋಗಿಗಳಿದ್ದು, 714 ಖಾಲಿ ಇವೆ’ ಎಂದು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯೆಸಿದ ಉಸ್ತು ವಾರಿ ಕಾರ್ಯದರ್ಶಿ, ‘ಗ್ರಾಮೀಣ ಜನರ ಮನವೊಲಿಸಲು ಸ್ಥಳೀಯ ಜನ ಪ್ರತಿನಿಧಿಗಳ ಸಹಕಾರ ಪಡೆಯಬೇಕು’ ಎಂದು ಸೂಚಿಸಿದರು.

‌6 ಸಾವಿರ ಕೋವಿಶೀಲ್ಡ್‌ ಜಿಲ್ಲೆಗೆ: ಜಿಲ್ಲಾ ಆರ್‌ಸಿಎಚ್ಒ ಡಾ.ಪ್ರಭುಲಿಂಗ ಮಾನಕಾರ ಮಾತನಾಡಿ, ‘ಜಿಲ್ಲೆಯಲ್ಲಿ ಪ್ರಸ್ತುತ 1570 ಕೋವ್ಯಾಕ್ಸಿನ್, 1350 ಕೋವಿಶೀಲ್ಡ್ ಡೋಸ್ ಲಭ್ಯವಿದೆ. ಶನಿವಾರ ಜಿಲ್ಲೆಗೆ ಮತ್ತೆ 6000 ಕೋವಿಶೀಲ್ಡ್ ಡೋಸ್ ಬರಲಿದೆ. ಜಿಲ್ಲೆಯ ಜನಸಂಖ್ಯೆಗೆ ಅನುಗುಣವಾಗಿ ಈ ಲಸಿಕೆ ಪ್ರಮಾಣ ಸಾಕಾಗುತ್ತಿಲ್ಲ. ಸಾರ್ವಜನಿಕರ ಹೆಚ್ಚಿನ ಬೇಡಿಕೆ ಕಾರಣ ಜಿಲ್ಲೆಗೆ ಪ್ರತಿ ದಿನ 15,000 ಡೋಸ್ ಕೋವಿಡ್ ಲಸಿಕೆ ಪೂರೈಕೆಯಾಗಬೇಕು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ ಮಾತನಾಡಿ, ‘ಪ್ರಸ್ತುತ ಜಿಲ್ಲೆಗೆ ಪ್ರತಿನಿತ್ಯ 27 ಕೆ.ಎಲ್. ಆಮ್ಲಜನಕ ಬೇಡಿಕೆ ಇದೆ. ರಾಜ್ಯ ಸರ್ಕಾರ 25 ಕೆ.ಎಲ್. ಹಂಚಿಕೆ ಮಾಡುತ್ತಿದ್ದು, ಉಳಿದಂತೆ ಸ್ಥಳೀಯ ಸಂಸ್ಥೆಗಳಿಂದ 1500 ಜಂಬೂ ಸಿಲೆಂಡರ್ ಪಡೆಯಲಾಗುತ್ತಿದೆ. ಇದನ್ನು 8 ಸರ್ಕಾರಿ ಮತ್ತು 27 ಖಾಸಗಿ ಆಸ್ಪತ್ರೆಗೆ ಪ್ರತಿನಿತ್ಯ ಆಕ್ಸಿಜನ್ ಪೂರೈಸಲಾಗುತ್ತಿದೆ. ಯಾವುದೇ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಲ್ಲ ಎಂದು ವಿವರಿಸಿದರು.

‘ಚಿಂಚೊಳಿಯಲ್ಲಿ ಆಮ್ಲಜನಕ ಜನರೇಟನ್ ಪ್ಲ್ಯಾಂಟ್ ಇದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಸೇಡಂ ಮತ್ತು ಜೇವರ್ಗಿಯಲ್ಲಿ ಸ್ಥಾಪಿಸಲು ಮಂಜೂರಾತಿ ನೀಡಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ ಅವರು ಸಭೆಗೆ ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿಮಿ ಮರಿಯಮ್ ಜಾರ್ಜ್, ಪಾಲಿಕೆಯ ಆಯುಕ್ತ ಸ್ನೇಹಲ ಸುಧಾಕರ ಲೋಖಂಡೆ, ಇ.ಎಸ್.ಐ.ಸಿ. ಡೀನ್ ಡಾ.ಇವಾನೊ ಲೋಬೋ, ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ, ಜಿಮ್ಸ್ ಆಸ್ಪತ್ರೆಯ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಗುರುರಾಜ ದೊಡ್ಡಮನಿ, ಸಹಾಯಕ ಔಷಧ ನಿಯಂತ್ರಕ ಗೋಪಾಲ ಭಂಡಾರಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಇದ್ದರು.

*

22 ಬ್ಲ್ಯಾಕ್‌ ಫಂಗಸ್‌ ಪತ್ತೆ: ಜಿಮ್ಸ್ ನಿರ್ದೇಶಕಿ

‘ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಕಲಬುರ್ಗಿ ವಿಭಾಗಕ್ಕಾಗಿ ಜಿಮ್ಸ್ ಆಸ್ಪತ್ರೆಯನ್ನು ಗುರುತಿಸಲಾಗಿದೆ. ಬೀದರ್‌, ರಾಯಚೂರು ಸೇರಿದಂತೆ ಇದೂವರೆಗೆ 22 ಶಂಕಾಸ್ಪದ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ರೋಗಿಗಳ ಚಿಕಿತ್ಸೆಗೆ ಪ್ರತ್ಯೇಕ ಐಸಿಯು ವಾರ್ಡ್ ಸ್ಥಾಪಿಸಿ ಚಿಕಿತ್ಸೆ ನೀಡಲಾಗುತ್ತಿದೆ' ಎಂದುಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ ಹೇಳಿದರು.

‘ಕೋವಿಡ್ ಸೋಂಕಿನಿಂದ ಗುಣಮುಖರಾದವರಲ್ಲಿ ಬ್ಲ್ಯಾಕ್ ಫಂಗಸ್ ಕಾಯಿಲೆ ಕಾಣಿಸಿಕೊಳ್ಳುತ್ತಿದ್ದು, ಇದರ ಆರಂಭಿಕ ಪತ್ತೆಗಾಗಿ ರೋಗಿ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಂದರ್ಭದಲ್ಲಿಯೆ ಬ್ಲ್ಯಾಕ್ ಫಂಗಸ್ ಸಂಬಂಧ ರೋಗಿಗೆ ತಿಳಿವಳಿಕೆಯ ಕರಪತ್ರ ನೀಡಬೇಕು. ಸದರಿ ರೋಗಿಗೆ ಫಾಲೋ ಅಪ್ ಮಾಡಿ ಅವರ ಆರೋಗ್ಯ ವಿಚಾರಿಸಬೇಕು’ ಎಂದು ಉಸ್ತುವಾರಿ ಕಾರ್ಯದರ್ಶಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT