ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ ಬಿತ್ತಿದವರು ಹೊರಗೆ, ಹೋರಾಟಗಾರರು ಜೈಲಿಗೆ: ಮರಿಯಂ ಧವಳೆ ಕಿಡಿ

ಜನವಾದಿ ಮಹಿಳಾ ಸಂಘಟನೆಯ ಮೂರು ದಿನಗಳ ಸಮ್ಮೇಳನಕ್ಕೆ ಚಾಲನೆ
Last Updated 1 ಆಗಸ್ಟ್ 2022, 10:02 IST
ಅಕ್ಷರ ಗಾತ್ರ

ಕಲಬುರಗಿ: 'ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಸಮಾಜದಲ್ಲಿ ಕೋಮು ಭಾವನೆ ಕೆರಳಿಸಿ, ಸಮಾಜದ ಸ್ವಾಸ್ಥ್ಯಕ್ಕೆ ಭಂಗ ತರುವ ಹೇಳಿಕೆ ನೀಡಿದವರನ್ನು ಹೊರಗೆ ಓಡಾಡಲು ಬಿಟ್ಟು ಜನರ ಹಕ್ಕುಗಳಿಗಾಗಿ ಹೋರಾಟ ಮಾಡಿದವರನ್ನು ಜೈಲಿಗಟ್ಟದೆ’ ಎಂದು ಜನವಾದಿ ಮಹಿಳಾ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮರಿಯಂ ಧವಳೆ ಟೀಕಿಸಿದರು.

ನಗರದ ಹೊರವಲಯದ ಖಣದಾಳ ಗ್ರಾಮದಲ್ಲಿ ಸೋಮವಾರದಿಂದ ಆರಂಭವಾದ ಮೂರು ದಿನಗಳ ಜನವಾದಿ ಮಹಿಳಾ ಸಂಘಟನೆಯ 11ನೇ ರಾಜ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಜೈಲಿನಲ್ಲಿ ವರ್ಷಗಳಿಂದ ಕೊಳೆಯುತ್ತಿರುವ ಮಾನವ ಹಕ್ಕು ಹೋರಾಟಗಾರರ ಜಾಮೀನು ಅರ್ಜಿಗಳನ್ನು ನ್ಯಾಯಾಲಯಗಳು ಮುಂದಕ್ಕೆ ಹಾಕುತ್ತಿರುವುದು ಅಥವಾ ವಜಾ ಮಾಡುತ್ತಿರುವುದು ಕಳವಳಕಾರಿ ವಿದ್ಯಮಾನ. ಕೋಮು ದ್ವೇಷದ ಹೇಳಿಕೆ ನೀಡಿದ ಬಿಜೆಪಿಯ ಕಪಿಲ್ ಮಿಶ್ರಾ, ಅನುರಾಗ್ ಠಾಕೂರ್ ಅವರ ವಿರುದ್ಧ ಯಾವುದೇ ಕ್ರಮವಾಗುತ್ತಿಲ್ಲವೇಕೆ’ ಎಂದು ಪ್ರಶ್ನಿಸಿದರು.

‘ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ರಜೆ ನೀಡಲು ಹಿಂದೇಟು ಹಾಕಲಾಗುತ್ತಿದೆ. ಖಾಸಗಿ ಸಂಸ್ಥೆಗಳಲ್ಲಿ ಮಹಿಳೆಯರು ಕೆಲಸವನ್ನೇ ಬಿಡಬೇಕಾಗಿದೆ. ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡಲಾಗುತ್ತಿದೆ. ಸಲ್ಲದ ಕಾರಣಗಳನ್ನು ನೀಡಿ ಲಕ್ಷಾಂತರ ಪಡಿತರ ಚೀಟಿಗಳನ್ನು ರದ್ದು ಮಾಡಲಾಗುತ್ತಿದೆ. ಕೊರೊನಾದಿಂದ ಬಡವರು, ಮಧ್ಯಮ ವರ್ಗದವರು ತಮ್ಮ ಉಳಿತಾಯದ ಅಷ್ಟೂ ಹಣವನ್ನು ಕಳೆದುಕೊಂಡು ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಪಡಿತರ ವ್ಯವಸ್ಥೆಯನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು. ಜೊತೆಗೆ, ಅತ್ಯವಶ್ಯಕ ವಸ್ತುಗಳನ್ನು ಪಡಿತರ ವ್ಯವಸ್ಥೆಯ ಮೂಲಕ ಹಂಚಬೇಕು’ ಎಂದು ಒತ್ತಾಯಿಸಿದರು.

‘ಮಹಿಳೆಯರ ಮೇಲಿನ ದೌರ್ಜನ್ಯ, ನಿರುದ್ಯೋಗ, ಬಡತನ, ಶ್ರೀಮಂತರ ಪರವಾದ ನೀತಿಗಳನ್ನು ತರುವುದರ ವಿರುದ್ಧ ಜನವಾದಿ ಮಹಿಳಾ ಸಂಘಟನೆಯು ರಾಷ್ಟ್ರಮಟ್ಟದಲ್ಲಿ ಸಹಿ ಸಂಗ್ರಹ ಅಭಿಯಾನವನ್ನು ಆಯೋಜಿಸಿದ್ದು, ಇಲ್ಲಿಯವರೆಗೆ 30 ಲಕ್ಷ ಸಹಿಗಳನ್ನು ಸಂಗ್ರಹಿಸಿ ರಾಷ್ಟ್ರಪತಿಗಳಿಗೆ ಕಳುಹಿಸಲಾಗಿದೆ. ಆಗಸ್ಟ್ 15ರವರೆಗೂ ಸಹಿ ಸಂಗ್ರಹ ಅಭಿಯಾನ ಮುಂದುವರೆಯಲಿದೆ’ ಎಂದರು.

ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷೆ ಯು. ವಾಸುಕಿ ಮಾತನಾಡಿ, ‘ಕೊರೊನಾ ಸಂದರ್ಭದಲ್ಲಿ ಬಡ ಗ್ರಾಮೀಣ ಜನರ ಕೈ ಹಿಡಿದಿದ್ದು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ. ಆದರೆ, ಕೇಂದ್ರ ಸರ್ಕಾರ ಅದಕ್ಕೆ ಬಜೆಟ್‌ನಲ್ಲಿ ₹ 25 ಸಾವಿರ ಕೋಟಿ ಕಡಿತಗೊಳಿಸಿದ್ದು ಜನ ವಿರೋಧಿ ಕ್ರಮ. ಮುಂದಿನ ವರ್ಷದ ಬಜೆಟ್‌ನಲ್ಲಿ ಸಮರ್ಪಕವಾದ ಹಣವನ್ನು ಒದಗಿಸಬೇಕು. ಜೊತೆಗೆ, ನಗರ ಪ್ರದೇಶದಲ್ಲೂ ಉದ್ಯೋಗ ಖಾತ್ರಿ ಯೋಜನೆಯನ್ನು ರೂಪಿಸಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ದೇವಿ ಮಾತನಾಡಿ, ‘ಇಂದಿಗೂ ಮಹಿಳೆಯರು ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ಆಗುತ್ತಿಲ್ಲ. ಗಂಡಸರಿಗೆ ಇರುವ ಸ್ವಾತಂತ್ರ್ಯ ಹೆಣ್ಣುಮಕ್ಕಳಿಗೆ ಇಲ್ಲವಾಗಿದೆ. ಮಹಿಳಾ ಸಬಲೀಕರಣ ಹಾಗೂ ಮಹಿಳೆಯರಿಗೆ ನ್ಯಾಯಬದ್ಧವಾಗಿ ದೊರೆಯಬೇಕಾದ ಹಕ್ಕುಗಳನ್ನು ಗಳಿಸಿಕೊಡುವ ನಿಟ್ಟಿನಲ್ಲಿ ಸಮ್ಮೇಳನದಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ’ ಎಂದರು.

ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಗೌರಮ್ಮ, ಉಪಾಧ್ಯಕ್ಷೆ ಕೆ. ನೀಲಾ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಕನೀಜ್ ಫಾತಿಮಾ ಇದ್ದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ 350ಕ್ಕೂ ಅಧಿಕ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT