ಜಾಧವ ಕಳಂಕಿತ ವ್ಯಕ್ತಿ; ಚವಾಣ್

ಮಂಗಳವಾರ, ಏಪ್ರಿಲ್ 23, 2019
31 °C

ಜಾಧವ ಕಳಂಕಿತ ವ್ಯಕ್ತಿ; ಚವಾಣ್

Published:
Updated:
Prajavani

ಕಲಬುರ್ಗಿ: ‘ಕರ್ನಾಟಕ ಮತ್ತು ಕೇರಳ ರಾಜ್ಯಗಳ ಬೀದಿ ಕಾರ್ಮಿಕರ ಆಸ್ಪತ್ರೆ ಆಡಳಿತಾಧಿಕಾರಿಯಾಗಿದ್ದ ಅವಧಿಯಲ್ಲಿ ಡಾ.ಉಮೇಶ ಜಾಧವ ಅವರು ಹಗರಣ ಎಸಗಿದ್ದು, ಅವರೊಬ್ಬ ಕಳಂಕಿತ ವ್ಯಕ್ತಿಯಾಗಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಬಾಬುರಾವ ಚವಾಣ್ ಆರೋಪಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಾಧವ ಅವರು ಔಷಧಿ, ಮಾತ್ರೆ, ಇಂಜೆಕ್ಷನ್‌ನಗಳನ್ನು ಸರಿಯಾಗಿ ಹಂಚಿಕೆ ಮಾಡದೆ ದುಡ್ಡು ಲೂಟಿ ಮಾಡಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆಯೂ ನಡೆದಿದೆ. ಆದರೆ, ಪ್ರಭಾವಬೀರಿ ಅವರು ತನಿಖೆಯಿಂದ ಖುಲಾಸೆಗೊಂಡಿದ್ದಾರೆ. ಇಂತಹ ವ್ಯಕ್ತಿಗೆ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸುವ ಯೋಗ್ಯತೆ ಇಲ್ಲ’ ಎಂದು ಹರಿಹಾಯ್ದರು.

‘ಲಂಬಾಣಿ ಅಭಿವೃದ್ಧಿ ನಿಗಮದ ಕಚೇರಿಯನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡು, ಎಲ್ಲಾ ಕಡತಗಳಿಗೆ ಸಹಿ ಮಾಡಿ ಹಣ ದೋಚಿದ್ದಾರೆ. ಹೀಗಾಗಿ ಲಂಬಾಣಿ ಸಮಾಜ ಜಾಧವ ಅವರನ್ನು ತಿರಸ್ಕರಿಸುತ್ತಿದೆ’ ಎಂದರು.

‘ಲಂಬಾಣಿ ಹಾಸ್ಟೆಲ್‌ಗಳ ಮೇಲ್ವಿಚಾರಕರಾಗಿದ್ದ ಅವಧಿಯಲ್ಲಿ ಜಾಧವ ಸಹೋದರ ರಾಮಚಂದ್ರ ಜಾಧವ ಅವರು ಕೂಡ ಹಣ ಲೂಟಿ ಮಾಡಿದ್ದಾರೆ. ಮಹಿಳೆಯರ ಹಾಸ್ಟೆಲ್‌ ಮುಚ್ಚಲು ಕಾರಣರಾಗಿದ್ದಾರೆ’ ಎಂದು ದೂರಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ನಾಮದೇವ ರಾಠೋಡ ಮಾತನಾಡಿ, ‘ಚಿತ್ತಾಪುರ ತಾಲ್ಲೂಕು ನಾಲವಾರ ಬಳಿಯ ಕುಂಬಾರಹಳ್ಳಿ ಬಳಿ ಜಾಧವ ಕಡೆಯ ಬಾಡಿಗೆ ಗೂಂಡಾಗಳು ಸಚಿವ ಪಿ.ಟಿ.ಪರಮೇಶ್ವರ ನಾಯಕ, ಮುಖಂಡ ಸುಭಾಸ ರಾಠೋಡ ಮೇಲೆ ಹಲ್ಲೆ ಮಾಡಿದ್ದಾರೆ. ತಾವೇ ಹಲ್ಲೆ ಮಾಡಿ, ತಾವೇ ವಿಡಿಯೊ ಮಾಡಿಕೊಂಡು ವೈರಲ್ ಮಾಡಿದ್ದಾರೆ’ ಎಂದು ಆರೋಪಿಸಿದರು.

ಮುಖಂಡ ಬಾಬು ಹೊನ್ನಾನಾಯಕ ಮಾತನಾಡಿ, ‘ಗುಲಬರ್ಗಾ ಲೋಕಸಭಾ ಕ್ಷೇತ್ರಕ್ಕೆ ಈ ಹಿಂದೆ ಜಾತಿ ಆಧಾರದ ಮೇಲೆ ಎಂದೂ ಚುನಾವಣೆ ನಡೆದಿಲ್ಲ. ಜಾಧವ ಅವರು ಬಂಜಾರ ಸಮುದಾಯವನ್ನು ಹೈಜಾಕ್ ಮಾಡಿದ್ದಾರೆ. ತಾಂಡಾಗಳಿಗೆ ಪ್ರಚಾರಕ್ಕೆ ತೆರಳಿದರೆ ವಿರೋಧಿಸುವಂತಹ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಲತಾ ರಾಠೋಡ, ಮುಖಂಡರಾದ ಶಾಮರಾವ ಪ್ಯಾಟಿ, ರವಿ ರಾಠೋಡ ಇದ್ದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !