ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಬೂತ್‌ನಲ್ಲಿ ಕನಿಷ್ಠ 10 ನಿಷ್ಠಾವಂತ ಕಾರ್ಯಕರ್ತರು ಇರಲಿ; ಎಚ್.ಡಿ. ದೇವೇಗೌಡ

Last Updated 5 ಜನವರಿ 2022, 5:19 IST
ಅಕ್ಷರ ಗಾತ್ರ

ಕಲಬುರಗಿ:‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಟಿಕೆಟ್‌ ಬೇಕಾದರೆ ಪ್ರತಿ ಬೂತ್‌ನಲ್ಲಿ ಕನಿಷ್ಠ 10 ನಿಷ್ಠಾವಂತ ಕಾರ್ಯಕರ್ತರನ್ನು ಹೊಂದಿರಬೇಕು’ ಎಂದುಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ಜೆಡಿಎಸ್‌ ಸದಸ್ಯತ್ವ ಅಭಿಯಾನ ಮತ್ತ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೋಂದಣಿ ಮಾಡಿಸಿ, ಹೊಸಬರನ್ನು ಪಕ್ಷಕ್ಕೆ ಕರೆತನ್ನಿ. ಪ್ರತಿ ಬೂತ್‌ನಲ್ಲಿ ನಾಲ್ವರು ಪ್ರಾಮಾಣಿಕ ಕಾರ್ಯಕರ್ತರಿದ್ದರೆ, ಅಕ್ರಮಗಳ ವಿರುದ್ಧ ಹೋರಾಟ ಮಾಡುತ್ತಾರೆ. ಪಕ್ಷದ ಅಭ್ಯರ್ಥಿಯ ಪರವಾಗಿ ದುಡಿಯುತ್ತಾರೆ. ಮುಂದಿನ ಚುನಾವಣೆಯನಿಮ್ಮ ಟಿಕೆಟ್‌, ನಿಮ್ಮ ಮತಕ್ಷೇತ್ರದಲ್ಲಿ ಎಷ್ಟು ಜನರಿಗೆ ಸದಸ್ಯತ್ವದ ನೋಂದಣಿ ಮಾಡಿಸಿದ್ದಾರೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ’ ಎಂದು ತಿಳಿಸಿದರು.

‘ಎಚ್‌.ಡಿ. ಕುಮಾರಸ್ವಾಮಿ ಎರಡುಬಾರಿ ಮುಖ್ಯಮಂತ್ರಿ ಆಗಿದ್ದಾಗ ಜೆಡಿಎಸ್ ಶೇ 20ರಷ್ಟು ಮತ ಪಡೆದಿತ್ತು. ಈಗಲೂ ಪಕ್ಷ ರಾಜ್ಯದಾದ್ಯಂತ ಅಸ್ತಿತ್ವ ಉಳಿಸಿಕೊಂಡಿದೆ. ಈಚೆಗೆ ಮುಗಿದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‌ ನಾಲ್ಕು ಕಡೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿದೆ. ಹಲವು ಕಡೆ ನಮ್ಮ ಬೆಂಬಲ ಇಲ್ಲದೇ ಬೇರೆಯವರೂ ಅಧಿಕಾರ ಪಡೆಯಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಒಂದು ಕಾಲದಲ್ಲಿ ಕಲಬುರಗಿ ಜೆಡಿಎಸ್‌ನ ಭದ್ರ ಕೋಟೆಯಾಗಿತ್ತು. ಜನತಾದಳ ಎರಡು ಭಾಗವಾದಾಗಲೂ ಜಿಲ್ಲೆಯಲ್ಲಿ ಆರು ಸ್ಥಾನಗಳನ್ನು ಗೆದ್ದಿದ್ದೇವು. ಈಗಲೂ ಪಕ್ಷಕ್ಕೆ ಇಲ್ಲಿ ಭವಿಷ್ಯವಿದೆ’ ಎಂದೂ ಹೇಳಿದರು.

‘2023ರ ವಿಧಾನಸಭಾ ಚುನಾವಣೆ ಪಕ್ಷದ ಮುಖಂಡರು, ಸದಸ್ಯರು, ಕಾರ್ಯಕರ್ತರ ಪಾಲಿಗೆ ಅಳಿವು– ಉಳಿವಿನ ಪ್ರಶ್ನೆಯಾಗಿದೆ. ಉತ್ತರ ಕರ್ನಾಟಕ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರನ್ನು ಆಯ್ಕೆ ಮಾಡಿದಾಗ ಮಾತ್ರ, ಮಿಷನ್–123 ಗುರಿ ಮುಟ್ಟಲು ಸಾಧ್ಯ’ ಎಂದು ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದರು.

‘ಚುನಾವಣೆ ಬಂದಾಗ ಮಾತ್ರ ಬೂತ್‌ಗಳಲ್ಲಿ ಪಕ್ಷದ ಕಾರ್ಯಕರ್ತರು ಯಾರಿದ್ದಾರೆ ಎಂದು ಹುಡುಕುತ್ತೇವೆ. ಪಕ್ಷ ಸಂಘಟನೆಗೆ ಒತ್ತುಕೊಡುತ್ತಿಲ್ಲ. ಮಿಷನ್– 123 ತಲುಪಬೇಕಾದರೆ ಪಕ್ಷವನ್ನು ಬೂತ್ ಮಟ್ಟದಿಂದ ಕಟ್ಟಬೇಕಿದೆ. ಅದನ್ನು ಈಗಿನಿಂದಲೇ ಆರಂಭಿಸಬೇಕು’ ಎಂದರು.

ಪಕ್ಷ ಸೇರ್ಪಡೆಯಾದ ಕಾರ್ಯಕರ್ತರಿಗೆ ಸದಸ್ಯತ್ವ ನೋಂದಣಿ ಕಾರ್ಡ್‌ಗಳ ವಿತರಣೆ ಮಾಡಲಾಯಿತು. ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ, ಉಪಾಧ್ಯಕ್ಷ ಬಸವರಾಜು ಬಿರಬಿಟ್ಟಿ, ಮಹಿಳಾ ಮುಖಂಡರಾದ ಮಹೇಶ್ವರಿ ವಾಲೆ, ಉದ್ಯಮಿ ಅಶೋಕ ಗುತ್ತೇದಾರ, ಜಿಲ್ಲಾ ವಕ್ತಾರ ಮನೋಹರ್ ಪೋತದಾರ, ಯುವ ಮುಖಂಡರಾದ ಬಾಲರಾಜ ಗುತ್ತೇದಾರ, ಶಿವಕುಮಾರ ನಾಟೀಕರ್, ಆಲಂ ಇನಾಂದಾರ, ಆನಂದ ಪಾಟೀಲ, ದೇವೇಂದ್ರ ಆಸ್ಥಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT