ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಭ್ಯರ್ಥಿಯಿಂದ ಹೈಕಮಾಂಡ್‌ಗೆ ಭಾರಿ ಮೊತ್ತದ ಹಣ: ಕುಮಾರಸ್ವಾಮಿ

Last Updated 25 ಮಾರ್ಚ್ 2021, 6:30 IST
ಅಕ್ಷರ ಗಾತ್ರ

ಕಲಬುರ್ಗಿ: ಬಸವ ಕಲ್ಯಾಣ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸಂಭಾವ್ಯ ಅಭ್ಯರ್ಥಿಯೊಬ್ಬರು ಬಿಜೆಪಿ ಹೈಕಮಾಂಡ್‌ಗೆ ಭಾರಿ ಮೊತ್ತದ ಹಣ ಸಂದಾಯ ಮಾಡಿರುವ ಮಾಹಿತಿ ಇದೆ ಎಂದು ಜೆಡಿಎಸ್ ವರಿಷ್ಠ, ಶಾಸಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರಿಂದಾಗಿ ಅಲ್ಲಿ ಕೆಲಸ ಮಾಡಿರುವ ಕಾರ್ಯಕರ್ತರಿಗೆ ಅಸಮಾಧಾನವಾಗಿದೆ. ಭಾರಿ ಹಣಕಾಸಿನ ವಿಚಾರ ಇರುವುದರಿಂದ ಬಿಜೆಪಿ ತನ್ನ ಅಭ್ಯರ್ಥಿಯ ಹೆಸರನ್ನು ಇನ್ನೂ ಪ್ರಕಟಿಸಿಲ್ಲ ಎಂದರು‌.

ಪಕ್ಷದಿಂದ ಒಬ್ಬರೇ ಅಭ್ಯರ್ಥಿ: ರಾಜ್ಯದಲ್ಲಿ ಎರಡು ವಿಧಾನಸಭೆ, ಒಂದು ಲೋಕಸಭೆ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದ್ದರೂ ನಾವು ಬಸವ ಕಲ್ಯಾಣದಲ್ಲಿ ಮಾತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ನಮ್ಮ ಎಲ್ಲ ಶಕ್ತಿಯನ್ನು ಈ ಅಭ್ಯರ್ಥಿಯನ್ನು ಗೆಲ್ಲಿಸಲು ವಿನಿಯೋಗಿಸುತ್ತಿದ್ದೇವೆ ಎಂದರು.

ಜನರ ಸಮಸ್ಯೆಗಳ ಚರ್ಚೆ ಇಲ್ಲ: ಅಧಿವೇಶನದಲ್ಲಿ ‌ಕೆಲಸಕ್ಕೆ ಬಾರದ ಸಿ.ಡಿ. ವಿಚಾರವನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಚರ್ಚೆ ಮಾಡಿವೆ. ಆದರೆ ಜನಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆಯೇ ನಡೆದಿಲ್ಲ. ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯುವುದು ಸಾಧ್ಯವಾಗುತ್ತಿಲ್ಲ. ಕುತಂತ್ರದಿಂದ ‌ಅಧಿಕಾರಕ್ಕೆ ಬಂದವರಿಂದ ಕೇಂದ್ರದಿಂದ ಬರಬೇಕಾದ ಅನುದಾನವನ್ನೂ ತರಲು ಆಗುತ್ತಿಲ್ಲ ಎಂದು ಟೀಕಿಸಿದರು.

ಪ್ರಮುಖ ವಿರೋಧ ಪಕ್ಷ‌ ಕಾಂಗ್ರೆಸ್ ಈ ವಿಚಾರಗಳ ಬಗ್ಗೆ ಚರ್ಚೆ ನಡೆಸಬೇಕಿತ್ತು.‌ ಆದರೆ ಸಿದ್ದರಾಮಯ್ಯ ಅವರು ಎಷ್ಟು ಪಂಚೆ ಖರೀದಿಸಿದರು. ಅವುಗಳ ಬಣ್ಣ ಯಾವುದು ಎಂಬುದರ ಬಗ್ಗೆಯೇ ಚರ್ಚೆ ನಡೆದಿರುವುದು ವಿಷಾದಕರ ಎಂದರು.

ಯುವತಿ ಸಭಾಧ್ಯಕ್ಷರ ಮುಂದೆ ಬರಲಿ: ರಮೇಶ ಜಾರಕಿಹೊಳಿ ಸಿ.ಡಿ. ಪ್ರಕರಣದಲ್ಲಿ ಸಂತ್ರಸ್ತ ಯುವತಿಗೆ ರಕ್ಷಣೆ ಬೇಕಿದ್ದರೆ ಸಭಾಧ್ಯಕ್ಷರ ಮುಂದೆ ಬಂದು ಮನವಿ ಮಾಡಿಕೊಳ್ಳಲಿ. ಅದನ್ನು ಬಿಟ್ಟು ಎಲ್ಲೆಲ್ಲಿಂದಲೋ ವಿಡಿಯೊ ‌ಮಾಡಿ ಹೇಳಿಕೆ ಕೊಟ್ಟರೆ ಹೇಗೆ ಎಂದು ಪ್ರಶ್ನಿಸಿದರು.

ಬಸವಕಲ್ಯಾಣಕ್ಕೆ ಆದ್ಯತೆ: ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಸವ ಕಲ್ಯಾಣದ ಕೆರೆ ತುಂಬುವ ಯೋಜನೆಗೆ ಅಭಿವೃದ್ಧಿಗೆ ₹ 75 ಕೋಟಿ ಕೊಟ್ಟಿದ್ದೆ. ಅದನ್ನು ನಂತರ ಬಂದ ಬಿಜೆಪಿ ಸರ್ಕಾರ ತಡೆ ಹಿಡಿಯಿತು. ಅಲ್ಲದೇ, ಸಾಲ ಮನ್ನಾ ಯೋಜನೆಯಲ್ಲಿ ಒಟ್ಟು ₹ 89 ಕೋಟಿ ಹಣ ಕ್ಷೇತ್ರದ ‌ಜನರಿಗೆ ತಲುಪಿದೆ ಎಂದು ಹೇಳಿದರು.

ಪ್ರಜಾಪ್ರಭುತ್ವ ‌ನಾಶ ಮಾಡುತ್ತಿರುವಕೇಂದ್ರ: ಕೇಂದ್ರ ಸರ್ಕಾರ ರಾಜ್ಯದ ಎಲ್ಲ ಅಧಿಕಾರವನ್ನು ಕಿತ್ತುಕೊಳ್ಳುವ ಮೂಲಕ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದೆ. ಬದ್ಧತಾ ವೆಚ್ಚಕ್ಕೂ ಸರ್ಕಾರದ ಬಳಿ ಹಣ ಇಲ್ಲದಂತೆ ಮಾಡಿದೆ. 15ನೇ ಹಣಕಾಸು ಆಯೋಗದ ಹಣವೂ ಬಂದಿಲ್ಲ ಎಂದು ಕುಮಾರಸ್ವಾಮಿ ‌ಟೀಕಿಸಿದರು.

ನರೇಂದ್ರ ಮೋದಿ ಅವರು ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ನೀಡಿದಂತೆ ಸಿದ್ದರಾಮಯ್ಯ ಅವರೂ 1 ಲಕ್ಷ ಗ್ಯಾಸ್ ಒಲೆಗಳನ್ನು ಖರೀದಿಸಿದರು. ಅದನ್ನು ಯಾರಿಗಾದರೂ ಹಂಚಿದ್ದಾರೆಯೇ ಎಂದು ಪ್ರಶ್ನಿಸಿದರು.

ಶಾಸಕ ಬಂಡೆಪ್ಪ ಕಾಶೆಂಪೂರ ಮಾತನಾಡಿ, ಕಲ್ಯಾಣ ಕರ್ನಾಟಕಕ್ಕೆ ಮಂಜೂರಾದ ಯೋಜನೆಗಳನ್ನು ರದ್ದುಗೊಳಿಸಿದ, ಇಲ್ಲವೇ ಬೇರೆಡೆ ಸ್ಥಳಾಂತರಗೊಳಿಸಿದ ಬಗ್ಗೆ ಚರ್ಚಿಸಲು ಸದನದಲ್ಲಿ ಅವಕಾಶ ಕೋರಿದರೂ ಸಮಯ ಕೊಡಲಿಲ್ಲ ಎಂದು ಆರೋಪಿಸಿದರು.

ಸಿಂಧನೂರ ಶಾಸಕ ವೆಂಕಟರಾವ್ ನಾಡಗೌಡ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ, ಮುಖಂಡರಾದ ನಾಸಿರ್ ಹುಸೇನ್ ಉಸ್ತಾದ್, ತಿಮ್ಮಯ್ಯ ಪುರ್ಲೆ, ಶಿವಕುಮಾರ್ ‌ನಾಟೀಕಾರ, ಕೃಷ್ಣಾರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT