ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಮಾಸಾಶನ ಮರು ಆರಂಭಿಸಲು ಆಗ್ರಹ

ಜೆಡಿಎಸ್‌ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
Last Updated 2 ಆಗಸ್ಟ್ 2021, 13:05 IST
ಅಕ್ಷರ ಗಾತ್ರ

ಕಲಬುರ್ಗಿ: ಅಂಗವಿಕಲರು, ವಿಧವೆಯರು, ವೃದ್ಧಾಪ್ಯ ವೇತನ ಫಲಾನುಭವಿಗಳಲ್ಲಿ ಹಲವರಿಗೆ ಈಗಲೂ ಮಾಸಾಶನ ಬರುತ್ತಿಲ್ಲ. ಇದರಲ್ಲಿ ಇರುವ ತಾಂತ್ರಿಕ ದೋಷಗಳನ್ನು ನಿವಾರಿಸಿ ನಿರಂತರವಾಗಿ ಮಾಸಾಶನ ಮಂಜೂರು ಮಾಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಡಿಎಸ್‌ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಸಹಕಾರ ಸಂಘಗಳಲ್ಲಿ ರೈತರು 2018–19ನೇ ಸಾಲಿನಲ್ಲಿ ಪಡೆದ ಬೆಳೆಸಾಲವನ್ನು ಸರ್ಕಾರ ಮನ್ನಾ ಮಾಡಿದೆ. ಇತರ ಜಿಲ್ಲೆಗಳಲ್ಲಿ ಈಗಾಗಲೇ ಸಾಲಮರುಪಾವತಿಯಾಗಿ, ಹೊಸ ಸಾಲವನ್ನೂ ನೀಡಲಾಗುತ್ತಿದೆ. ಆದರೆ, ಕಲಬುರ್ಗಿ ಜಿಲ್ಲೆಯ ರೈತರಿಗೆ ಅನ್ಯಾಯವಾಗಿದೆ. ರಾಜ್ಯ ಸರ್ಕಾರವು ಕೂಡಲೇ ಸಾಲ ಮನ್ನಾದ ಹಣ ಬಿಡುಗಡೆ ಮಾಡಬೇಕು. ಹೊಸ ಸಾಲ ವಿತರಣೆಗೆ ಅವಕಾಶ ನೀಡಬೇಕು ಎಂದು ಮುಖಂಡರು ಘೋಷಣೆ ಕೂಗಿದರು.

ಕೆಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಮನೆಗಳು ಮಂಜೂರಾಗಿ ಎರಡು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಇದಕ್ಕೆ ಬೇಕಾದ ಪೂರ್ಣ ಹಣ ನೀಡದ ಕಾರಣ ಕೆಲಸ ಅರ್ಧಕ್ಕೆ ನಿಂತಿದೆ. ಪರಿಣಾಮ ಹಲವಾರು ಕುಟುಂಬಗಳು ಇನ್ನೂ ಗುಡಿಸಲಲ್ಲೇ ಬದುಕುವಂತಾಗಿದೆ. ಕೂಡಲೇ ಈ ಹಣ ನೀಡಿ ಮನೆಗಳನ್ನು ಪೂರ್ಣಗೊಳಿಸಬೇಕು ಎಂದೂ ಆಗ್ರಹಿಸಿದರು.

ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ಮನೆಗಳಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಹಾಕಿ ನಾಲ್ಕು ವರ್ಷ ಕಳೆದರೂ ಬಡವರಿಗೆ ಸೂರು ಒದಗಿಸಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರ ವಸತಿ ರಹಿತ ಬಡವರಿಗೆ ಮನೆ ನಿರ್ಮಿಸಿಕೊಡುವ ಮಹತ್ವದ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ. ಇದು ಖಂಡನಾರ್ಹ ಎಂದೂ ಕಿಡಿ ಕಾರಿದರು.

ಜಿಲ್ಲೆಯ ವಿದ್ಯಾವಂತ ನಿರುದ್ಯೋಗಿ ಯುವಕ– ಯುವತಿಯರು ಸ್ವಯಂ ಉದ್ಯೋಗ ಕೈಗೊಳ್ಳಲು, ಸಣ್ಣ ವ್ಯಾಪಾರ ಮಾಡಲುವಿವಿಧ ನಿಗಮ ಹಾಗೂ ಮಹಿಳಾ ಸ್ವ ಸಹಾಯ ಸಂಘಗಳ ಮೂಲಕ ಸಾಲ ಸೌಲಭ್ಯ ನೀಡುವ ಯೋಜನೆಯನ್ನು ಮರು ಆರಂಭ ಮಾಡಬೇಕು. ಇದಕ್ಕೆ ಹಣಕಾಸಿನ ಕೊರತೆಯ ನೆಪ ಹೇಳಕೂಡದು ಎಂದೂ ಆಗ್ರಹಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಮನವಿಯಲ್ಲಿಜಿಲ್ಲಾಧಿಕಾರಿ ಮೂಲಕ ನೀಡಲಾಯಿತು. ಜೆಡಿಎಸ್‌ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಲೀಂ ಇನಾಮದಾರ್, ಮಹಾಪ್ರಧಾನ ಕಾರ್ಯದರ್ಶಿ ಶಾಮರಾವ್‌ ಸೂರನ್, ವಕ್ತಾರ ಮನೋಹರ ಪೋದ್ದಾರ್,ಮುಖಂಡರಾದ ಸಂಜೀವನ್ ಯಾಕಾಪುರ, ಕೃಷ್ಣಾ ರೆಡ್ಡಿ, ಶಂಕರ ಕಟ್ಟಿಸಂಗಾವಿ, ಜಗದೀಶ ನಾಯಕ, ಚಂದ್ರಕಾಂತ ಮೋರೆ, ಸುನಿಲ ಬಿರಾದಾರ, ದೇವಿಂದ್ರ ಹಸನಾಪುರ, ಸಿದ್ಧಪ್ಪ ಶ್ರೀಗಿರಿ, ಗುಲಾಮ ರಸೂಲ್, ಮೊಹ್ಮದ್ ಇಬ್ರಾಹಿಂ, ಅಬ್ದುಲ್ ನಬಿ, ಖಾಜಾ ಪಟೇಲ್, ಶ್ರೀಶೈಲ ಲಾವಣಿ, ಸಂಜುಕುಮಾರ ಮಡಕಿ, ಸುವರ್ಣ, ವಿಶ್ವನಾಥ ಚಿತ್ತಾಪೂರಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT