ಮಂಗಳವಾರ, ಜುಲೈ 27, 2021
24 °C
ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳ ಉಪನ್ಯಾಸಕರಿಂದ ಮನವಿ

ಐಟಿಐ ಅತಿಥಿ ಉಪನ್ಯಾಸಕರ ಬಾಕಿ ವೇತನಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಲಾಕ್‌ಡೌನ್ ಅವಧಿಯ ವೇತನವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಸರ್ಕಾರಿ ಕೈಗಾರಿಕಾ ತರಬೇತಿ ಅತಿಥಿ ಬೋಧಕರ ಹೋರಾಟ ಸಮಿತಿ ನೇತೃತ್ವದಲ್ಲಿ ಐಟಿಐ ಕಾಲೇಜುಗಳ ಅತಿಥಿ ಬೋಧಕರು ಇಲ್ಲಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕರ ಮೂಲಕ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ಮನವಿ ಗುರುವಾರ ಮನವಿ ಸಲ್ಲಿಸಿದರು.

‘ಕಳೆದ ವರ್ಷ ದೇಶಕ್ಕೆ ಬಂದ ಕೊರೊನಾದಿಂದ ಬಹಳಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಇನ್ನೂ ಇದೀಗ ಎರಡನೇ ಅಲೆಯಿಂದಾಗಿ ಜೀವನ ನಡೆಸಲು ಪರದಾಡುವಂತಾಗಿದೆ. ಕಳೆದ ಮೂರು ತಿಂಗಳ ವೇತನವಿಲ್ಲದ ಸಂಸಾರಗಳನ್ನು ನಡೆಸುವುದು ಕಷ್ಟವಾಗಿದೆ. ತರಬೇತಿದಾರರ ಹಿತದೃಷ್ಟಿಯಿಂದ ಲಾಕ್ ಡೌನ್ ಸಮಯದಲ್ಲಿ ನಮ್ಮದೇ ಹಣ ಖರ್ಚು ಮಾಡಿಕೊಂಡು ಆನ್‌ಲೈನ್ ಪಾಠವನ್ನೂ ಮಾಡಿದ್ದೇವೆ. ವಿದ್ಯಾರ್ಥಿಗಳು ದಾಖಲಾದ ಸಂದರ್ಭದಲ್ಲಿ ಮಾತ್ರ ಸೇವೆಗೆ ಅತಿಥಿ ಬೋಧಕರನ್ನು ನೇಮಿಸಿಕೊಳ್ಳಲಾಗುತ್ತಿದೆ. 10–15 ವರ್ಷಗಳಿಂದ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದವರ ಎಷ್ಟೋ ಜನರ ಸೇವೆ ಕಡಿತಗೊಂಡಿರುತ್ತದೆ. ಹೆರಿಗೆ ಭತ್ಯೆಯೂ ಇರುವುದಿಲ್ಲ’ ಎಂದು ಉಪನ್ಯಾಸಕರು ಮನವಿಯಲ್ಲಿ ತಿಳಿಸಿದ್ದಾರೆ.

‘ದಿನಕ್ಕೆ ₹ 400ರಂತೆ 4 ಗಂಟೆಯಂತೆ ತಿಂಗಳಿಗೆ ₹ 9600 ಸಂಭಾವನೆ ಅತಿ ಕಡಿಮೆ ಆಗಿದ್ದು ಜೀವನ ನಡೆಸಲು ಬಹಳ ಕಷ್ಟವಾಗಿದೆ. ಪ್ರಾಯೋಗಿಕ ಪಾಠ ಇರುವುದರಿಂದ ದಿನಕ್ಕೆ 6 ಗಂಟೆಗಳು ಮೀರಿ ಬೋಧನೆ ಮಾಡಬೇಕಾಗಿದ್ದು ಜೀವನಕ್ಕೆ ಇದೇ ಆಧಾರವಾಗಿರುತ್ತದೆ. ಆದರೆ ಸಮಯಕ್ಕೆ ಸರಿಯಾಗಿ ವೇತನವಿಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ. ಕೆಪಿಎಸ್‌ಸಿ ಮೂಲಕ ಆಯ್ಕೆಯಾಗಿ ಅಭ್ಯರ್ಥಿಗಳು ಬಂದಲ್ಲಿ ಯಾವುದೇ ಕೆಲಸದ ಭದ್ರತೆ ಇರುವುದಿಲ್ಲ. ಒಟ್ಟಾರೆ ಅತಿಥಿ ಉಪನ್ಯಾಸಕರ ಜೀವನ ಶೋಚನೀಯವಾಗಿದೆ. ಹೀಗಾಗಿ 2019–20 ಮತ್ತು 2020–21 ಸಾಲಿನ ಲಾಕ್‌ಡೌನ್ ಅವಧಿಯ ಅತಿಥಿ ಬೋಧಕರ ಸಂಬಳವನ್ನು ಕೂಡಲೇ ನೀಡಬೇಕು. ಅತಿಥಿ ಬೋಧಕರ ಸೇವಾ ಭದ್ರತೆ ಮತ್ತು ವೈದ್ಯಕೀಯ ಭದ್ರತೆ ಖಾತ್ರಿಪಡಿಸಬೇಕು. ಡಿಜಿಇಟಿ ಮಾರ್ಗಸೂಚಿಯಂತೆ ಅತಿಥಿ ಬೋಧಕರ ಮೂಲ ವೇತನವನ್ನು ಮೂರನೇ ಎರಡರಷ್ಟು ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.

ಕೋವಿಡ್‌ನಿಂದ ಮೃತಪಟ್ಟ ಅತಿಥಿ ಬೋಧಕರಿಗೆ ತಕ್ಷಣವೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಅತಿಥಿ ಉಪನ್ಯಾಸಕರಾದ ಅಮರೇಶ, ಶರಣಬಸವ, ವಸಂತರಾಯ, ಲಿಂಗರಾಜ ರೆಡ್ಡಿ, ಸಂತೋಷ, ಶಿವಕಾಂತ, ಚಂದ್ರಶೇಖರ, ವೀರೇಶ, ನಾಗರಾಜ, ಗೌರಿಶಂಕರ ಇದ್ದರು.

ಕಲ್ಯಾಣ ಕರ್ನಾಟಕದ ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಂದ ಬಂದಿದ್ದ ಅತಿಥಿ ಉಪನ್ಯಾಸಕರು ಮನವಿ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.