ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ಯಕ್ಕೆ ಚಿಂತೆ ಇಲ್ಲ, ಮುಂದೆ ಟ್ಯಾಂಕರ್ ನೀರು ತಪ್ಪಿದ್ದಲ್ಲ

ಜೇವರ್ಗಿ ಪಟ್ಟಣದಲ್ಲಿ ಪ್ರತಿ ಬೇಸಿಗೆಯಲ್ಲಿ ಜನರಿಗೆ ತಪ್ಪದ ಕುಡಿಯುವ ನೀರಿಗೆ ತಾಪತ್ರಯ
Last Updated 28 ಮಾರ್ಚ್ 2021, 5:23 IST
ಅಕ್ಷರ ಗಾತ್ರ

ಜೇವರ್ಗಿ: ಸುಮಾರು 47 ಸಾವಿರ ಜನಸಂಖ್ಯೆ ಹೊಂದಿರುವ ಜೇವರ್ಗಿ ಪಟ್ಟಣಕ್ಕೆ ಇಂದಿಗೂ ಬೇಸಿಗೆಯಲ್ಲಿ ನೀರಿಗಾಗಿ ತಾಪತ್ರಯ, ಅಲೆದಾಡ ತಪ್ಪಿಲ್ಲ. ಈ ಬಾರಿ ನೆರೆ ಬಂದು ಭೀಮಾ ನದಿಯಲ್ಲಿ ಕಳೆದ ಸಾಲಿಗಿಂತ ಹೆಚ್ಚು ನೀರಿನ ಸಂಗ್ರಹವಿದ್ದರೂ ಏಪ್ರಿಲ್, ಮೇ ತಿಂಗಳಲ್ಲಿ ನೀರಿನ ಕೊರತೆಯಾಗಬಹುದು ಎಂಬ ಚಿಂತೆ ಪುರಸಭೆಯನ್ನು ಕಾಡುತ್ತಿದೆ.

ಸದ್ಯಕ್ಕೆ ಪಟ್ಟಣದಲ್ಲಿ ವಾರದಲ್ಲಿ ಎರಡು ಬಾರಿ ನೀರು ಪೂರೈಕೆಯಾಗುತ್ತಿದೆ. ಏಪ್ರಿಲ್‌ ಎರಡನೇ ವಾರದ ಬಳಿಕ ಬಿಸಿಲಿನ ಪ್ರಮಾಣ ಹೆಚ್ಚಾದರೆ ನದಿಯಲ್ಲಿನ ನೀರು ಆವಿಯಾಗಿ ನೀರಿನ ಸಂಗ್ರಹ ಕಡಿಮೆಯಾದರೆ ಟ್ಯಾಂಕರ್‌ ನೀರಿನ ಮೊರೆ ಹೋಗಬೇಕಾಗುತ್ತದೆ. ‍ಪಟ್ಟಣಕ್ಕೆ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಹೋಗಲಾಡಿಸಲು ಸಣ್ಣ ನೀರಾವರಿ ಇಲಾಖೆಯು ಕಟ್ಟಿಸಂಗಾವಿ ಗ್ರಾಮದಿಂದ ಕೊಂಚ ದೂರದ ಭೀಮಾ ನದಿಗೆ ಅಡ್ಡಲಾಗಿ ವೆಂಟೆಡ್‌ ಬ್ಯಾರೇಜ್ ನಿರ್ಮಿಸಿದೆ. ಅದರ ಮಧ್ಯಭಾಗದಲ್ಲಿ ಅಳವಡಿಸಿರುವ ಗೇಟ್‌ ಬಂದ್‌ ಮಾಡಿದರೆ ನೀರಿನ ಸಂಗ್ರಹ ಹೆಚ್ಚಾಗಿ ಜೇವರ್ಗಿಗೆ ನೀರು ಪೂರೈಸಬಹುದು. ಆದರೆ, ಕಾಮಗಾರಿ ಇನ್ನೂ ನಡೆಯುತ್ತಲೇ ಇದ್ದು, ಪ್ರಸ್ತುತ ಇರುವ ಐದು ಅಡಿಯಿಂದ ಆ ಬ್ಯಾರೇಜನ್ನು 10ರಿಂದ 15 ಅಡಿಗೆ ಏರಿಸಬೇಕು ಎಂಬ ಯೋಜನೆಯೂ ಇದೆ ಎನ್ನುತ್ತಾರೆ ಪುರಸಭೆಯ ಅಧಿಕಾರಿಯೊಬ್ಬರು.

ಬಿಸಿಲಿನ ಪ್ರಮಾಣ ಹೆಚ್ಚಾದಂತೆ ನದಿಯಲ್ಲಿನ ನೀರು ಕಡಿಮೆಯಾಗುವುದರಿಂದ ಜೇವರ್ಗಿಗೆ ಎರಡು ದಿನಗಳ ಬದಲು ಐದಾರು ದಿನಗಳಿಗೊಮ್ಮೆ ನೀರು ಪೂರೈಸುವ ಪರಿಸ್ಥಿತಿ ಬರಬಹುದು ಎಂಬ ಆತಂಕವನ್ನು ಪಟ್ಟಣದ ನಿವಾಸಿಗಳು ವ್ಯಕ್ತಪಡಿಸುತ್ತಾರೆ.

ಮಳೆ ನೀರು ಬಂದ ಹೊಸದರಲ್ಲಿ ಕುಡಿಯುವ ನೀರು ಬಸ್ ಡಿಪೊದ ಬಳಿ ಶುದ್ಧೀಕರಣ ಮಾಡಿದರೂ ಕೆಂಪು ನೀರು ಬರುತ್ತದೆ. ಹೀಗಾಗಿ ಶುದ್ಧೀಕರಣ ಘಟಕದ ಸಾಮರ್ಥ್ಯವನ್ನು ಹೆಚ್ಚು ಮಾಡಬೇಕು. ಎಷ್ಟೋ ಬಾರಿ ಕಲುಷಿತ ನೀರು ಬಂದಿರುವ ಉದಾಹರಣೆಗಳೂ ಇವೆ ಎನ್ನುತ್ತಾರೆ ಪಟ್ಟಣದ ನಿವಾಸಿ ಮಲ್ಲನಗೌಡ ಬಿರಾದಾರ.

ಜೇವರ್ಗಿ ಪಟ್ಟಣವು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಅಗತ್ಯಕ್ಕೆ ತಕ್ಕಂತೆ ನೀರಿನ ಪೂರೈಕೆ ಜಾಲವನ್ನು ವಿಸ್ತರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಹೊಸ ಬಡಾವಣೆಗಳಿಗೆ ಸಮರ್ಪಕ ನೀರಿನ ಪೂರೈಕೆ ಸಾಧ್ಯವಾಗುತ್ತಿಲ್ಲ. ಉಳ್ಳವರು ನೂರಾರು ರೂಪಾಯಿ ಖರ್ಚು ಮಾಡಿ ಟ್ಯಾಂಕರ್‌ ನೀರು ಹಾಕಿಸಿಕೊಳ್ಳುತ್ತಾರೆ. ಇಲ್ಲದವರು ಬೋರ್‌ವೆಲ್ ನೀರನ್ನು ಪಡೆಯಲು ಅಲೆದಾಡಬೇಕಿದೆ ಎನ್ನುತ್ತಾರೆ ಚಂದ್ರಶೇಖರ ಮಲ್ಲಾಬಾದ.

* ಹತ್ತು ವರ್ಷಗಳ ಹಿಂದೆ ನೀರು ಶುದ್ಧೀಕರಣ ಘಟಕ ನಿರ್ಮಾಣವಾಗಿದೆ. ಆದರೆ, ಅದು ನಿರ್ವಹಣೆ ಇಲ್ಲದ್ದರಿಂದ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ, ಕೆಲವೊಮ್ಮೆ ಕಲುಷಿತ ನೀರೂ ಪೂರೈಕೆಯಾಗುತ್ತದೆ

-ರಾಮನಾಥ ಭಂಡಾರಿ, ಜೇವರ್ಗಿ ನಿವಾಸಿ

* ಜೇವರ್ಗಿ ಪಟ್ಟಣದಲ್ಲಿ ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ. ಸಮಸ್ಯೆ ಎದುರಾದರೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕುಡಿಯುವ ನೀರು ಪೂರೈಕೆಗಾಗಿ ಅನುದಾನವನ್ನೂ ಒದಗಿಸುತ್ತೇನೆ
- ಡಾ. ಅಜಯ್ ಸಿಂಗ್, ಜೇವರ್ಗಿ ಶಾಸಕ

ಜೇವರ್ಗಿ ಪಟ್ಟಣದಲ್ಲಿ ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ. ಕಳೆದ ಬಾರಿ ಉತ್ತಮ ಮಳೆಯಾಗಿರುವುದರಿಂದ ಭೀಮಾ ನದಿಯಲ್ಲಿ ಸಾಕಷ್ಟು ನೀರಿದೆ. ಏಪ್ರಿಲ್, ಮೇ ತಿಂಗಳುಗಳಲ್ಲಿ ನೀರಿನ ಕೊರತೆ ಆಗಲಿಕ್ಕಿಲ್ಲ

ಶರಣಯ್ಯ ಸ್ವಾಮಿ, ಪುರಸಭೆ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT