ಶುಕ್ರವಾರ, ಅಕ್ಟೋಬರ್ 23, 2020
26 °C
ಜೇವರ್ಗಿ: 21,325 ಹೆಕ್ಟೇರ್ ಬೆಳೆ ಹಾನಿ, 190 ಜನರಿಗೆ ₹7 ಲಕ್ಷ ಪರಿಹಾರ

ಹೆಚ್ಚಿನ ಅನುದಾನಕ್ಕೆ ಶಾಸಕ ಡಾ.ಅಜಯಸಿಂಗ್ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೇವರ್ಗಿ: ತಾಲ್ಲೂಕಿನಲ್ಲಿ ಕಳೆದ ವಾರ ಸುರಿದ ಧಾರಾಕಾರ ಮಳೆಯಿಂದ ಬೆಳೆ ಹಾನಿಗೀಡಾದ ಜಮೀನುಗಳಿಗೆ ಶಾಸಕ ಡಾ.ಅಜಯಸಿಂಗ್ ಸೋಮವಾರ ಭೇಟಿ ನೀಡಿ ವೀಕ್ಷಿಸಿದರು.

ಮಂದೇವಾಲ, ನೇದಲಗಿ, ಗುಡೂರ (ಎಸ್.ಎನ್) ಗ್ರಾಮಗಳಿಗೆ ಭೇಟಿ ನೀಡಿದ ಅವರು ತಹಶೀಲ್ದಾರ್ ಸಿದರಾಯ ಭೋಸಗಿ ಅವರಿಂದ ಮಾಹಿತಿ ಪಡೆದುಕೊಂಡರು.

ನಂತರ ಮಾತನಾಡಿದ ಅವರು, ಜೇವರ್ಗಿ ತಾಲ್ಲೂಕಿನ ಜೇವರ್ಗಿ, ನೆಲೋಗಿ, ಆಂದೋಲಾ ಹೋಬಳಿಗಳಲ್ಲಿ ಒಟ್ಟು 21,325 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ ಪ್ರಮುಖ ಮುಂಗಾರು ಬೆಳೆಗಳಾದ ತೊಗರಿ, ಹತ್ತಿ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳು ಹಾನಿಗೀಡಾಗಿವೆ. 293 ಮನೆಗಳಿಗೆ ನೀರು ನುಗ್ಗಿದೆ. ಈಗಾಗಲೇ 190 ಮನೆಗಳಿಗೆ ತಲಾ ₹ 3,800 ರಂತೆ ಒಟ್ಟು ₹ 7.15 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದರು

331 ಮನೆಗಳು ಹಾನಿಗೀಡಾಗಿದ್ದು, ಈ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ಪರಿಹಾರಕ್ಕೆ ಮನವಿ: ಬೆಳೆ ಮತ್ತು ಮನೆ ಹಾನಿಗೀಡಾದವರಿಗೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ನಂತರ ಶಾಸಕರು ಗುಡೂರ (ಎಸ್.ಎನ್), ಮಯೂರ, ಮುರಗಾನೂರ, ಹಾಲಘತ್ತರಗಾ, ಬಿಲ್ಲಾಡ ಬಳ್ಳುಂಡಗಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಹಾನಿಗೀಡಾದ ಬೆಳೆಗಳ ಕುರಿತು ಕೃಷಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಶಾಸಕರೊಂದಿಗೆ ತಹಶೀಲ್ದಾರ್ ಸಿದರಾಯ ಭೋಸಗಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಬ್ಯಾಕೋಡ, ಮುಖಂಡರಾದ ಕಾಶಿರಾಯಗೌಡ ಯಲಗೋಡ, ಮಲ್ಲಣ್ಣಗೌಡ ನೇದಲಗಿ, ಸಿದ್ದಣ್ಣ ಮಯೂರ, ರಾಜಶೇಖರ ಚೂರಿ ಬಳ್ಳುಂಡಗಿ, ಕರೆಪ್ಪ ಕರಗೊಂಡ, ರಾವುತರಾಯ ಕಲ್ಲೂರ, ಶಿವಾನಂದ ಕಲ್ಲೂರ, ವಿಶ್ವನಾಥ ಬಿರಾದಾರ ಬಳ್ಳುಂಡಗಿ, ತಿಪ್ಪಣ್ಣ ನೇದಲಗಿ, ಖುರ್ಷಿದ್ ಅಲಿ ನೇದಲಗಿ, ಸುರೇಶ ಬೇಲೂರ, ಪರಶುರಾಮ ಪಾಟೀಲ, ದಿನೇಶ ಠಾಕೂರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.