ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಮಿದುಳು ಜ್ವರ ತಡೆಗೆ ಅಭಿಯಾನ

Last Updated 4 ಡಿಸೆಂಬರ್ 2022, 6:17 IST
ಅಕ್ಷರ ಗಾತ್ರ

ಕಲಬುರಗಿ: ‘ಜಪಾನಿಸ್ ಎನ್‌ಸೆಫಲೈಟಿಸ್ ವೈರಾಣುವಿನಿಂದ ಬರುವ ಮಿದುಳು ಜ್ವರ ಕಾಯಿಲೆ ತಡೆಯಲು ಡಿಸೆಂಬರ್‌ 5ರಿಂದ 25ರವರೆಗೆ ಜೆ.ಇ ಲಸಿಕೆ ಅಭಿಯಾನ ನಡೆಸಲಾಗುವುದು’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಜಶೇಖರ ಮಾಲಿ ಹೇಳಿದರು.

‘ಈ ಮಾರಣಾಂತಿಕ ವೈರಾಣುವಿನಿಂದ ಮಕ್ಕಳನ್ನು ಕಾಪಾಡಲು ಪೋಷಕರು 1ರಿಂದ 15 ವರ್ಷದ ಒಳಗಿನ ತಮ್ಮ ಮಕ್ಕಳಿಗೆ ಜೆ.ಇ ಲಸಿಕೆ ಹಾಕಿಸಬೇಕು. ಈ ಕಾಯಿಲೆಗೆ ನಿಖರ ಚಿಕಿತ್ಸೆ ಇಲ್ಲ. ಹೀಗಾಗಿ, ಲಸಿಕೆ ಒಂದೇ ಮದ್ದು’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಜಿಲ್ಲೆಯ ಎಲ್ಲಾ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಗುರುವಾರ, ಸರ್ಕಾರಿ ರಜೆ ದಿನ ಹಾಗೂ ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಲಸಿಕೆ ಹಾಕಲಾಗುತ್ತದೆ. ಎರಡು ಹಂತಗಳಲ್ಲಿ 9ರಿಂದ 12 ತಿಂಗಳಲ್ಲಿ ಮೊದಲ ಡೋಸ್ ಹಾಗೂ 16–24 ತಿಂಗಳಲ್ಲಿ ಎರಡನೇ ಡೋಸ್ ಕೊಡಲಾಗುತ್ತದೆ’ ಎಂದರು.

‘ಜಿಲ್ಲೆಯಲ್ಲಿ 1ರಿಂದ 6 ವರ್ಷದವರೆಗೆ 1,88,927 ಮತ್ತು 6ರಿಂದ 15 ವರ್ಷದವರೆಗೆ 5,28,745 ಮಕ್ಕಳು ಇದ್ದಾರೆ. ಶಾಲೆಯಿಂದ ಹೊರಗುಳಿದ6,022 ಮಕ್ಕಳು ಸೇರಿ ಒಟ್ಟು 7,20,188 ಫಲಾನುಭವಿಗಳನ್ನು ಗುರುತಿಸಲಾಗಿದೆ. 590 ಲಸಿಕಾ ತಂಡಗಳು ಕಾರ್ಯನಿರ್ವಹಿಸಲಿದ್ದು, 148 ಮೇಲ್ವಿಚಾರಕ ತಂಡಗಳ ನಿಯೋಜನೆ ಮಾಡಲಾಗಿದೆ. 3,033 ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಶ್ರಮಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಸಾವಿರಾರು ಸ್ವಯಂ ಸೇವಕರು ಸಹ ಸಹಕಾರ ನೀಡಲಿದ್ದು, ಶಾಲೆಗಳಿಂದ ಹೊರಗೆ ಉಳಿದಿರುವ ಮಕ್ಕಳಿಗೆ ಲಸಿಕೆ ಹಾಕಲು ಅಗತ್ಯ ಕ್ರಮವಹಿಸಲಾಗಿದೆ. ಜಿಲ್ಲೆಯಲ್ಲಿ ಕಳೆದ ವರ್ಷ ಎರಡು ಪ್ರಕರಣ ಪತ್ತೆಯಾಗಿದ್ದು, ಯಾದಗಿರಿಯಲ್ಲಿ ಸಹ ಕಂಡುಬಂದಿತ್ತು’ ಎಂದರು.

ವಿಶ್ವ ಆರೋಗ್ಯ ಸಂಸ್ಥೆಯ ಸಮಾಲೋಚಕ ಡಾ.ಅನಿಲ್‌ಕುಮಾರ್ ತಾಳಿಕೋಟಿ ಮಾತನಾಡಿ, ‘ಹೆಚ್ಚು ಭತ್ತ ಬೆಳೆಯುವ ಪ್ರದೇಶಗಳಲ್ಲಿ ಈ ಕಾಯಿಲೆ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತದೆ. ವಲಸೆ ಹಕ್ಕಿಗಳು, ಹಂದಿಗಳಲ್ಲಿ ಸಹ ಜೆ.ಇ ಸೋಂಕು ಕಾಣಿಸಿಕೊಳ್ಳುತ್ತದೆ. ಸೋಂಕಿತ ಪ್ರಾಣಿ ಪಕ್ಷಿಗಳಿಗೆ ಕಚ್ಚಿದ ಕೊಲೆಕ್ಸ ಸೊಳ್ಳೆಗಳು ಮನುಷ್ಯರಿಗೆ ಕಚ್ಚಿದರೆ ಸೋಂಕು ಹರಡುತ್ತದೆ’ ಎಂದು ವಿವರಿಸಿದರು.

‘ಮಿದುಳು ಜ್ವರದ ಬಾಧೆಗೆ ತುತ್ತಾದವರಲ್ಲಿ ತಲೆನೋವು, ಜ್ವರ, ಸುಸ್ತು, ಮೈಕೈಯಿ ನೋವಿನಂತಹ ಸಾಮಾನ್ಯ ಲಕ್ಷಣಗಳು ಕಂಡುಬರುತ್ತವೆ. ಈ ಬಳಿಕ ವಿಪರೀತ ಜ್ವರ, ಕುತ್ತಿಗೆ ನೋವು, ವಾಂತಿ, ಪ್ಯಾರಲಿಸಿಸ್‌, ಮಾತನಾಡಲು ಸಹ ಆಗುವುದಿಲ್ಲ. ಕಾಯಿಲೆಯ ಪ್ರಮಾಣ ತೀವ್ರವಾದರೆ ನರದೌರ್ಬಲ್ಯ, ಬುದ್ಧಿಮಾಂದ್ಯತೆ, ಶಾಶ್ವತ ಅಂಗವೈಕಲ್ಯ ಕಾಣಿಸಿಕೊಳ್ಳುತ್ತದೆ’ ಎಂದರು.

ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಪ್ರಭುಲಿಂಗ್ ಮಾನಕರ್ ಮಾತನಾಡಿ, ‘ಲಸಿಕೆ ಅಭಿಯನಾದ ಅಂಗವಾಗಿ ಡಿ.5ರ ಬೆಳಿಗ್ಗೆ 10.30ಕ್ಕೆ ಹಳೆ ಜೇವರ್ಗಿ ರಸ್ತೆಯ ಜೀವನ್‌ ಪ್ರಕಾಶ ಶಾಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT