ಮಂಗಳವಾರ, ಅಕ್ಟೋಬರ್ 20, 2020
21 °C
ಜೇವರ್ಗಿ ತಾಲ್ಲೂಕಿನಲ್ಲಿ 22,153 ಎಕರೆ ಬೆಳೆ ಮತ್ತು 331 ಮನೆಗಳಿಗೆ ಹಾನಿ

ಅತಿವೃಷ್ಟಿಯಿಂದ ಅನ್ನದಾತರು ಸಂಕಷ್ಟದಲ್ಲಿ

ವೆಂಕಟೇಶ ಅರ್.ಹರವಾಳ Updated:

ಅಕ್ಷರ ಗಾತ್ರ : | |

Prajavani

ಜೇವರ್ಗಿ: ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಯಿಂದ ಹಸಿರಿನಿಂದ ಕಂಗೊಳಿಸುತ್ತಿದ್ದ ಹತ್ತಿ, ತೊಗರಿ, ಮೆಕ್ಕೆಜೋಳ, ಹೆಸರು ಸೇರಿದಂತೆ ವಿವಿಧ ಬೆಳೆಗಳು ಭಾಗಶಃ ಹಾನಿಗೀಡಾಗಿವೆ. ಇದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನ ಜೇವರ್ಗಿ, ಆಂದೋಲಾ, ನೆಲೋಗಿ, ಯಡ್ರಾಮಿ, ಇಜೇರಿ ಹಾಗೂ ಜೇರಟಗಿ ಹೋಬಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಬೆಳೆಗಳು ನೀರಿನಲ್ಲಿ ನಿಂತಿದ್ದರಿಂದ ತೇವಾಂಶ ಹೆಚ್ಚಳವಾಗಿ ಹಳದಿ ಬಣ್ಣಕ್ಕೆ ತಿರುಗಿವೆ. ಕೊಳೆತು ಹೋಗುವ ಹಂತಕ್ಕೆ ತಲುಪಿವೆ.

‘ಸಣ್ಣ ರೈತರು ಸಾಲ ಮಾಡಿ ರಸಗೊಬ್ಬರ ಮತ್ತು ಬಿತ್ತನೆಬೀಜ ಖರೀದಿಸಿ ಬಿತ್ತನೆ ಮಾಡಿದ್ದರು. ಅತಿಯಾದ ಮಳೆಯಿಂದ ಬೆಳೆಗಳು ನೀರು ಪಾಲಾಗಿದ್ದರಿಂದ ಸಣ್ಣ ಮತ್ತು ಅತಿಸಣ್ಣ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಬೆಳೆ ಹಾನಿ ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ಧನ ವಿತರಿಸಬೇಕು’ ಎಂದು ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಘಟಕದ ಖಜಾಂಚಿ ಸಿದ್ಧರಾಮ ಹರವಾಳ ಆಗ್ರಹಿಸಿದ್ದಾರೆ.

‘ಮುಂಗಾರು ಮಳೆಯಿಂದ ಅಲ್ಪಾವಧಿ ಬೆಳೆಗಳಾದ ಉದ್ದು, ಹೆಸರು, ಮೆಕ್ಕೆಜೋಳ, ಎಳ್ಳು, ಸಜ್ಜೆ ನೀರು ಪಾಲಾಗಿವೆ. ಅತಿವೃಷ್ಟಿಯಿಂದ ತಾಲ್ಲೂಕಿನ ಪ್ರಮುಖ ಮುಂಗಾರು ಬೆಳೆಗಳಾದ ಹತ್ತಿ, ತೊಗರಿ ಹೂ ಮತ್ತು ಕಾಯಿ ಕಟ್ಟುವ ಹಂತದಲ್ಲಿ ಶೇ 15ರಷ್ಟು ಬೆಳೆಗಳು ನೆಲಕ್ಕೆ ಬೀಳುತ್ತಿವೆ. ಇದರಿಂದ ಇಳುವರಿ ಕಡಿಮೆಯಾಗಲಿದೆ’ ಎಂದು ನರಿಬೋಳ ಗ್ರಾಮದ ರೈತ ನಾಗಣ್ಣ ಗಡ್ಡದ ತಿಳಿಸಿದ್ದಾರೆ.

ಪರಿಹಾರಕ್ಕೆ ಆಗ್ರಹ: ‘ರೈತರು ಸಾಲ ಮಾಡಿ ಮುಂಗಾರು ಬಿತ್ತನೆ ಪೂರ್ಣಗೊಳಿಸಿದ್ದಾರೆ. ಪ್ರಸಕ್ತ ವರ್ಷ ಸುರಿದ ಧಾರಾಕಾರ ಮಳೆಯಿಂದ ಬೆಳೆ ಹಾನಿಗೀಡಾಗಿ ಸಂಕಷ್ಟಕ್ಕೆ ಸಿಲುಕಿದ ರೈತರ ನೆರವಿಗೆ ರಾಜ್ಯ ಸರ್ಕಾರ ಮುಂದಾಗಬೇಕು’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ವಿಶ್ವಾರಾಧ್ಯ ಬಡಿಗೇರ ಗಂವ್ಹಾರ ಒತ್ತಾಯಿಸಿದ್ದಾರೆ.

ಮಳೆ ಹಾನಿ ವರದಿ: ‘ಮಳೆಯಿಂದ ಜೇವರ್ಗಿ ಹೋಬಳಿಯಲ್ಲಿ 44, ನೆಲೋಗಿ– 25, ಆಂದೋಲಾ– 224 ಮನೆಗಳು ಸೇರಿ ಒಟ್ಟು 293 ಮನೆಗಳಿಗೆ ನೀರು ನುಗ್ಗಿದೆ. 331 ಮನೆಗಳು ಹಾನಿಗೀಡಾಗಿವೆ. 22,153 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ ಮುಂಗಾರು ಬೆಳೆಗಳು ಹಾನಿಗೀಡಾಗಿವೆ’ ಎಂದು ತಹಶೀಲ್ದಾರ್‌ ಸಿದರಾಯ ಭೋಸಗಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು