ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಕಾನೂನುಗಳ ಕೋಡಿಫಿಕೇಶನ್‌ಗೆ ಆಕ್ರೋಶ

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಪ್ರತಿಭಟನೆ
Last Updated 2 ಆಗಸ್ಟ್ 2019, 12:48 IST
ಅಕ್ಷರ ಗಾತ್ರ

ಕಲಬುರ್ಗಿ: ಕಾರ್ಮಿಕ ಸಂಘಟನೆಗಳ ತೀವ್ರ ವಿರೋಧದ ಹೊರತಾಗಿಯೂ ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳ ಕೋಡಿಫಿಕೇಶನ್‌ ಜಾರಿಗೆ ತಂದಿರುವ ಕ್ರಮವನ್ನು ಖಂಡಿಸಿ ವಿವಿಧ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟವಾದ ‘ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ’ಯ ಸದಸ್ಯರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಇದರ ಪ್ರಸ್ತಾವ ಮಾಡುವ ಮೂಲಕ ಅತ್ಯಂತ ಅಪ್ರಜಾತಾಂತ್ರಿಕವಾಗಿ ಮತ್ತು ನಿಯಮಗಳನ್ನು ಗಾಳಿ ತೂರಿ ರಾಜ್ಯಗಳ ವ್ಯಾಪ್ತಿಯಲ್ಲಿ ಬರುವ ಸಹವರ್ತಿ ಪಟ್ಟಿಯನ್ನು ಕಡೆಗಣಿಸಿ ಈ ಕೋಡಿಫಿಕೇಶನ್‌ ಅನ್ನು ಕಾರ್ಮಿಕರ ಮೇಲೆ ಹೇರಲಾಗಿದೆ ಎಂದು ಮುಖಂಡರು ಟೀಕಿಸಿದರು.

ಜುಲೈ 23ರಂದು ವೇತನ ಮಸೂದೆ ಮತ್ತು ಔದ್ಯೋಗಿಕ ರಕ್ಷಣೆ, ಆರೋಗ್ಯ ಮತ್ತು ಕಾರ್ಯಸ್ಥಳದ ಸ್ಥಿತಿಗತಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದೆ. ಈ ಎರಡೂ ಮಸೂದೆಗಳನ್ನು ವಿರೋಧ ಪಕ್ಷಗಳ ಆಕ್ಷೇಪಗಳು ಮತ್ತು ಹಲವಾರು ಕರಾರುಗಳನ್ನು ಪರಿಗಣಿಸಿ ಕಾರ್ಮಿಕರ ಹಕ್ಕುಗಳನ್ನು ಕಡಿತಗೊಳಿಸಿವೆ ಮತ್ತು ಕಾರ್ಮಿಕರ ಹಿತಾಸಕ್ತಿಯ ಕುರಿತ ಕೇಂದ್ರ ಕಾರ್ಮಿಕ ಸಂಘಟನೆಗಳ ಆಕ್ಷೇಪಣೆಗಳನ್ನು ಪೂರ್ವಾಗ್ರಹಗಳಿಂದ ನೋಡಲಾಗಿದೆ. ಈ ಮಸೂದೆಗಳಲ್ಲಿ ಹೇಳಿಕೊಳ್ಳಲಾಗಿರುವುದಕ್ಕೆ ತದ್ವಿರುದ್ಧವಾಗಿ ಕೇವಲ ಒಂದು ಕಂಪನಿಯಲ್ಲಿರಬೇಕಾದ ಕನಿಷ್ಠ ಕಾರ್ಮಿಕರ ಸಂಖ್ಯೆಯನ್ನು ಏರಿಸುವುದರಿಂದಾಗಿ ಬಹುತೇಕ ಕಾರ್ಮಿಕರು ಹಲವಾರು ಕಾರ್ಮಿಕ ಕಾನೂನುಗಳ ಪ್ರಯೋಜನ ಪಡೆಯುವಂತೆ ಮಾಡಲಾಗಿದೆ ಎಂದು ಆರೋಪಿಸಿದರು.

ಟ್ರೇಡ್‌ ಯೂನಿಯನ್ನುಗಳ ಒಬ್ಬ ಪ್ರತಿನಿಧಿಯನ್ನು ನೇಮಕ ಮಾಡಿಕೊಳ್ಳದೇ ಕೇಂದ್ರ ಸರ್ಕಾರವು ರಾಷ್ಟ್ರೀಯ ಕನಿಷ್ಠ ವೇತನ ನಿಗದಿಪಡಿಸಲು ರೂಪಿಸಿದ್ದ ತಜ್ಞರ ಸಮಿತಿಯೂ ಈ ಶಿಫಾರಸುಗಳ ವಿರುದ್ಧವಾಗಿ ಮುಂದುವರಿಯಿತು. ಸಾಲದೆಂಬಂತೆ 7ನೇ ವೇತನ ಆಯೋಗವು 1 ಜನವರಿ 2016ರಿಂದ ಜಾರಿಗೆ ಬರುವಂತೆ ಕನಿಷ್ಠ ವೇತನವನ್ನು ₹ 18 ಸಾವಿರ ಎಂದು ಘೋಷಿಸಿದಾಗಲೂ ಕೇಂದ್ರ ಕಾರ್ಮಿಕ ಸಚಿವರು ಜುಲೈ 10ರಂದು ರಾಷ್ಟ್ರೀಯ ಕನಿಷ್ಠ ವೇತನವನ್ನು ಮಾಸಿಕ ಕೇವಲ ₹ 4628 ಎಂದು ಘೋಷಿಸಿದ್ದಾರೆ ಎಂದರು.

ಔದ್ಯೋಗಿಕ ರಕ್ಷಣೆ, ಆರೋಗ್ಯ ಮತ್ತು ಕಾರ್ಯಸ್ಥಳದ ಸ್ಥಿತಿಗತಿ ಮಸೂದೆಯನ್ನು ಈಗಿರುವ 13 ಪ್ರತ್ಯೇಕ ಕಾರ್ಮಿಕ ಕಾನೂನುಗಳ ಬದಲಾಗಿ ಜಾರಿಗೆ ತರಲಾಗಿದೆ. ಇದು 10ಕ್ಕಿಂತ ಹೆಚ್ಚು ಕೆಲಸಗಾರರಿರುವ ಉದ್ದಿಮೆಗಳಿಗೆ ಮಾತ್ರ ಅನ್ವಯವಾಗುವುದರಿಂದ ಅಸಂಘಟಿತ ವಲಯ, ಹೊರಗುತ್ತಿಗೆ ಮತ್ತು ಗುಡಿ ಕೈಗಾರಿಕೆಗಳಲ್ಲಿ ದುಡಿಯುವ ದೇಶದ ಶೇ 90ಕ್ಕೂ ಹೆಚ್ಚು ಕಾರ್ಮಿಕರು ಈ ಮಸೂದೆಯ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಈಗಿರುವ 13 ಕಾನೂನುಗಳು ಸೇಲ್ಸ್, ಪ್ರಮೋಷನ್‌, ಗಣಿ, ಬೀಡಿ ಉದ್ಯಮ, ಕಟ್ಟಡ ನಿರ್ಮಾಣ, ಪತ್ರಿಕೋದ್ಯಮದಂತಹ ಒಂದಕ್ಕೊಂದು ಭಿನ್ನವಾದ ಕ್ಷೇತ್ರಗಳ ಕೆಲಸಗಾರರ ಕುರಿತ ಅಂಶಗಳತ್ತ ಪ್ರತ್ಯೇಕವಾಗಿ ಗಮನ ಹರಿಸಲು ರೂಪಿಸಲ್ಪಟ್ಟಿದ್ದವು. ಆದರೆ, ಈಗ ಜಾರಿಗೆ ತರಲು ಹೊರಟಿರುವ ಮಸೂದೆಯು ಈ ಹಿಂದೆ ಅನುಭವಿಸುತ್ತಿದ್ದ ಸವಲತ್ತುಗಳನ್ನು ಅವರಿಂದ ಕಿತ್ತುಕೊಂಡು ಮಾಲೀಕರಿಗೆ ಪ್ರಯೋಜನವಾಗುವ ಒಂದಷ್ಟು ಕಾನೂನುಗಳನ್ನು ಕಾರ್ಮಿಕರ ಮೇಲೆ ಹೇರುವ ಮೂಲಕ ಕಾರ್ಪೋರೇಟ್‌ ಧಣಿಗಳ ಸೇವೆಯಲ್ಲಿ ಕೇಂದ್ರ ಬಿಜೆಪಿ ಸರ್ಕಾರ ನಿರತವಾಗಿದೆ ಎಂದು ಹರಿಹಾಯ್ದರು.

ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ತನ್ನ ಭಾರಿ ಬಹುಮತದ ಲಾಭ ಪಡೆದು 2014ರಿಂದಲೂ ದೇಶದ ಸಾರಿಗೆ ಕಾರ್ಮಿಕರ ಸಂಘಗಳು ವಿರೋಧಿಸುತ್ತಲೇ ಬಂದಿರುವ ಮೋಟಾರು ವಾಹನ ಮಸೂದೆಯನ್ನು ಅಂಗೀಕರಿಸಿದೆ. ಇವೆಲ್ಲವೂ ‘ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್’ ಎಂಏಬ ಬಣ್ಣಬಣ್ಣದ ಪರದೆಯ ಹಿಂದೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು ತರುತ್ತಿರುವ ಜನವಿರೋಧಿ ನೀತಿಗಳ ಸ್ಪಷ್ಟ ನಿದರ್ಶನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಆಲ್‌ ಇಂಡಿಯಾ ಯುನೈಟೆಡ್‌ ಟ್ರೇಡ್‌ ಯೂನಿಯನ್‌ ಸೆಂಟರ್‌ (ಎಐಯುಟಿಯುಸಿ)ನ ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ಎಂ.ಜಿ., ಸೆಂಟರ್ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌ (ಸಿಐಟಿಯು)ನ ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್‌ ಅಶ್ಪಾಖ್‌, ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ (ಎಐಟಿಯುಸಿ)ನ ಜಿಲ್ಲಾ ಅಧ್ಯಕ್ಷ ಪ್ರಭುದೇವ ಯಳಸಂಗಿ, ಕಾರ್ಮಿಕ ಮುಖಂಡರಾದ ಎಸ್‌.ಎಂ.ಶರ್ಮಾ, ವಿ.ಜಿ.ದೇಸಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT